ನಾಲ್ವರು ಭಾರತೀಯರಿಗೆ ಕೊರೋನಾ ಸೋಂಕು; ಚೀನಾ ಜತೆಗೆ ದಕ್ಷಿಣ ಕೊರಿಯಾದಲ್ಲೂ ಹೆಚ್ಚಿದ ಪ್ರಕರಣಗಳು

ಡಿಜಿಟಲ್ ಕನ್ನಡ ಟೀಮ್:

ಜಪಾನ್ ಕಡಲತೀರದಲ್ಲಿದ್ದ ಡೈಮಂಡ್ ಪ್ರಿನ್ಸೆಸ್ ವಿಹಾರ ಹಡಗಿನಲ್ಲಿದ್ದ ನಾಲ್ವರು ಭಾರತೀಯರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ.

ಈ ಹಡಗಿನಲ್ಲಿದ್ದವರ ಪೈಕಿ 12 ಮಂದಿಗೆ ಈ ಸೋಂಕು ತಗುಲಿದ್ದು, ಅದರಲ್ಲಿ ನಾಲ್ವರು ಭಾರತೀಯರಾಗಿದ್ದಾರೆ ಎಂದು ಭಾನುವಾರ ರಾಯಭಾರಿ ಕಚೇರಿ ಮಾಹಿತಿ ನೀಡಿದೆ.

ಇನ್ನು ಚೀನಾದಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಈವರೆಗೂ 2442 ಮಂದಿ ಸತ್ತಿದ್ದಾರೆ. ಇನ್ನು ಚೀನಾ ನೆರೆ ರಾಷ್ಟ್ರ ದಕ್ಷಿಣ ಕೊರಿಯಾದಲ್ಲೂ ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದು, ಭಾನುವಾರ ಒಂದೇ ದಿನದಲ್ಲಿ 123 ಪ್ರಕರಣ ದಾಖಲಾಗಿವೆ. ಅದರೊಂದಿಗೆ ದಕ್ಷಿಣ ಕೊರಿಯಾದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ 556ಕ್ಕೆ ಏರಿಕೆಯಾಗಿದೆ. ಇನ್ನು ಈ ದೇಶದಲ್ಲಿ 4 ಮಂದಿ ಸೋಂಕಿನಿಂದ ಸತ್ತಿದ್ದಾರೆ. ಇನ್ನು ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಮೊಬೈಲ್ ತಯಾರಿಕಾ ಘಟಕದಲ್ಲಿ ಒಂದು ವೈರಸ್ ಸೋಂಕು ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೋಮವಾರದವರೆಗೂ ಈ ಘಟಕವನ್ನು ಮುಚ್ಚಲಾಗಿದೆ.

ಈ ಮಧ್ಯೆ ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡಲು ಚೀನಾದಲ್ಲಿ ವೈದ್ಯರು ಹಾಗೂ ನರ್ಸಗಳ ತಂಡ ಹಗಲಿರುಳು ನಿರಂತರ ಪರಿಶ್ರಮ ಪಡುತ್ತಿದ್ದು, ಇವರ ಕಾರ್ಯದ ಬಗ್ಗೆ ವಿಡಿಯೋ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನರ್ಸ್ ಸುದೀರ್ಘ 9 ಗಂಟೆಗಳ ಕಾಲ ಆಹಾರ ನೀರು ಇಲ್ಲದೆ ಕೆಲಸ ಮಾಡಿ ಬಳಲುತ್ತಿರುವ ಹಾಗೂ ಮತ್ತೊಂದೆಡೆ 9 ತಿಂಗಳ ತುಂಬು ಗರ್ಬಿಣಿ ನರ್ಸ್ ಕೂಡ ಚಿಕಿತ್ಸೆ ನೀಡುತ್ತಿರುವುದು ಮನ ಕಲುಕುವಂತಿದೆ.

Leave a Reply