ಟ್ರಂಪ್ ಭೇಟಿ ಬೆನ್ನಲ್ಲೇ ಹೊತ್ತಿ ಉರಿದ ದೆಹಲಿ!

ಡಿಜಿಟಲ್ ಕನ್ನಡ ಟೀಮ್:

ಇದೇ ಮೊದಲ ಬಾರಿಗೆ ಭಾರತ ಪ್ರವಾಸ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾಳೆ ದೆಹಲಿಗೆ ಭೇಟಿ ನೀಡಲಿದ್ದು, ಇದರ ಬೆನ್ನಲ್ಲೇ ರಾಜಧಾನಿಯಲ್ಲಿ ನಡೆಯುತ್ತಿದ್ದ ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದ್ದು, ವ್ಯಕ್ತಿಯೊಬ್ಬ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿರೋದು ಕಂಡುಬಂದಿದೆ.

ಮೌಜಪುರ ಹಾಗೂ ಜಾಫರಾಬಾದ್ ನಲ್ಲಿ ನಡೆದ ಹಿಂಸಾಚಾರದಲ್ಲಿ ಓರ್ವ ಪೇದೆ ಮೃತಪಟ್ಟಿದ್ದು, ಡಿಸಿಪಿ ಗಾಯಗೊಂಡಿದ್ದಾರೆ.

ಇಂದು ಸಂಜೆ ಅಹಮದಾಬಾದ್ ನಿಂದ ಆಗ್ರಾಗೆ ಆಗಮಿಸಿರುವ ಟ್ರಂಪ್ ಕುಟುಂಬ ನಾಳೆ ದೆಹಲಿಯಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈ ಮಧ್ಯೆ ದೆಹಲಿಯಲ್ಲಿ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿರೋದು ನಿಜಕ್ಕೂ ದೇಶ ತಲೆ ತಗ್ಗಿಸುವಂತಾಗಿದೆ.

ನಾಳೆ ಹೈದರಾಬಾದ್ ಹೌಸ್ ನಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಹಾಗೂ ಟ್ರಂಪ್ ನಡುವಣ ಮಾತುಕತೆ ವೇಳೆ ಸಿಎಎ ಹಾಗೂ ಧಾರ್ಮಿಕ ಸ್ವಾತಂತ್ರ್ಯ ವಿಚಾರ ಚರ್ಚೆಯಾಗುವ ಸಾಧ್ಯತೆ ಇದ್ದು ಇದರ ಬೆನ್ನಲ್ಲೇ ಈ ಗಲಭೆ ನಡೆದಿರುವುದು ಆತಂಕ ಮೂಡಿಸಿದೆ.

ಈ ಘಟನೆ ಖಂಡಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ‘ಇಂದು ದೇಹಲಿಯಲ್ಲಿ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆ ವೇಳೆ ದಾಳಿ ಮಾಡಲಾಗಿದೆ. ಶಾಂತಿಯುತ ಪ್ರತಿಭಟನೆ ಪ್ರಜಾಪ್ರಭುತ್ವದ ಪ್ರತೀಕ. ಆದರೆ ಹಿಂಸಾಚಾರವನ್ನು ಯಾವತ್ತೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಏನೇ ಪ್ರಚೋದನೆ ಬಂದರು ಶಾಂತಿ ಕಾಪಾಡಬೇಕು ಎಂದು ದೆಹಲಿ ಜನತೆಯಲ್ಲಿ ಮನವಿ ಮಾಡುತ್ತೇನೆ’ ಎಂದಿದ್ದಾರೆ.

ಈ ಮಧ್ಯೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

Leave a Reply