ಸಿಎಎ ಕೇವಲ ಕಾಂಗ್ರೆಸ್ ವಿಚಾರವಲ್ಲ ದೇಶದ ವಿಚಾರ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರ ಕೇವಲ ಕಾಂಗ್ರೆಸ್ ಗೆ ಮಾತ್ರ ಸೀಮಿತವಾಗಿದ್ದಲ್ಲ. ಇದು ದೇಶಕ್ಕೆ ಸಂಬಂಧಿಸಿದ ವಿಚಾರ. ಬಿಜೆಪಿಯವರಿಗೆ ಕಾಂಗ್ರೆಸ್ ಮಾತ್ರ ಕಾಣುತ್ತಿದ್ದು ಹೀಗಾಗಿ ಎಲ್ಲ ವಿಚಾರದಲ್ಲೂ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಸಿಎಎ ವಿರೋಧ ಪ್ರತಿಭಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು ಕಾರಣ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಸಂಬಂಧಿಸಿದಂತೆ ಭಾನುವಾರ ತಮ್ಮ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಎಎ ಕುರಿತ ವಿಚಾರವನ್ನು ಕಾಂಗ್ರೆಸ್ ಜನರಿಗೆ ಬಿಟ್ಟಿದೆ. ಇದನ್ನು ವಿರೋಧಿಸುತ್ತಿರುವವರು ತಮ್ಮದೇ ಆದ ರೀತಿಯಲ್ಲಿ ವಿರೋಧ ಮಾಡುತ್ತಿದ್ದಾರೆ. ಈ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಬೇರೆ ಬೇರೆ ರಾಷ್ಟ್ರಗಳೂ ಇದನ್ನು ಗಮನಿಸುತ್ತಿವೆ. ಈ ಕಾಯ್ದೆ ಜಾರಿ ನಂತರ ಆರ್ಥಿಕ ಕಡಿತಕ್ಕೆ ಅನೇಕ ರಾಷ್ಟ್ರಗಳಲ್ಲಿ ಚಿಂತನೆ ನಡೆಯುತ್ತಿದೆ ಅಂತಾ ಕೇಂದ್ರ ಸರ್ಕಾರಕ್ಕೆ ಗೊತ್ತಾಗಿದೆ ಎಂದರು.

ಈ ಸಿಎಎ ಜಾರಿ ನಂತರ ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ನಮ್ಮ ವಿದ್ಯಾವಂತ ಯುವ ಸಮೂಹ ಅಮೆರಿಕ, ಯುರೋಪ್ ನಂತಹ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಅವರು ಆ ದೇಶದಲ್ಲಿ ಅಲ್ಪಸಂಖ್ಯಾತರು. ಈ ಕಾಯ್ದೆ ಜಾರಿ ನಂತರ ಅವರನ್ನು ಬೇರೆ ರೀತಿಯಲ್ಲಿ ಕಾಣುತ್ತಿದ್ದಾರೆ ಎಂದು ಹೇಳಿದರು.

*ಬೇರೆ ರಾಷ್ಟ್ರಗಳ ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಸರಿಯಲ್ಲ:*

ಹೌಡಿ ಮೋದಿ ಕಾರ್ಯಕ್ರಮದ ಮೂಲಕ ಅಮೆರಿಕದಲ್ಲಿ ತಮ್ಮದೇ ಆದ ಪ್ರೊಪಗಾಂಡ ಮಾಡಿದರು. ಆದರೆ ನಮ್ಮ ದೇಶದ ಪ್ರಧಾನ ಮಂತ್ರಿಯಾಗಿ ಹೋಗಿದ್ದ ನರೇಂದ್ರ ಮೋದಿ ವರು ತಮ್ಮ ಭಾಷಣದ ಅಂತ್ಯದಲ್ಲಿ ಮುಂದಿನ ಬಾರಿ ಟ್ರಂಪ್ ಸರ್ಕಾರ ಎಂದು ಹೇಳಿದ್ದು ಸರಿಯಲ್ಲ. ಅಲ್ಲಿ ಯಾವುದೇ ಪಕ್ಷದ ನಾಯಕರು ಅದ್ಯಕ್ಷರಾದರೆ ನಾವು ಅವರನ್ನು ಅಮೆರಿಕ ಅಧ್ಯಕ್ಷರನ್ನಾಗಿ ನೋಡುತ್ತೇವೆ. ನಮ್ಮಲ್ಲಿ ಯಾವುದೇ ಪಕ್ಷದ ನಾಯಕರು ಪ್ರಧಾನಿಯಾದರೆ ಅವರು ಭಾರತದ ಪ್ರಧಾನಿಯಾಗಿ ನೋಡುತ್ತಾರೆ. ಹೀಗಾಗಿ ಒಂದು ದೇಶದ ಪ್ರಧಾನಿಯಾಗಿ ಮತ್ತೊಂದು ದೇಶದ ರಾಜಕೀಯದಲ್ಲಿ ಪರವಾಗಿ ಮಾತನಾಡಿ ಹಸ್ತಕ್ಷೇಪ ಮಾಡುವುದು ನಮ್ಮ ಕರ್ತವ್ಯವಲ್ಲ. ಇದು ನಮ್ಮ ದೇಶದ ಚರಿತ್ರೆಯಲ್ಲೇ ದೊಡ್ಡ ಪೆಟ್ಟಾಗಿದೆ. ದೇಶಗಳ ನಡುವಣ ರಾಯಭಾರತ್ವ ಆಯಾ ದೇಶಗಳ ನಡುವಣ ಸಂಬಂಧ ವೃದ್ಧಿಗೆ ಇರಬೇಕೇ ಹೊರತು, ರಾಜಕೀಯ ಲಾಭಕ್ಕಾಗಿ ಅಲ್ಲ. ಆ ದೇಶದಿಂದ ನಮಗೆ ಏನು ಒಳ್ಳೆಯದಾಗುತ್ತದೆ ಎಂಬುದನ್ನು ನೋಡಬೇಕೇ ಹೊರತು. ಅವರ ಆಂತರಿಕ ರಾಜಕೀಯ ನಮಗೇಕೆ ಬೇಕು? ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ವಿಸಾ ನಿರಾಕರಿಸಿದ್ದನ್ನು ಮರೆತಿರಬೇಕು. ವೈಯಕ್ತಿಕ ಕಾರ್ಯಕ್ರಮದಲ್ಲಿ ಹೋಗಿದ್ದರೆ ಅವರು ಏನುಬೇಕಾದರೂ ಹೇಳಿಕೊಳ್ಳಲಿ, ಆದರೆ ಭಾರತದ ಪ್ರಧಾನಿಯಾಗಿ ಹೋದಾಗ ಈ ರೀತಿಯ ಪ್ರಚಾರ ಸರಿಯಲ್ಲ ಎಂದರು.

*ದೇಶ ಮೋದಲು ರಾಜಕೀಯ ಆಮೇಲೆ:*
ಅಮೂಲ್ಯ ಲಿಯೋನ ಅವರ ಪ್ರಕರಣದಲ್ಲಿ ಆಕೆಯ ಪರವಾಗಿ ನಿಲ್ಲುವ ಪ್ರಶ್ನೆಯೇ ಇಲ್ಲ. ರಾಜಕಾರಣವನ್ನು ಒಂದು ಇತಿಮಿತಿಯಲ್ಲಿ ಮಾಡಬೇಕು. ದೇಶದ ವಿಚಾರ ಬಂದಾಗ ನಾವು ದೇಶಕ್ಕೆ ಆದ್ಯತೆ ನೀಡಬೇಕು. ನಮ್ಮ ದೇಶಕ್ಕೆ ಅಪಮಾನ ಮಾಡಿ ಬೇರೆ ದೇಶಕ್ಕೆ ಜೈಕಾರ ಹಾಕುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಕೂಡ ಅದಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಆದರೆ ಆ ಹೆಣ್ಣು ಮಗಳು ಏನು ಹೇಳಲು ಹೋರಟಿದ್ದಳು ಎಂಬುದನ್ನೂ ಕೂಡ ತಿಳಿದುಕೊಳ್ಳಬೇಕು. ಆಕೆ ಈ ಹಿಂದೆ ಒಂದು ಸಿದ್ಧಾಂತದ ವಿಚಾರವಾಗಿ ಮಾತನಾಡಿರುವುದನ್ನು ನೋಡಿದ್ದೇನೆ. ಹೀಗಾಗಿ ಆಕೆ ಏನು ಹೇಳಲು ಹೋರಟಿದ್ದಳು ಎಂಬುದು ನಮಗೆ ಗೊತ್ತಿಲ್ಲ. ಈ ವಿಚಾರದಲ್ಲಿ ಆತುರಪಡುವುದು ಬೇಡ.

Leave a Reply