ಎಡ-ಬಲ ಸಿದ್ಧಾಂತ ಸಂಘರ್ಷದಲ್ಲಿ ಮಣ್ಣಾದ ಮಾನವೀಯತೆ!

ಡಿಜಿಟಲ್ ಕನ್ನಡ ಟೀಮ್:

ನಿನ್ನೆ ಆರಂಭವಾದ ಸಿಎಎ ವಿರೋಧ ಹಾಗೂ ಪರವಾದವರ ನಡುವಣ ಸಂಘರ್ಷಕ್ಕೆ ದೆಹಲಿಯ ಕೆಲವು ಪ್ರದೇಶಗಳು ಇನ್ನೂ ಹೊತ್ತಿ ಉರಿಯುತ್ತಿವೆ. ಈ ಘರ್ಷಣೆಯಲ್ಲಿ ಪೊಲೀಸ್ ಪೇದೆ ಸೇರಿದಂತೆ ಒಟ್ಟು ಸತ್ತವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಸುದ್ದಿ ವಾಹಿನಿಗಳ ಇಬ್ಬರು ವರದಿಗಾರರ ಮೇಲೂ ದಾಳಿ ನಡೆದಿದೆ.

ಈ ಸಂಘರ್ಷ ಕೇವಲ ದೆಹಲಿಯ ಜಫ್ರಾಬಾದ್, ಚಾಂದ್ ಭಾಗ್, ಕರಾವಲ್ ನಗರಕ್ಕೆ ಸೀಮಿತವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿಗೆ ಹಬ್ಬಿರುವ ಈ ಸಮರ ಎಡ ಹಾಗೂ ಬಲ ಪಂಥೀಯ ನಡುವಣ ಸಮರವಾಗಿದೆ. ಈ ಸಂಘರ್ಷದಲ್ಲಿ ಮಾನವೀಯತೆ ಮಣ್ಣಾಗಿದೆ.

ನಿನ್ನೆ ಈಶಾನ್ಯ ದೆಹಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಶಾಹರೂಕ್ ಎಂಬಾತ ಗನ್ ನಿಂದ 8 ಸುತ್ತು ಗುಂಡು ಹಾರಿಸಿದ್ದು ಹಾಗೂ ಕಿಡಿಗೇಡಿಗಳ ಗುಂಪು ಮುಸಲ್ಮಾನ ವ್ಯಕ್ತಿಯನ್ನು ಸುತ್ತುವರಿದು ದೊಣ್ಣೆ ಮುರಿಯುವಂತೆ ದಾಳಿ ಮಾಡಿರುವ ಫೋಟೋ ಎರಡು ಬಣಗಳ ಆರೋಪ ಪ್ರತ್ಯಾರೋಪ ಸಮರಕ್ಕೆ ಅಸ್ತ್ರವಾಗಿದೆ. ಇದನ್ನೇ ಮುಂದಿಟ್ಟುಕೊಂಡು ಒಂದು ಪಕ್ಷದ ಬೆಂಬಲಿಗರು, ಮತ್ತೊಂದು ಪಕ್ಷದವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದರಲ್ಲಿ ಮಗ್ನರಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಮಾನವೀಯತೆಯನ್ನು ಸಮಾಧಿ ಮಾಡಿ ಕೇಕೆ ಹಾಕುತ್ತಿರುವಂತೆ ಕಾಣುತ್ತಿದೆ.

ಇಲ್ಲಿ ಬಂದೂಕು ಹಿಡಿದು ಗುಂಡು ಹಾರಿಸಿದವನನ್ನು ಒದ್ದು ಒಳಗೆ ಹಾಕಬೇಕು. ಜತೆಗೆ ಇದೇ ಪರಿಸ್ಥಿತಿಯನ್ನು ಬಳಸಿಕೊಂಡು ಸಿಎಎ ವಿರೋಧಿಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವವರ ವಿರುದ್ಧವೂ ಕ್ರಮ ಜರುಗಿಸಬೇಕು.

Leave a Reply