ಮಹಾರಾಷ್ಟ್ರದಲ್ಲಿ ಬದಲಾಗ್ತಿದೆಯಾ ರಾಜಕೀಯ ಲೆಕ್ಕಾಚಾರ..?

ಡಿಜಿಟಲ್ ಕನ್ನಡ ಟೀಮ್:

ಕೆಲ ತಿಂಗಳ ಹಿಂದೆ ನಡೆದ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ ಸಿಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಮಯ ಬದಲಾದಂತೆ ಈಗ ರಾಜಕೀಯ ಲೆಕ್ಕಾಚಾರಗಳೂ ಬದಲಾಗುವ ಲಕ್ಷಣ ತೋರುತ್ತಿದೆ.

ಸಿಎಎ ಹಾಗೂ ಎನ್ ಪಿಆರ್ ವಿಚಾರ ಸೇರಿದಂತೆ ಅನೇಕ ವಿಚಾರಗಳಲ್ಲಿ ಮೂರು ಮೈತ್ರಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಹಾಗೂ ಅಸಮಾಧಾನ ಬಹಿರಂಗ ಹೇಳಿಕೆಗಳ ಮೂಲಕ ವ್ಯಕ್ತವಾಗುತ್ತಿದೆ. ಈ ಮಧ್ಯೆ ಸಿಎಂ ಉದ್ಧವ್ ಠಾಕ್ರೆ ಹಾಗೂ ಪ್ರಧಾನಿ ನಿನ್ನೆ ಭೇಟಿ ಮಾಡಿ ಸಿಎಎಗೆ ಬೆಂಬಲ ಸೂಚಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಮತ್ತೆ ಬಿಜೆಪಿ ಮತ್ತು ಶಿವಸೇನೆ ನಡುವೆ ಒಲವು ಚಿಗುರೊಡೆಯುತ್ತಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ದೇಶದಲ್ಲಿ ಜಾರಿಯಾಗುವ ಕಾಲ ಸನಿಹವಾಗುತ್ತಿದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ರಾಜ್ಯಗಳಲ್ಲಿ ಜಾರಿಯಾಗಬೇಕಿದೆ. ಆದರೂ ದೇಶಾದ್ಯಂತ ಮುಸ್ಲಿಂ ಸಂಘಟನೆಗಳ ಜೊತೆಗೆ ಹಲವು ಇತರೆ ಸಂಘಟನೆಗಳು ಕಾಯ್ದೆಯನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಿಎಎ ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರದ ನಡುವೆ ಬಿರುಕು ಮೂಡಿಸಿದೆ. ಮಹಾರಾಷ್ಟ್ರದಲ್ಲಿ ಬದ್ಧ ವೈರಿಗಳಾಗಿ ಹೋರಾಟ ಮಾಡಿಕೊಂಡು ಬಂದಿದ್ದ ಕಾಂಗ್ರೆಸ್‌ ಹಾಗು ಎನ್‌ಸಿಪಿ ಜೊತೆ ಸೇರಿ ಅಧಿಕಾರ ಹಿಡಿದಿದ್ದ ಶಿವಸೇನೆ ಮತ್ತೆ ಬಿಜೆಪಿ ಸಖ್ಯವನ್ನು ಬಯಸಿದಂತಿದೆ.

ಮೇ 1 ರಿಂದ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡುವ ನಿರ್ಧಾರ ಪ್ರಕಟ ಮಾಡುತ್ತಿದ್ದ ಹಾಗೆ ಮಹಾ ವಿಕಾಸ್‌ ಅಘಡಿ ಮೈತ್ರಿಕೂಟ ಸಭೆ ನಡೆಸದೆ ಅಂತಿಮ ನಿರ್ಧಾರ ಘೋಷಣೆ ಮಾಡಬಾರದು ಎಂದು ಕಾಂಗ್ರೆಸ್‌ ಹಾಗು ಎನ್‌ಸಿಪಿ ಆಗ್ರಹ ಮಾಡಿದ್ದವು. ಇದರ ಬೆನ್ನಲ್ಲೇ ಸಿಎಂ ಉದ್ಧವ್‌ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಂಡನೆ ಮಾಡಿದ ವೇಳೆ ಸದನದಿಂದ ಹೊರ ಹೋಗುವ ಮೂಲಕ ಮಸೂದೆ ಅಂಗೀಕಾರಕ್ಕೆ ಸಹಕರಿಸಿದ್ದ ಶಿವಸೇನೆ ಇದೀಗ ಕಾನೂನು ಜಾರಿ ಮಾಡಲು ಮುಂದಾಗಿದೆ. ಆದರೆ ಇದೀಗ ಕಾಂಗ್ರೆಸ್‌ ಹಾಗು ಎನ್‌ಸಿಪಿ ಜೊತೆ ಅಧಿಕಾರ ಮೈತ್ರಿ ಮಾಡಿಕೊಂಡಿದ್ದರೂ ಈ ಪಕ್ಷಗಳು ವಿರೋಧಿಸುತ್ತಿರುವ ಕಾನೂನು ಜಾರಿನ ಮಾಡಲು ತುದಿಗಾಲಲ್ಲಿ ನಿಂತಿದೆ. ಒಂದು ವೇಳೆ ಕಾನೂನು ಜಾರಿ ಮಾಡುವಾಗ ಮೈತ್ರಿ ಮುರಿದು ಬಿದ್ದರೆ, ಎನ್ನುವ ಆತಂಕದಲ್ಲಿರುವ ಶಿವಸೇನೆ, ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿರುವ ಉದ್ಧವ್‌ ಠಾಕ್ರೆ, ಮಗ ಆದಿತ್ಯ ಠಾಕ್ರೆ ಜೊತೆ ಪ್ರಧಾನಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಪ್ರಧಾನಿ ಭೇಟಿ ಬಳಿಕ ಮಾತನಾಡಿದ ಉದ್ಧವ್‌ ಠಾಕ್ರೆ, ಸಿಎಎ ಹಾಗು ಎನ್‌ಸಿಆರ್‌, ಎನ್‌ಪಿಆರ್‌ನಿಂದ ಯಾವುದೇ ಸಮಸ್ಯೆ ಇಲ್ಲ. ನಮ್ಮ ದೇಶದ ಯಾರಿಗೂ ಇದರಿಂದ ತೊಂದರೆ ಆಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೂ ಸಿಎಎ ಬಗ್ಗೆ ಚರ್ಚೆ ನಡೆಸಿದ್ದೇನೆ. ಯಾರೂ ಕೂಡ ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆದರುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಜೊತೆಗೆ ಮಹಾರಾಷ್ಟ್ರದ ಮೈತ್ರಿಕೂಟದಲ್ಲಿ ಯಾವುದೇ ಭಿನ್ನಮತ ಇಲ್ಲ. ನಮ್ಮ ಸರ್ಕಾರ 5 ವರ್ಷ ಪೂರ್ಣ ಮಾಡಲಿದೆ. ಅಭಿವೃದ್ಧಿ ಬಗ್ಗೆ ಪ್ರಧಾನಿ ಜೊತೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.

Leave a Reply