ಭಾವನಾತ್ಮಕ ಕಲ್ಪನೆಯ ಮೇಲೆ ದೇಶ ನಿರ್ಮಾಣ; ಮೋದಿಗೆ ಮನಮೋಹನ್ ಸಿಂಗ್ ಟಾಂಗ್!

ಡಿಜಿಟಲ್ ಕನ್ನಡ ಟೀಮ್:

ಯುಪಿಎ ಸರ್ಕಾರದಲ್ಲಿ ಎರಡು ಬಾರಿ ಪ್ರಧಾನ ಮಂತ್ರಿ ಆಗಿ ಆಧಿಕಾರ ನಡೆಸಿದ್ದ ಮನಮೋಹನ್ ಸಿಂಗ್ ಅವರಿಗೆ ನಡೆದಾಡುವ ಬೊಂಬೆ ಎನ್ನುವ ಬಿರುದು ಕೊಟ್ಟಿದ್ದರು. ಎಲ್ಲಾ ನಿರ್ದೇಶನ ಬಂದ ಹಾಗೆ ಅಧಿಕಾರ ಮಾಡುತ್ತಾರೆ ಎಂದು ಬಿಜೆಪಿ ಅಣಕಿಸುತ್ತಿತ್ತು. ಇದೀಗ ಅದೇ ಮನಮೋಹನ್ ಸಿಂಗ್ ಅವರು ನರೇಂದ್ರ ಮೋದಿ ಸರ್ಕಾರವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದಲ್ಲಿ ಯುದ್ಧೋನ್ಮಾದ ಮತ್ತು ಅಪ್ಪಟ ಭಾವನಾತ್ಮಕ ಕಲ್ಪನೆಯ ಮೇಲೆ ದೇಶ ನಿರ್ಮಾಣ ಮಾಡಲು  ರಾಷ್ಟ್ರೀಯವಾದ ಮತ್ತು ಭಾರತ್‌ ಮಾತಾ ಕೀ ಜೈ‌ ಎಂಬ ಘೋಷ ವಾಕ್ಯಗಳನ್ನು ಬಳಸಿಕೊಳ್ಳಲಾಗ್ತಿದೆ ಎಂದು ಟೀಕಿಸಿದ್ದಾರೆ.

ಸ್ವಾತಂತ್ರ್ಯ ನಂತರ ಹೊಸ ಭಾರತ ನಿರ್ಮಿಸುವ ಕನಸು ಕಂಡಿದ್ದ ದಿವಂಗತ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಹಲವು ವಿಶ್ವವಿದ್ಯಾಲಯಗಳಿಗೆ, ಅಕಾಡೆಮಿಗಳಿಗೆ, ಸಾಂಸ್ಕೃತಿಕ ಸಂಸ್ಥೆಗಳಿಗೆ ಅಡಿಪಾಯ ಹಾಕಿದರು. ಆದರೆ, ಅವರು ನಿರೀಕ್ಷೆ ಮಾಡಿದ್ದ ದೇಶವಾಗಿ ಭಾರತ ಈಗ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇವತ್ತಿನ ಸಮಾಜದಲ್ಲಿ ಕೆಲ ವರ್ಗದ ಜನರು ಭಾರತದ ಇತಿಹಾಸವನ್ನೇ ತಿಳಿದುಕೊಳ್ಳದೆ ನೆಹರು ಬಗ್ಗೆ ಪೂರ್ವಾಗ್ರಹಪೀಡಿತರಾಗಿ ಕೆಟ್ಟದಾಗಿ ಮಾತನಾಡ್ತಿದ್ದಾರೆ. ಕೆಟ್ಟದಾಗಿ ಬಿಂಬಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಆದರೆ, ಇತಿಹಾಸಕ್ಕೆ ಸುಳ್ಳಗಳನ್ನು ನಿರಾಕರಿಸುವ ಶಕ್ತಿ ಇದೆ ಎಂದಿದ್ದಾರೆ.

ಪ್ರೊ. ರಾಧಾ ಕೃಷ್ಣ ಅವರು ರಚಿಸಿರುವ ’ ಹೂ ಈಸ್‌ ಭಾರತ್‌ ಮಾತಾ’ ಪುಸ್ತಕದಲ್ಲಿ ನೆಹರು ಅವರ ಆತ್ಮಚರಿತ್ರೆ ಸೇರಿದಂತೆ, ಜಗತ್ತಿನ ಸಂಕ್ಷಿಪ್ತ ಇತಿಹಾಸ, ಭಾರತದ ಅನ್ವೇಷಣೆ ಕುರಿತ ಮಾಹಿತಿ ಒಳಗೊಂಡ ಪುಸ್ತಕವನ್ನು ಮನಮೋಹನ್ ಸಿಂಗ್ ಬಿಡುಗಡೆ ಮಾಡಿದರು. ದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ಸಿಂಗ್, ಭಾರತ ಜಾಗತಿಕ‌ಮಟ್ಟದಲ್ಲಿ  ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿರುವುದರ ಹಿಂದೆ ಮತ್ತು ಜಗತ್ತಿನ ಪ್ರಮುಖ ಶಕ್ತಿಯಾಗಿ ಕಾಣುತ್ತಿರುವುದರ ಹಿಂದೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಶ್ರಮವಿದೆ. ಅವರು ನವ ಭಾರತದ ಶಿಲ್ಪಿ ಎನ್ನುವ ಮೂಲಕ ನರೇಂದ್ರ ಮೋದಿ ಬಂದ ಮೇಲೆ ಭಾರತ ವಿಶ್ವಕ್ಕೆ ಪರಿಚಯವಾಯ್ತು ಎನ್ನುವ ಜನರಿಗೆ ತಿರುಗೇಟು ನೀಡಿದ್ದಾರೆ.

ಸರ್ಜಿಕಲ್ ಸ್ಟ್ರೈಕ್, ಸಿಎಎ, ಎನ್‌ಆರ್‌ಸಿ, ಎನ್‌ಪಿ‌ಆರ್ ಸೇರಿದಂತೆ ಒಂದೇ ಒಂದು ಶಬ್ದದ ಮೂಲಕ ಉತ್ತರ ಕೊಟ್ಟಿರುವ ಮನಮೋಹನ್ ಸಿಂಗ್, ಇಡೀ ದೇಶವನ್ನು ದೇಶಭಕ್ತಿ ಹೆಸರಲ್ಲಿ ಕಟ್ಟಿಹಾಕುವ ಪ್ರಯತ್ನ ನಡೆಯುತ್ತಿದೆ. ಭಾರತ್ ಮಾತಾ ಕಿ ಜೈ ಎಂದರೆ ಮಾತ್ರ ಭಾರತೀಯರು ಎನ್ನುವ  ಮನೋಭಾವನೆ ತುಂಬಲಾಗ್ತಿದೆ ಎಂದು ಪರೋಕ್ಷವಾಗಿ ನರೇಂದ್ರ ಮೋದಿಯನ್ನು ಟೀಕಿಸಿದ್ದಾರೆ.

Leave a Reply