ಅರ್ಜುನ್‌ ಜನ್ಯ ಜಸ್ಟ್‌ ಸೇಫ್; ಇದು ಡಾಕ್ಟರ್‌ ಹೇಳಿದ ಸತ್ಯ!

ಡಿಜಿಟಲ್ ಕನ್ನಡ ಟೀಮ್:

ಚಂದನವನದ ಮ್ಯಾಜಿಕಲ್‌ ಕಂಪೋಸರ್‌ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಹೃದಯಘಾತವಾಗಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಮೈಸೂರಿನ ಬೋಗಾದಿಯಲ್ಲಿರುವ ವಿಲ್ಲಾದಲ್ಲಿ ಕಳೆದ ಭಾನುವಾರ ವಿಶ್ರಾಂತಿ ಪಡೆಯುತ್ತಿದ್ದಾಗ ತಲೆನೋವು ಬೆನ್ನುನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನ್ಯ ಆಸ್ಪತ್ರೆಗೆ ದಾಖಲಾಗಿದ್ದರು. ತಲೆ ನೋವು ಹಾಗೂ ಎದೆನೋವು ಹತೋಟಿಗೆ ಬಾರದ ಕಾರಣಕ್ಕೆ ಇಸಿಜಿ ಮಾಡಿದಾಗ ಹೃದ್ರೋಗ ಸಮಸ್ಯೆ ಪತ್ತೆಯಾಗಿದ್ದು, ಕೂಡಲೇ ಆಂಜಿಯೋಗ್ರಾಂ ಪರೀಕ್ಷೆಗೆ ಒಳಪಡಿಸಲಾಯ್ತು. ಆಂಜಿಯೋಗ್ರಾಂ ಪರೀಕ್ಷೆಯಲ್ಲಿ ಶೇಕಡಾ 99ರಷ್ಟು ಹೃದಯದ ರಕ್ತನಾಳ ಬ್ಲಾಕ್ ಆಗಿತ್ತು.

ಮಂಗಳವಾರ ಮಧ್ಯರಾತ್ರಿಯೇ ಅರ್ಜುನ್‌ ಜನ್ಯಗೆ ಆಂಜಿಯೋಪ್ಲ್ಯಾಸ್ಟಿ ಮಾಡುವ ಮೂಲಕ ರಕ್ತನಾಳ ಬ್ಲಾಕ್‌ ಆಗಿದ್ದ ಭಾಗವನ್ನು ಸರಿ ಮಾಡಲಾಗಿದೆ. ಒಂದು ವೇಳೆ ಅರ್ಜುನ್‌ ಜನ್ಯ ಅವರ ಸಮಸ್ಯೆ ಏನು ಎಂದು ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಕನಿಷ್ಠ 2 ಗಂಟೆ ತಡವಾಗಿದ್ದರೂ ಕೆಟ್ಟ ಪರಿಣಾಮ ಎದುರಿಸಬೇಕಿತ್ತು ಎಂದು ಮೈಸೂರಿನ ಅಪೋಲೋ ಆಸ್ಪತ್ರೆ ಹೃದ್ರೋಗ ತಜ್ಞ ಆದಿತ್ಯ ಉಡುಪ ಹೇಳಿದ್ದಾರೆ.

ಕಾರ್ಡಿಯಾಕ್ ಕೇರ್ ಯುನಿಟ್ನಲ್ಲಿ ಚಿಕಿತ್ಸೆ ಮುಂದುವರಿಸುತ್ತಿದ್ದು ಸಂಗೀತ ಮಾಂತ್ರಿಕ ಅರ್ಜುನ್‌ ಜನ್ಯ ಆರೋಗ್ಯ ಸ್ಥಿತಿ ಕೂಡ ಸೂಕ್ತವಾಗಿ ಸ್ಪಂದಿಸುತ್ತಿದೆ. ಸದ್ಯ ಅರ್ಜುನ್ ಜನ್ಯ ಆರೋಗ್ಯ ಸ್ಥಿರವಾಗಿದೆ ಅಂತ ಅಪೋಲೋ ಆಸ್ಪತ್ರೆಯ ವೈದ್ಯ ಗುರುಪ್ರಸಾದ್ ಹೇಳಿದ್ದಾರೆ.

ಅರ್ಜುನ್ ಜನ್ಯ ಸ್ಯಾಂಡಲ್ವುಡ್‌ನಲ್ಲಿ ತುಂಬಾ ಟಾಪ್‌ ಮ್ಯೂಸಿಕ್ ಡೈರೆಕ್ಟರ್ ಆಗಿದ್ದು, ಸಾಕಷ್ಟು ಸಿನಿಮಾಗಳಿಗೆ ಸಂಗೀತ ನೀಡುತ್ತಿದ್ದಾರೆ. ಇದೀಗ ರಾಬರ್ಟ್ ಸಿನಿಮಾದ ಮ್ಯೂಸಿಕ್ ಕಂಪೋಸ್ ಮಾಡುವ ಕೆಲಸ ನಡೆಯುತ್ತಿತ್ತು ಎನ್ನಲಾಗಿದೆ. ಸದ್ಯ ಹೃದಯಾಘಾತಕ್ಕೆ ಒಳಗಾಗಿರೋ ಅರ್ಜುನ್‌ ಜನ್ಯ ಅವರಿಗೆ ಕನಿಷ್ಠ ಒಂದೂವರೆ ತಿಂಗಳು ವಿಶ್ರಾಂತಿ ಅವಶ್ಯಕತೆ ಇದೆ ಎಂದು ವೈದ್ಯರಾದ ಅಪೋಲೋ ಆಸ್ಪತ್ರೆ ಮುಖ್ಯಸ್ಥ ಡಾಕ್ಟರ್‌ ಭರತೀಶ್ ರೆಡ್ಡಿ ಹೇಳಿದ್ದಾರೆ.

ಒತ್ತಡದಿಂದಲೇ ಈ ರೀತಿ ಆಗಿರಬಹುದು ಎಂದಿರುವ ಡಾಕ್ಟರ್‌ ಭರತೀಶ್ ರೆಡ್ಡಿ, ಮುಂದಿನ ದಿನಗಳಲ್ಲಿ ವೈದ್ಯರ ಸಲಹೆಯಂತೆ ಒತ್ತಡ ಕಡಿಮೆ ಮಾಡಿಕೊಂಡು ವಿಶ್ರಾಂತಿ ಮಾಡಬೇಕು ಎಂದು ಸಲಹೆ ಕೊಟ್ಟಿದ್ದಾರೆ.

ಹಾಗಿದ್ರೆ ಆಂಜಿಯೋಗ್ರಾಂ ಪರೀಕ್ಷೆ ಎಂದರೇನು..? ಅದನ್ನು ಹೇಗೆ ಮಾಡ್ತಾರೆ ಎನ್ನುವುದನ್ನು ನೋಡೋದಾದ್ರೆ:

* ಎದೆನೋವು ಕಾಣಿಸಿಕೊಂಡ ವ್ಯಕ್ತಿಗೆ ಇಸಿಜಿ ಬಳಿಕ ಮಾಡುವ ಒಂದು ಪರೀಕ್ಷಾ ವಿಧಾನ
* ಆಂಜಿಯೋಗ್ರಾಂ ಪರೀಕ್ಷೆಯಲ್ಲಿ ಹಾರ್ಟ್ನಲ್ಲಿರುವ ಸಮಸ್ಯೆ ಪತ್ತೆ ಮಾಡಲು ವೈದ್ಯರಿಗೆ ಅನುಕೂಲ
* ಲಾರ್ಜ್ ಆರ್ಟರಿ ಎಂದರೆ ದೊಡ್ಡ ರಕ್ತನಾಳವನ್ನು ಪತ್ತೆ ಮಾಡಿ ಕೆಥೇಟರ್ ಹಾಕಿ ಪರೀಕ್ಷೆ ಮಾಡಲಾಗುತ್ತದೆ
* ಸಾಮಾನ್ಯವಾಗಿ ತೊಡೆಯಲ್ಲಿರುವ ರಕ್ತನಾಳದ ಮೂಲಕವೇ ಕೆಥೇಟರ್‌ ಹಾಕಿ ಪರೀಕ್ಷೆ ಮಾಡಲಾಗುತ್ತದೆ
* ರಕ್ತನಾಳದಲ್ಲಿ ಎಲ್ಲಾದರೂ ಬ್ಲಾಕ್‌ ಆಗಿ ರಕ್ತ ಸಂಚಾರಕ್ಕೆ ಅಡ್ಡಿ ಆಗಿದೆಯೇ ಎನ್ನುವ ಬಗ್ಗೆ ಅಧ್ಯಯನ
* ಕೆಥೇಟರ್‌ ಹಾಕಿದ ಬಳಿಕ ಆಂಜಿಯೋಗ್ರಫಿ ಮೂಲಕ ರಕ್ತನಾಳವನ್ನು ಸಂಪೂರ್ಣ ತಪಾಸಣೆ ಮಾಡಲಾಗುತ್ತದೆ.

ಆಂಜಿಯೋಗ್ರಾಂ ಬಳಿಕ ವೈದ್ಯರು ಆಂಜಿಯೋಪ್ಲಾಸ್ಟಿ ಮಾಡುತ್ತಾರೆ.. ಹಾಗಾದ್ರೆ ಆಂಜಿಯೋಪ್ಲಾಸ್ಟಿ ಎಂದರೇನು..?

* ಆಂಜಿಯೋಗ್ರಾಂ ಪರೀಕ್ಷೆಯಲ್ಲಿ ರಕ್ತನಾಳ ಬ್ಲಾಕ್‌ ಆಗಿರುವುದು ಪತ್ತೆಯಾದ ಬಳಿಕ ಮಾಡುವ ಸರ್ಜರಿ
* ಆಂಜಿಯೋಪ್ಲಾಸ್ಟಿ ಮೂಲಕ ಬ್ಲಾಕ್‌ ಆಗಿರುವ ರಕ್ತನಾಳ ವಿಸ್ತರಿಸಲು ಸಹಾಯ ಮಾಡುವ ಕ್ರಮ
* ಈ ಮೂಲಕ ರಕ್ತಸಂಚಾರಕ್ಕೆ ರಕ್ತನಾಳದಲ್ಲಿ ಆಗಿರುವ ಅಡಚಣೆ ನಿವಾರಿಸುವ ವಿಧಾನ
* ಹೃದಯದಿಂದ ದೇಹದ ಇತರೆ ಭಾಗಕ್ಕೆ ರಕ್ತ ಸರಭರಾಜು ಮಾಡುವ ಮಾರ್ಗ ಕಿರಿದಾಗಿರುತ್ತೆ ಅಥವಾ ಭಾಗಶಃ ಮುಚ್ಚಿರುತ್ತೆ
* ಆ ಸ್ಥಳದಲ್ಲಿ ಆಂಜಿಯೋಪ್ಲಾಸ್ಟಿ ಮೂಲಕ ಹೃದಯದ ರಕ್ತನಾಳಗಳನ್ನು ಹಿಗ್ಗಿಸುವುದು
* ಆಂಜಿಯೋಪ್ಲಾಸ್ಟಿ ಮಾಡಿದ ಬಳಿಕ ಬ್ಲಾಕ್‌ ಆಗಿದ್ದ ಜಾಗ ಬಲೂನ್‌ ರೀತಿ ಉಬ್ಬಿಕೊಳ್ಳುತ್ತದೆ.
* ಅವಶ್ಯಕತೆ ಕಾಣೀಸಿದರೆ ರಕ್ತನಾಳ ಪುನಃ ಕಿರಿದಾಗದಂತೆ ಸ್ಟಂಟ್‌ ಅಳವಡಿಸಲಾಗುತ್ತದೆ.
* ಪೆನ್ನಿನ ರೀಫಿಲ್‌ನ ಸ್ಪ್ರಿಂಗ್‌ ರೀತಿಯ ಸ್ಟಂಟ್ ಅಳವಡಿಸಿ ಹಿಗ್ಗಿಸಲಾಗುತ್ತದೆ
* ಈ ಸ್ಟಂಟ್ ಅಳವಡಿಸಿದ ಬಳಿಕ ರಕ್ತಸಂಚಾರ ಸರಾಗವಾಗುತ್ತದೆ. ಜೊತೆಗೆ ಮತ್ತೆ ಬ್ಲಾಕ್‌ ಆಗುವುದಿಲ್ಲ.

ಒಟ್ಟಾರೆ ಅರ್ಜುನ್‌ ಜನ್ಯ ಅದೃಷ್ಟವಶಾತ್‌ ಸಂಕಷ್ಟದಿಂದ ಪಾರಾಗಿದ್ದಾರೆ. ಸಣ್ಣ ಸಮಸ್ಯೆಗೂ ಆಸ್ಪತ್ರೆಗೆ ಹೋಗಿದ್ದರಿಂದ ಸಮಸ್ಯೆ ಉಲ್ಬಣವಾಗುವ ಮುನ್ನವೇ ಹಾಸ್ಪಿಟಲ್‌ ಸೇರಿ ದೊಡ್ಡ ಅನಾಹುತವನ್ನೇ ಗೆದ್ದಿದ್ದಾರೆ.

Leave a Reply