ಅಮೂಲ್ಯರಂತಹ ಎಡಬಿಡಂಗಿಗಳಿಗೆ ವೇದಿಕೆ, ಮೈಕು ಕೊಟ್ರೆ ಇನ್ನೇನಾಗುತ್ತೆ!

ಡಿಜಿಟಲ್ ಕನ್ನಡ ಟೀಮ್:

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಇಂದು ಫ್ರೀಡಂ ಪಾರ್ಕ್ ನಲ್ಲಿ ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಆಯೋಜಿಸಲಾಗಿದ್ದ ಪ್ರತಿಭಟನೆ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವ ಮೂಲಕ ಅಮೂಲ್ಯ ಲಿಯೋನ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈಕೆಯನ್ನು ಪೊಲೀಸರು ಬಂಧಿಸಿದ್ದು, ದೇಶದ್ರೋಹ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕೇಂದ್ರ ಸರ್ಕಾರದ ನೀತಿ ವಿರುದ್ಧದ ಪ್ರತಿಭಟನೆಯಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದರೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಕನಿಷ್ಠ ಜ್ಞಾನವೂ ಇಲ್ಲದ ಅಮೂಲ್ಯರಂತಹವರಿಗೆ ಮೈಕ್ ಕೊಟ್ಟ ಪ್ರತಿಭಟನೆ ಸಂಘಟಕರು ಹಾಗೂ ವೇದಿಕೆ ಹಂಚಿಕೊಂಡಿದ್ದ ಎಐಎಂಎಂ ಅಧ್ಯಕ್ಷ ಅಸಾವುದ್ದೀನ್ ಓವೈಸಿ ಕೂಡ ಈಕೆಯ ಹೇಳಿಕೆ ಕೇಳಿ ಕ್ಷಣ ಕಾಲ ಪತರುಗುಟ್ಟಿಹೋದರು.

ಈಕೆ ಮಾಡಿರುವ ಒಂದು ಎಡವಟ್ಟು ಈಗ ಸಿಎಎ ವಿರುದ್ಧದ ಅಷ್ಟೂ ಪ್ರತಿಭಟನೆಗಳನ್ನು ದೇಶ ವಿರೋಧಿ ಎಂದು ಬಿಂಬಿಸಲು ವೇದಿಕೆ ಮಾಡಿ ಕೊಟ್ಟಿದೆ. ಈಕೆ ಕೊಟ್ಟ ಹೇಳಿಕೆಯಿಂದ ಬೆಚ್ಚಿಬಿದ್ದ ಓವೈಸಿ ಮತ್ತೆ ಮೈಕ್ ಹಿಡಿದು, ನಾವು ಈ ಹೇಳಿಕೆ ಸಮರ್ಥಿಸಿಕೊಳ್ಳುವುದಿಲ್ಲ. ನಾವು ಪಾಕಿಸ್ತಾನವನ್ನು ವಿರೋಧಿಸುತ್ತೇವೆ. ನಮ್ಮ ಪಕ್ಷಕ್ಕೂ ಪಾಕಿಸ್ತಾನಕ್ಕೂ ಸಂಬಂಧ ಇಲ್ಲ ಎಂದು ಸಮಜಾಯಿಷಿ ಮಾಡಿಕೊಳ್ಳುವಂತಾಯಿತು.

ಈಕೆ ಪಾಕಿಸ್ತಾನಕ್ಕೆ ಜೈಕಾರ ಹಾಕಿರುವುದನ್ನು ಸ್ವತಃ ಆಕೆಯ ಪೋಷಕರು ಖಂಡಿಸಿದ್ದು, ಆಕೆ ತಪ್ಪು ಮಾಡಿದ್ದಾಳೆ. ಆಕೆಗೆ ಪಾಠ ಕಲಿಯಬೇಕು. ನಾವು ಎಷ್ಟೇ ಹೇಳಿದರೂ ನಮ್ಮ ಮಾತು ಕೇಳಿಲ್ಲ. ಅವಳಿಗೆ ಪೊಲೀಸರೇ ನಾಲ್ಕು ಬಾರಿಸಲಿ ಎಂದು ಹೇಳಿರುವ ವಿಡಿಯೋ ಪ್ರಸಾರವಾಗುತ್ತಿದೆ.

ವೇದಿಕೆ ಸಿಕ್ಕಿದೆ, ಯಾವ ವಿಚಾರವಾಗಿ ಮಾತನಾಡಬೇಕು, ನಮ್ಮ ಮಾತುಗಳ ಅರ್ಥ ಏನು? ಅದರ ಪರಿಣಾಮ ಏನಾಗಲಿದೆ ಎಂಬ ಕನಿಷ್ಠ ಜ್ಞಾನವು ಇಲ್ಲದೆ ಮೈಕ್ ಸಿಕ್ಕಿದ್ದೇ ತಡ ಬಾಯಲ್ಲೇ ಕೆಂಡ ಕಾರಿದರೆ ತಾನು ದೊಡ್ಡ ವ್ಯಕ್ತಿಯಾಗುತ್ತೇನೆ ಎಂಬ ಭ್ರಮೆ ಆಕೆಯ ಎಡವಟ್ಟಿಗೆ ಕಾರಣವಾಗಿದೆ.

ದೇಶದ ವಿರೋಧಿ ಹೇಳಿಕೆ ನೀಡಿ ಉದ್ಧಟತನ ಮೆರೆದಿರುವ ಈಕೆಗೆ ಕಠಿಣ ಶಿಕ್ಷೆಯಾಗದಿದ್ದರೆ, ವಿವಾದದಿಂದ ಹೆಸರು ಮಾಡುವ ಎಡಬಿಡಂಗಿಗಳು ಮುಂದೆ ಇನ್ನಷ್ಟು ಮಂದಿ ಹುಟ್ಟುಕೊಳ್ಳುತ್ತಾರೆ. ಹೀಗಾಗಿ ಈಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ.

Leave a Reply