ಭಾರತಕ್ಕೆ ಆಗಮಿಸುವ ಮುನ್ನ ಟ್ರಂಪ್ ಅಸಮಾಧಾನ! ಭಾರತದ ಜತೆಗೆ ವ್ಯಾಪಾರ ಒಪ್ಪಂದದಲ್ಲಿ ಟ್ರಂಪ್ ಪ್ಲಾನ್ ಏನು?

ಡಿಜಿಟಲ್ ಕನ್ನಡ ಟೀಮ್:

ಇದೇ ತಿಂಗಳು 24 ಹಾಗೂ 25ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಭಾರತ ಪ್ರವಾಸ ಮಾಡುತ್ತಿದ್ದು, ಈ ವೇಳೆ ಭಾರತ ಹಾಗೂ ಅಮೆರಿಕ ನಡುವೆ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಗಳಿದ್ದವು. ಆದರೆ ಈ ನಿರೀಕ್ಷೆಗಳು ಹುಸಿಯಾಗುವ ಲಕ್ಷಣ ಗೋಚರಿಸಿದೆ.

ಹೌದು, ಭಾರತ ಪ್ರವಾಸಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ವ್ಯಾಪಾರ ಒಪ್ಪಂದ ವಿಚಾರದಲ್ಲಿ ಭಾರತ ನಮ್ಮನ್ನು ಉತ್ತಮವಾಗಿ ನಡೆಸಿಕೊಂಡಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ಉತ್ತಮವಾಗಿದೆ. ಹೀಗಾಗಿ, ಭಾರತಕ್ಕೆ ಬರಲು ಉತ್ಸುಕನಾಗಿದ್ದೇನೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಇದರ ಜತೆಗೆ ಭಾರತದ ಜತೆಗಿನ ದೊಡ್ಡ ಒಪ್ಪಂದಗಳನ್ನು ಮುಂದಿನ ದಿನಗಳಿಗಾಗಿ ಉಳಿಸಿಕೊಳ್ಳಲಿದ್ದು, ಈ ಒಪ್ಪಂದಗಳು ಅಧ್ಯಕ್ಷೀಯ ಚುನಾವಣೆಗೂ ಮುನ್ನ ನಡೆಯುತ್ತದೆಯೋ ಅಥವಾ ನಂತರ ನಡೆಯುತ್ತದೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

‘ನಾವು ಭಾರತದ ಜತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬಹುದು. ಭಾರತದ ಜತೆ ದೊಡ್ಡ ವ್ಯಾಪಾರ ಒಪ್ಪಂದವೇ ನಡೆಯಲಿದೆ. ಆದರೆ ನಾನು ಈ ಒಪ್ಪಂದಗಳನ್ನು ಮುಂದಿನ ದಿನಗಳಿಗಾಗಿ ಉಳಿಸಿಕೊಳ್ಳುತ್ತೇನೆ’ ಎಂದಿದ್ದಾರೆ.

ಒಂದೆಡೆ ಚೀನಾ ಜತೆಗೆ ಸುಂಕ ಸಮರದಿಂದ ವ್ಯಾಪಾರ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಅಮೆರಿಕ ಸದ್ಯ ಭಾರತದ ಮಾರುಕಟ್ಟೆಯತ್ತ ಕಣ್ಣಿಟ್ಟಿದೆ. ಇನ್ನು ಕೆಲವು ಮಾಧ್ಯಮಗಳ ಪ್ರಕಾರ ಭಾರತವು ಅಮೆರಿಕ ನಡುವೆ ಹಾಲು ಉತ್ಪನ್ನಗಳನ್ನು ಮದು ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ವರದಿ ಪ್ರಕಟಿಸಿದ್ದು, ಇದು ಸಹಜವಾಗಿ ಭಾರತೀಯ ಹಾಲು ಉತ್ತನ್ನ ಕಂಪನಿಗಳು ಅಥವಾ ಡೈರಿಗಳಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ.

 ಇನ್ನು ಚುನಾವಣೆ ಸಂದರ್ಭದಲ್ಲಿ ಭಾರತದ ಜತೆಗೆ ವ್ಯಾಪಾರ ಒಪ್ಪಂದವನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಟ್ರಂಪ್ ಯೋಜನೆ ರೂಪಿಸಿದ್ದಾರಾ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಎಚ್1ಬಿ ವೀಸಾ ನಿಯಮ ಕಠಿಣ ಸೇರಿದಂತೆ ಅನೇಕ ನಿರ್ಧಾರಗಳು ಭಾರತೀಯರಿಗೆ ದೊಡ್ಡ ಹಿನ್ನೆಡೆಯಾಗಿದ್ದು, ಇದು ಭಾರತೀಯ ಅಮೆರಿಕನ್ನರಿಗೆ ಅಸಮಾಧಾನ ತಂದಿದೆ. ಹೀಗಾಗಿ ಭಾರತದ ಜತೆಗಿನ ವ್ಯಾಪಾರ ಒಪ್ಪಂದದ ಮೂಲಕ ಈ ಸಮುದಾಯ ಮನ ಗೆಲ್ಲುವ ತಂತ್ರ ನಡೆಸುತ್ತಿರುವ ಸಾಧ್ಯತೆಗಳಿವೆ.

Leave a Reply