ಕುಟುಂಬ ಪಾರುಪತ್ಯವಿರುವ ಜೆಡಿಎಸ್ ಹಣೆಬರಹ ಬದಲಿಸ್ತಾರಾ ಪ್ರಶಾಂತ್ ಕಿಶೋರ್?

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ದಾಖಲಿಸಲು ಪ್ರಮುಖ ಪಾತ್ರ ವಹಿಸಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಸಲಹೆ ಪಡೆಯಲು ಅನೇಕ ರಾಜಕೀಯ ಪಕ್ಷಗಳು ಸಾಲಾಗಿ ನಿಂತಿವೆ.  ಪೈಕಿ ಕರ್ನಾಟಕದಲ್ಲಿ ಎದುರಾಗಲಿರುವ 2023 ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಪಡೆಯಲು ಮುಂದಾಗಿದೆ.

ಈ ಹಿಂದೆಯೇ ಪ್ರಶಾಂತ್ ಕಿಶೋರ್ ಅವರ ಮಾರ್ಗದರ್ಶನ ಪಡೆಯಲು ಜೆಡಿಎಸ್ ಮುಂದಾಗಿದೆ ಎಂಬ ಸುದ್ದಿ ಹರಿದಾಡಿತ್ತಾದರೂ ಈಗ ಕುಮಾರಸ್ವಾಮಿ ಅವರು ಅದನ್ನು ಖಚಿತಪಡಿಸಿದ್ದಾರೆ. ಈಗಾಗಲೇ ಪ್ರಶಾಂತ್ ಕಿಶೋರ್ ಜತೆ ಎರಡು ಸುತ್ತಿನ ಮಾತುಕತೆ ನಡೆಸಲಾಗಿದೆ. ‘ನಾವು ಪ್ರಶಾಂತ್ ಕಿಶೋರ್ ಅವರ ಜತೆ ನಿಕಟ ಸಂಪರ್ಕದಲ್ಲಿದ್ದೇವೆ. ಅವರು ನಮಗಾಗಿ ಚುನಾವಣಾ ತಂತ್ರಗಾರಿಕೆ ರೂಪಿಸಲಿದ್ದು, 2023ರಲ್ಲಿ ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ’ ಎಂದು ತಿಳಿಸಿದ್ದಾರೆ.

ಸದ್ಯ ಪ್ರಶಾಂತ್ ಕಿಶೋರ್ ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದರ ನಡುವೆ ರಾಜ್ಯದ ಪರಿಸ್ಥಿತಿ ಅಧ್ಯಯನ ಮಾಡಲು ಪ್ರಶಾಂತ್ ಕಿಶೋರ್ ಶೀಘ್ರದಲ್ಲೇ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂಬ ಸುದ್ದಿಯೂ ಬಂದಿದೆ.

ಇಷ್ಟೇಲ್ಲಾ ಬೆಳವಣಿಗೆಗಳ ನಡುವೆ ನಮ್ಮಲ್ಲಿ ಕಾಡುವ ಪ್ರಶ್ನೆ ಅಂದ್ರೆ ಅದು ಕುಟುಂಬ ಪಾರುಪತ್ಯವೇ ಹೆಚ್ಚಾಗಿರುವ ಜೆಡಿಎಸ್ ಹಣೆಬರಹವನ್ನು ಬದಲಿಸಲು ಪ್ರಶಾಂತ್ ಕಿಶೋರ್ ಕೈಯಲ್ಲಿ ಸಾಧ್ಯವೇ? ಎಂದು. ಕಾರಣ, ಇರೋ 34 ಶಾಸಕರು ಆಯ್ಕೆಯಾಗದೇ ಉಳಿದಿರುವ ಇನ್ನುಳಿದ ಬೆರಳೆಣಿಕೆ ನಾಯಕರ ವಿಶ್ವಾಸವೇ ಕುಮಾರಸ್ವಾಮಿ ಹಾಗೂ ಗೌಡರ ಕುಟುಂಬದ ಮೇಲಿಲ್ಲ. ಪ್ರತಿನಿತ್ಯ ಒಬ್ಬೊಬ್ಬ ಶಾಸಕರೂ ಒಂದೊಂದು ಹೇಳಿಕೆ ನೀಡಿ ಹಿರಿಯ ನಾಯಕರಿಗೆ ಮುಜುಗರ ತರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ನಿಜವಾಗಿಯೂ ವರ್ಕೌಟ್ ಆಗುತ್ತಾ ಎಂಬ ಅನುಮಾನ ಕಾಡುತ್ತಿದೆ.

ಜೆಡಿಎಸ್ ಪಕ್ಷವನ್ನು ಯಾವುದೇ ನಾಯಕ ತೊರೆಯಬೇಕಾದರೂ ಹೇಳುವ ದೂರುಗಳೆಂದರೆ, ಪಕ್ಷದ ಹಿರಿಯ ನಾಯಕರು ನಮ್ಮ ಮಾತು, ಸಲಹೆಗಳನ್ನು ಕೇಳುವುದಿಲ್ಲ. ಜೆಡಿಎಸ್ ನಲ್ಲಿ ಗೌಡರ ಕುಟುಂಬ ಸದಸ್ಯರ ಹಸ್ತಕ್ಷೇಪ ಹೆಚ್ಚು. ರೆವಣ್ಣ ಮತ್ತು ಕುಮಾರಸ್ವಾಮಿ ಅವರ ಆದೇಶಗಳ ಜತೆಗೆ ಗೌಡರ ಕುಟುಂಬದ ಹೆಂಗಸರ ಆದೇಶವನ್ನೂ ಪಾಲಿಸಬೇಕಾಗುತ್ತದೆ. ಈ ದೂರುಗಳು ಈಗ ಸರ್ವೇ ಸಾಮಾನ್ಯವಾಗಿದೆ. ಇನ್ನು ಕುಮಾರಸ್ವಾಮಿ ಅವರು ಚುನಾವಣೆ ಸಂದರ್ಭದಲ್ಲಿ ನಮ್ಮ ಕುಟುಂಬದಿಂದ ನಾನು ರೇವಣ್ಣ ಮಾತ್ರ ಸ್ಪರ್ಧಿಸುತ್ತೇವೆ ಎಂದರೂ ಕೊನೆಗೆ ಅನಿತಾ ಕುಮಾರಸ್ವಾಮಿ ಎಂಟ್ರಿ ಆಗುತ್ತದೆ. ಈಗ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಎಂಟ್ರಿ ಕೂಡ ಆಗಿಹೋಗಿದ್ದು, ಜೆಡಿಎಸ್ ಒಂದು ಕುಟುಂಬದ ಪಕ್ಷ ಎಂಬ ಹಣೆಪಟ್ಟಿಯನ್ನು ಕಳಚಿಡುವುದು ಅಸಾಧ್ಯವೆಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ತಮ್ಮ ಶಾಸಕರು ಹಾಗೂ ನಾಯಕರ ಮಾತು, ಸಲಹೆಗಳನ್ನೇ ಪರಿಗಣಿಸದ ಹಿರಿಯ ನಾಯಕರು, ಪ್ರಶಾಂತ್ ಕಿಶೋರ್ ಕೊಡುವ ಸಲಹೆಗಳನ್ನು ನಿಜಕ್ಕೂ ಸ್ವೀಕರಿಸಿ ಅದನ್ನು ಕಾರ್ಯರೂಪಕ್ಕೆ ತರುತ್ತಾರಾ ಎಂಬ ಮತ್ತೊಂದು ಪ್ರಶ್ನೆ ಉದ್ಭವಿಸಿದೆ.

Leave a Reply