ಜೈಲಿಗೆ ಹೋಗ್ತಾರಾ ರಕ್ಷಿತ್ ಶೆಟ್ಟಿ!?

ಡಿಜಿಟಲ್ ಕನ್ನಡ ಟೀಮ್:

ಶಾಂತಿಕ್ರಾಂತಿ ಸಿನಿಮಾದಲ್ಲಿ ಮಧ್ಯರಾತ್ರಿ ಹೈವೇ ರಸ್ತೇಲಿ ಹಾಡಿನ ಟ್ಯೂನ್ ಅನ್ನು ಕಿರಿಕ್​ ಪಾರ್ಟಿ ಸಿನಿಮಾದ ಹಾಡಿನಲ್ಲಿ ಬಳಸಿ ಕೃತಿಚೌರ್ಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ರಕ್ಷಿತ್ ಶೆಟ್ಟಿ ಜೈಲು ಸೇರುವ ಪರಿಸ್ಥಿತಿ ಬಂದಿದೆ.

ಲಹರಿ ಆಡಿಯೋ ಸಂಸ್ಥೆ ಕಿರಿಕ್ ಪಾರ್ಟಿ ಸಿನಿಮಾ ತಂಡದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದ್ದರೂ ರಕ್ಷಿತ್ ಶೆಟ್ಟಿ ನಿರಂತರವಾಗಿ ವಿಚಾರಣೆಗೆ ಗೈರಾದ ಪರಿಣಾಮ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.

ಕಿರಿಕ್​ ಪಾರ್ಟಿ ಸಿನಿಮಾದಲ್ಲಿ ಹೇ ವು ಆರ್​ ಯು ಸಾಂಗ್​ನ ಸಂಗೀತವನ್ನು ಶಾಂತಿಕ್ರಾಂತಿ ಸಿನಿಮಾದಿಂದ ಕದ್ದಿದ್ದು, ಸಾಹಿತ್ಯವನ್ನು ಅಷ್ಟೇ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಲಹರಿ ಸಂಸ್ಥೆ ದೂರಿತ್ತು. 2016ರಲ್ಲಿ ರಿಲೀಸ್ ಆದ ಕಿರಿಕ್ ಪಾರ್ಟಿ ಚಿತ್ರದಲ್ಲಿ ಹೇ ಹೂ ಆರ್ ಯೂ ಸಾಂಗ್​ನಲ್ಲಿ ಶಾಂತಿ ಕ್ರಾಂತಿ ಚಿತ್ರದ ಮಧ್ಯರಾತ್ರೀಲಿ ಮ್ಯೂಸಿಕ್ ಅನ್ನು ಅನುಮತಿ ಇಲ್ಲದೆ ಬಳಕೆ ಮಾಡಿದ್ದಾರೆ. ಮಧ್ಯರಾತ್ರೀಲಿ ಸಾಂಗ್​ ರೈಟ್ಸ್​ ನಮ್ಮ ಬಳಿಯಿದೆ ಎಂದು ಲಹರಿ ಆಡಿಯೋ ಸಂಸ್ಥೆ ಕೋರ್ಟ್​ ಮೊರೆ ಹೋಗಿತ್ತು. ಜನವರಿ 11, 2017ರಂದು ನೀಡಿದ್ದ ದೂರಿನ ಆಧಾರದ ಮೇಲೆ ಇದೇ ಫೆಬ್ರವರಿ 20ರಂದು ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ರಕ್ಷಿತ್​ ಶೆಟ್ಟಿ ಯಾವುದೇ ಉತ್ತರ ನೀಡದ ಕಾರಣ ಬೆಂಗಳೂರಿನ 9ನೇ ACMM ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್​ ​ ಜಾರಿ ಮಾಡಿದೆ.

ಲಹರಿ ಮ್ಯೂಸಿಕ್ ಸಂಸ್ಥೆ ಬಳಿ ಆಡಿಯೋ ರೈಟ್ಸ್ ಇದ್ದರೂ ಅವ್ರ ಅನುಮತಿ ಪಡೆಯದೇ ಮ್ಯೂಸಿಕ್ ಬಳಕೆ ಮಾಡಿದ್ದಾರೆ ಎಂದು ಚಿತ್ರ ಬಿಡುಗಡೆ ವೇಳೆಯೇ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಅಂದು ಸಂಧಾನ ನಡೆಸಿಕೊಂಡು ಚಿತ್ರ ಬಿಡುಗಡೆ ಇದ್ದ ಸಮಸ್ಯೆ ನಿವಾರಣೆ ಮಾಡಿಕೊಳ್ಳಲಾಗಿತ್ತು. ಆದರೆ ಜನವರಿ 11, 2017ರಂದು ಲಹರಿ ಆಡಿಯೋ ಸಂಸ್ಥೆ ಸಲ್ಲಿಕೆ ಮಾಡಿದ್ದ ದೂರು ಮಾತ್ರ ವಾಪಸ್​​ ಆಗಿರಲಿಲ್ಲ. ಕೋರ್ಟ್ ಸಮನ್ಸ್​ಗೆ ರಕ್ಷಿತ್ ಶೆಟ್ಟಿ ಉತ್ತರಿಸದ ಕಾರಣ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಲಾಗಿದೆ. ಪ್ರಕರಣದಲ್ಲಿ ರಕ್ಷಿತ್ ಶೆಟ್ಟಿ ಎ2 ಆರೋಪಿಯಾಗಿದ್ದಾರೆ. ಪರಮ್ವಾಹ್ ಸ್ಟುಡಿಯೋಸ್ ಮಾಲೀಕ ಎ1 ಆರೋಪಿಯಾಗಿದ್ದಾರೆ. ಕಿರಿಕ್ ಪಾರ್ಟಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಎ3 ಆರೋಪಿ ಆಗಿದ್ದಾರೆ. ಈ ಮೂವರಿಗೂ ಜಾಮೀನು ರಹಿತ ಬಂಧನ ವಾರೆಂಟ್​ ಹೊರಡಿಸಲಾಗಿದೆ ಎಂದು ಲಹರಿ ಮ್ಯೂಸಿಕ್ ಪರ ವಕಾಲತು ವಹಿಸಿದ್ದ ವಕೀಲೆ ಯೋವಿನಿ ರಾಜೇಶ್ ತಿಳಿಸಿದ್ದಾರೆ.

Leave a Reply