ಏಳು ತಿಂಗಳ ಬಿಎಸ್ ವೈ ಸರ್ಕಾರದಲ್ಲಿ ಒಂದೇ ಒಂದು ಕಾರ್ಯಕ್ರಮ ಇಲ್ಲ: ಸಿದ್ದರಾಮಯ್ಯ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್:

ಕೇಂದ್ರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರಿಗೆ 4 ಸಾವಿರ ಕೊಡುವುದಾಗಿ ಮಾಡಿರುವ ಘೋಷಣೆ ಹೊರತುಪಡಿಸಿ ಕಳೆದ ಏಳು ತಿಂಗಳ ಬಿಜೆಪಿ ಸರ್ಕಾರದಲ್ಲಿ ಯಾವುದೇ ಕಾರ್ಯಕ್ರಮ ಬಂದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ರಾಜ್ಯ ವಿಧಾನ ಮಂಡಲದ ಮೊದಲ ಚರಣದ ಕಲಾಪದ ಕಡೆಯ ದಿನ ರಾಜ್ಯಪಾಲರ ಭಾಷಣದ ಮೇಲೆ ಗುರುವಾರ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯಪಾಲರ ಭಾಷಣದಲ್ಲಿ ಕಾಂಗ್ರೆಸ್ ನ ಐದು ವರ್ಷಗಳ ಹಾಗೂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಕಾರ್ಯಕ್ರಮಗಳನ್ನೇ ತಮ್ಮ ಸಾಧನೆ ಎಂದು ಹೇಳಿಕೊಳ್ಳಲಾಗಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಅರಣ್ಯ ಪ್ರದೇಶದ ಹೆಚ್ಚಳ ತಮ್ಮ ಸಾಧನೆ ಎಂದು ಬಿಜೆಪಿ ಹೇಳಿಕೊಂಡಿದೆ. ಈ ಸಾಧನೆಯನ್ನು ಕಳೆದ ಆರು ತಿಂಗಳಲ್ಲಿ ಮಾಡಿದ್ದಾರೆಯೇ? ಇಲ್ಲ 2015, 16, 17ನೆ ಸಾಲಿನಲ್ಲಿ ನಮ್ಮ ಸರ್ಕಾರ ತೆಗೆದುಕೊಂಡ ನಿರ್ಧಾರಗಳಿಂದ ಈ ಸಾಧನೆ ಆಗಿದೆ ಎಂದರು.

ಹೈನುಗಾರಿಕೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ನಾವು ಮೊದಲ ಸ್ಥಾನಕ್ಕೆ ಸಾಗಬೇಕು ಎಂಬ ಗುರಿಯಿಂದ ನಮ್ಮ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ನಿತ್ಯ 4 ಕೋಟಿ ರೂಪಾಯಿ ಸಬ್ಸಿಡಿ ಹಣ ನೀಡಲಾಗುತ್ತಿತ್ತು. ಆದ್ರೆ ಈ ಸರ್ಕಾರ ಹೆಚ್ಚಿನ ಸಬ್ಸಿಡಿ ನೀಡುತ್ತಿಲ್ಲ ಎಂದರು.

ಸಹಕಾರಿ ಬ್ಯಾಂಕ್ ಗಳ 1 ಲಕ್ಷದವರೆಗಿನ ರೈತರ ಸಾಲ ಮನ್ನಾ, ರಾಷ್ಟ್ರೀಕೃತ ಬ್ಯಾಂಕ್ ಗಳ 2 ಲಕ್ಷವರೆಗಿನ ಸಾಲ ಮನ್ನಾ ಮಾಡಿರುವುದು ಸಮ್ಮಿಶ್ರ ಸರ್ಕಾರವೇ ಹೊರತು ಬಿಜೆಪಿ ಸರ್ಕಾರ ಅಲ್ಲ ಎಂದರು.

ರಾಜ್ಯದಲ್ಲಿ ಭೀಕರ ಪ್ರವಾಹವಾದಾಗ ರಾಜ್ಯದ 25 ಶಾಸಕರು ಒಟ್ಟಾಗಿ ನಮ್ಮ ರಾಜ್ಯಕ್ಕೆ ಹೆಚ್ಚಿನ ನೆರವು ನೀಡಿ ಎಂದು ಒಂದು ದಿನವಾದರೂ ಕೇಳಿದ್ದೀರಾ? ಇದು ರಾಜ್ಯಕ್ಕೆ ಆಗಿರುವ ಅನ್ಯಾಯ ಅಲ್ಲವೇ? ನಾವು ವಿರೋಧ ಪಕ್ಷವಾಗಿ ಇದನ್ನು ಕೇಳುತ್ತಿಲ್ಲ. ರಾಜ್ಯದ ವಿಚಾರ ಬಂದಾಗ ಎಲ್ಲರೂ ಒಂದಾಗಿ ಶ್ರಮಿಸಬೇಕು ಎಂದರು.

ಇನ್ನು ತೆರಿಗೆ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ 17 ಸಾವಿರ ಕೋಟಿ ಪಾಲು ಕಡಿಮೆ ಆಗಿದೆ. ಇದು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಅಲ್ಲವೇ? ಎಂದು ಪ್ರಶ್ನಿಸಿದರು.

Leave a Reply