ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿದ್ದ ಯತ್ನಾಳ್ ಈಗ ವಿಲನ್ ಆದ್ರು!

ಡಿಜಿಟಲ್ ಕನ್ನಡ ಟೀಮ್:

ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಳೆದ ಕೆಲವು ತಿಂಗಳ ಹಿಂದೆ ಹೀರೋ ಆಗಿದ್ದರು. ಅದರಲ್ಲೂ ಸೋಷಿಯಲ್‌ ಮೀಡಿಯಾದಲ್ಲಿ ಯತ್ನಾಳ್‌ ಮಾತುಗಳನ್ನು ಜನ ಮನಸೋ ಇಚ್ಛೆ ಶೇರ್‌ ಮಾಡುವ ಮೂಲಕ ಯತ್ನಾಳ್‌ಗೆ ಉಘೇ ಉಘೇ ಎಂದಿದ್ದರು. ಇದೀಗ ಅದೇ ಜನ ಬಾಯಿಗೆ ಬಂದಂತೆ ಮನಸೋ ಇಚ್ಛೆ ಬೈಯ್ಯುತ್ತಿದ್ದಾರೆ.

ಆಗಸ್ಟ್‌ನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಊಹಿಸಲಾಗದ ಜಲ ಪ್ರಳಯ ಸೃಷ್ಟಿಯಾಗಿತ್ತು. ಕೇಂದ್ರ ಸರ್ಕಾರ ಉತ್ತರ ಕರ್ನಾಟಕ ಜನರ ಕಷ್ಟಕ್ಕೆ ಎಳ್ಳಷ್ಟೂ ಸಹಾಯ ಮಾಡಲಿಲ್ಲ. ಈ ವೇಳೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌, ಉತ್ತರ ಕರ್ನಾಟಕ ಜನರ ನೆರವಿಗೆ ಬರುವಂತೆ ಆಗ್ರಹ ಮಾಡಿದ್ದರು. ಯತ್ನಾಳ್‌ ಮಾತಿಗೆ ಇಡೀ ಕರ್ನಾಕಟದ ಜನ ಸಪೋರ್ಟ್‌ ಮಾಡಿದ್ದರು. ಇದೀಗ ಆಗ ಹೊಗಳಿದ್ದ ಜನರೇ ತೆಗಳುತ್ತಿದ್ದಾರೆ.

ವಿಜಯಪುರದಲ್ಲಿ ಮಂಗಳವಾರ ಸಂಜೆ ಮಾತನಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿವಾದಿತ ಹೇಳಿಕೆ ನೀಡಿದ್ದರು. ಕೆಲವು ದಿನಗಳ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಹೆಚ್‌.ಎಸ್‌ ದೊರೆಸ್ವಾಮಿ ಅವರನ್ನು ನಕಲಿ ಹೋರಾಟಗಾರ ಎಂದು ಟೀಕಿಸಿದ್ದರು. ಬಿಜೆಪಿ ಶಾಸಕ ಯತ್ನಾಳ್‌ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಆದರೂ ಇಂದು ಮತ್ತೆ ತನ್ನ ಮಾತನ್ನು ಸಮರ್ಥನೆ ಮಾಡಿಕೊಂಡಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಹೆಚ್‌.ಎಸ್‌ ದೊರೆಸ್ವಾಮಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

“ನಾನು ದೊರೆಸ್ವಾಮಿ ವಿರುದ್ಧ ನೀಡಿರುವ ಹೇಳಿಕೆಯನ್ನು ಹಿಂಪಡೆಯಲು ಸಾಧ್ಯವೇ ಇಲ್ಲ”. ದೊರೆಸ್ವಾಮಿ ಅವರ ನಡವಳಿಕೆಗಳೇ ಅವರು ಹೇಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ದೊರೆಸ್ವಾಮಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖವಾಣಿ ಎಂದು ಟೀಕಿಸಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯವಾದರೆ ಭಾರತೀಯ ಪೌರತ್ವ ನೀಡಿ ಎಂದು ಮಹಾತ್ಮಾ ಗಾಂಧಿ ಹೇಳಿದ್ದಾರೆ. ಆದರೆ, ಗಾಂಧೀಜಿ ತತ್ವಗಳನ್ನು ಎಂದೂ ದೊರೆಸ್ವಾಮಿ ಪುನರುಚ್ಚರಿಸಿಲ್ಲ. ಹೀಗಿರುವಾಗ ದೊರೆಸ್ವಾಮಿ ಅದು ಹೇಗೆ ಮಹಾತ್ಮಾ ಗಾಂಧಿ ಅನುಯಾಯಿ ಆಗಲು ಸಾಧ್ಯ..? ಎಂದು ಪ್ರಶ್ನಿಸಿದ್ದಾರೆ.

ಹಿರಿಯ ಸ್ವಾತಂತ್ರ ಹೋರಾಟಗಾರ ಹೆಚ್‌.ಎಸ್‌ ದೊರೆಸ್ವಾಮಿ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ನೀಡಿರುವ ಅವಹೇಳನಾಕಾರಿ ಹೇಳಿಕೆಯನ್ನು ಕಾಂಗ್ರೆಸ್‌ ಖಂಡಿಸಿದೆ. ಕಾಂಗ್ರೆಸ್‌ ನಾಯಕರು ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟಿಸಿದ್ದು, ಮಾತನ್ನು ವಾಪಸ್‌ ಪಡೆದು ಕ್ಷಮೆ ಕೇಳುವಂತೆ ಆಗ್ರಹ ಮಾಡಿದೆ. ಶಾಸಕ ಸ್ಥಾನದಿಂದ ಅನರ್ಹ ಮಾಡುವಂತೆಯೂ ಒತ್ತಾಯ ಮಾಡಿದೆ. ಈ ನಡುವೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಾಣೆಹಳ್ಳಿ ತರಳಬಾಳು ಪೀಠದ ಡಾ.ಪಂಡಿತಾರಾದ್ಯ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್‌.ಎಸ್‌ ದೊರೆಸ್ವಾಮಿಯವರು ಸುಸಂಸ್ಕೃತರು. ಯಾರಿಗೂ ಕೇಡು ಬಯಸದ ನಿರುಪದ್ರವ ವ್ಯಕ್ತಿಗಳು. ಅವರಿಗೆ ಅವಹೇಳನವಾಗಿ ಮಾತನಾಡುವುದು ಇವರ ವ್ಯಕ್ತಿತ್ವಕ್ಕೆ ಕಳಂಕ. ಹಿರಿಯರಾದ ದೊರೆಸ್ವಾಮಿ ಯವರು ಆನೆ ಇದ್ದಹಾಗೆ. ಆನೆ ನಡೆಯುವಾಗ ನಾಯಿಗಳು ಬೊಗಳುತ್ತವೆ. ನಾಯಿಗಳು ಬೊಗಳಿದರೆ ಆನೆಗೆ ಯಾವ ಪೆಟ್ಟು ಆಗುವುದಿಲ್ಲ ಎನ್ನುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಈ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

Leave a Reply