ಮಹದಾಯಿ ವಿಚಾರದಲ್ಲಿ ರಾಜ್ಯದ ದಿಟ್ಟ ನಡೆ, ಗೋವಾ ಅಡ್ಡಗಾಲು..!

ಡಿಜಿಟಲ್ ಕನ್ನಡ ಟೀಮ್:

ಮಹಾದಾಯಿ ನದಿ ನೀರು ಹಂಚಿಕೆ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸುವ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯದ ನಿಯೋಗ ಕೇಂದ್ರ ಜಲಸಂಪನ್ಮೂಲ ಸಚಿವರ ಭೇಟಿ ಮಾಡಲಿದೆ.

ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಭೇಟಿಗೂ ಮುನ್ನ ರಾಜ್ಯ ನಾಯಕರು ದೆಹಲಿಯ ಕರ್ನಾಟಕ ಭವನದಲ್ಲಿ ಪೂರ್ವಭಾವಿ ಸಭೆ ನಡೆಸಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಂಸದ ಶಿವಕುಮಾರ್ ಉದಾಸಿ, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಹಾಗೂ ರಾಜ್ಯ ಜಲಸಂಪನ್ಮೂಲ ಇಲಾಖೆ ಸಚಿವ ರಮೇಶ್ ಜಾರಕಿಹೊಳಿ ಭಾಗಿಯಾಗಿದ್ದಾರೆ.

ಈ ಮೊದಲು ಅಧಿಸೂಚನೆ‌ ಹೊರಡಿಸಲು ಕೋರ್ಟಿನಲ್ಲಿ ಒಪ್ಪಿಕೊಂಡಿದ್ದ ಗೋವಾ ಸರ್ಕಾರ ಇದೀಗ ಮತ್ತೆ ಕ್ಯಾತೆ ತೆಗೆದಿದೆ. ಗೋವ ಸರ್ಕಾರದ ದ್ವಿಮುಖ ನೀತಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಅಧಿಸೂಚನೆಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಗೋವಾ ಸರ್ಕಾರವನ್ನು ಹೇಗೆ ನಿಯಂತ್ರಣ ಮಾಡುವುದು ಹಾಗು ಕೇಂದ್ರ ಸರ್ಕಾರದ ಮೇಲೆ‌ ಅಧಿಸೂಚನೆಗಾಗಿ ಯಾವ ರೀತಿ ಒತ್ತಡ ಹೇರಬೇಕೆಂದು ಚರ್ಚೆ ನಡೆಸಲಾಯ್ತು ಎಂದು ಸಭೆ ಬಳಿಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಮಧ್ಯಾಹ್ನ 3.30ಕ್ಕೆ ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಭೇಟಿಯಾಗಲಿದ್ದೇವೆ. ರಾಜ್ಯದ ಎಲ್ಲಾ ಮುಖ‌ಂಡರು ಸೇರಿ ಭೇಟಿ ಮಾಡುತ್ತಿದ್ದೇವೆ. ಆದಷ್ಟು ಶೀಘ್ರವಾಗಿ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಲಿದ್ದೇವೆ ಎಂದಿದ್ದಾರೆ.

ಮಹದಾಯಿ ಅಧಿಸೂಚನೆ ಹೊರಡಿಸುವ ವಿಚಾರದಲ್ಲಿ ಗೋವಾ ಮತ್ತೆ ಕ್ಯಾತೆ ತೆಗೆದಿದೆ. ಯಾವುದೇ ಯೋಜನೆ ಕೈಗೆತ್ತಿಕೊಳ್ಳದಂತೆ ತಡೆಯಲು ಅರ್ಜಿ ಸಲ್ಲಿಸಿದೆ. ಈ ಅರ್ಜಿ ಮುಂದಿನ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ನಾವು ಕೂಡ ಕಾನೂನುನಾತ್ಮಕ ಹೋರಾಟ ನಡೆಸುತ್ತೇವೆ. ಒಮ್ಮೆ ನೋಟಿಫಿಕೇಷನ್ ಆದೇಶ ಆದ ಮೇಲೆ ತಡೆಯುವುದು ಸರಿಯಲ್ಲ. ನಮಗೆ ವಿಶ್ವಾಸ ಇದೆ, ಸುಪ್ರೀಂಕೋರ್ಟ್ ಆದೇಶದಲ್ಲಿ ಬದಲಾವಣೆ ಆಗೋದಿಲ್ಲ. ದೆಹಲಿ ಕಾನೂನು ತಂಡದ ಜೊತೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ-ಗೋವಾ ಮಧ್ಯೆ ಮಹದಾಯಿ ವಿವಾದ ಬಗೆಹರಿಸಲು ಹರಸಾಹಸ ಮಾಡುತ್ತಿದ್ದು, ಇದೀಗ ಮತ್ತೆ ಗೋವಾ ಸರ್ಕಾರ ಸುಪ್ರೀಂಕೋರ್ಟ್ ಮೇಟ್ಟಿಲೇರಿದೆ. ನಿನ್ನೆಯಷ್ಟೇ ಸುಪ್ರೀಂಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದು, ಕಳಸಾ ಬಂಡೂರಿ ತಿರುವು ಯೋಜನೆ ಮಾಡಲು ಮುಂದಾಗಿರುವ ಕರ್ನಾಟಕ ಸರ್ಕಾರದ ಕೆಲಸಕ್ಕೆ ತಡೆ ನೀಡಲು ಕೋರಿದೆ. ಈ ಬಗ್ಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಟ್ವಿಟ್ ಮಾಡಿ, ನಮ್ಮ ಮನವಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದೆ. ಮಾರ್ಚ್ 2 ರಂದು ಅರ್ಜಿ ವಿಚಾರಣೆಗೆ ಬರಲಿದೆ ಎಂದು ಟ್ವೀಟ್ ಮಾಡಿದ್ದಾರೆ.

Leave a Reply