ಡಿಜಿಟಲ್ ಕನ್ನಡ ಟೀಮ್:
ರಾಜ್ಯ ಕಾಂಗ್ರೆಸ್ ಆಯ್ಕೆ ಪೈಪೋಟಿ ಹಾಗೂ ವಿಳಂಬ, ಮಧ್ಯ ಪ್ರದೇಶ ಕಾಂಗ್ರೆಸ್ ಭಿನ್ನಮತ ಮಾತ್ರವಲ್ಲದೇ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಇತರೆ ನಾಯಕರ ಅಸಮಾಧಾನ ಪಕ್ಷದಲ್ಲಿ ಎಲ್ಲವೂ ಗೊಂದಲಮಯವಾಗಿದೆ ಎಂಬುದನ್ನು ಸ್ಪಷ್ಟ ಪಡಿಸುತ್ತಿದೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ನೀಡಿ ಎರಡೂವರೆ ತಿಂಗಳಾಗುತ್ತಿದ್ದು, ರಾಜೀನಾಮೆಯನ್ನು ಅಂಗೀಕರಸದೇ ನೂತನ ಅಧ್ಯಕ್ಷರನ್ನು ಪ್ರಕಟಿಸದೇ ವಿಳಂಬ ನೀತಿ ಅನುಸರಿಸುತ್ತಿದೆ.
ಇನ್ನು ಮಧ್ಯ ಪ್ರದೇಶದಲ್ಲಿ ಕಮಲ್ ನಾಥ್ ಹಾಗೂ ಜ್ಯೋತಿರಾದಿತ್ಯ ಶಿಂದ್ಯಾ ನಡುವಣ ತಿಕ್ಕಾಟ ಜೋರಾಗಿದ್ದು, ಇದನ್ನು ಬಗೆಹರಿಸಲು ಹೈಕಮಾಂಡ್ ನಾಯಕರು ಪ್ರಯತ್ನಿಸುತ್ತಲೇ ಇದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿ ನಂತರ ಸೋನಿಯಾ ಗಾಂಧಿ ಅವರೇ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ ಈಗ ನೂತನ ಅಧ್ಯಕ್ಷರ ಆಯ್ಕೆ ಮಾಡುವ ಕುರಿತು ಚರ್ಚೆ ಶುರುವಾಗಿದ್ದು, ರಾಹುಲ್ ಈ ವಿಚಾರದಲ್ಲಿ ಹಾಗೂ ಇತರೆ ಪ್ರಮುಖ ನಾಯಕರ ಮೌನ ಇತರೆ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಿರುವ ಶಶಿ ತರೂರ್, ಸದ್ಯ ಖಾಲಿ ಇರುವ ಪಕ್ಷದ ಸಾರಥ್ಯಕ್ಕೆ ಚುನಾವಣೆ ಮೂಲಕ ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮತ್ತೆ ಈ ಹುದ್ದೆ ಅಲಂಕರಿಸುವ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಪಕ್ಷದ ಮುಂದಾಳತ್ವದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಇತ್ತೀಚಿನ ದೆಹಲಿ ಚುನಾವಣೆಯಲ್ಲಿ ಪಕ್ಷ ಶೂನ್ಯ ಸಾಧನೆ ಮಾಡುವಂತಾಯಿತು.
ಹೀಗೆ ರಾಜ್ಯ ಮಟ್ಟಗಳಲ್ಲಿ ಹಾಗೂ ಕೇಂದ್ರ ಮಟ್ಟದಲ್ಲಿ ಪಕ್ಷದೊಳಗಿನ ಗೊಂದಲ ಹಾಗೂ ಸಮಸ್ಯೆಗಳು ಪಕ್ಷದ ಸಂಘಟನೆ ಮೇಲೆ ದೊಡ್ಡ ಪರಿಣಾಮ ಬೀರುತ್ತಿದ್ದು, ಈ ಸಮಸ್ಯೆಗಳು ಯಾವಾಗ ಬಗೆಹರಿಯುತ್ತದೆ ಎಂದು ಕಾರ್ಯಕರ್ತರು ಕಾಯುತ್ತಿದ್ದಾರೆ.