ಬದಲಾಗುತ್ತಿದೆ ರಾಜಕೀಯ ಚಿತ್ರಣ; ಬಿಜೆಪಿಯಿಂದ ಕೈಜಾರುತ್ತಾ ಬಿಹಾರ?

ಡಿಜಿಟಲ್ ಕನ್ನಡ ಟೀಮ್:

ಬಿಹಾರ ಸಿಎಂ ನಿತೀಶ್ ಕುಮಾರ್ ಕಳೆದೆರಡು ಮೂರು ದಿನಗಳಿಂದ ಇಡುತ್ತಿರುವ ರಾಜಕೀಯ ಹೆಜ್ಜೆ ಬಿಜೆಪಿ ನಾಯಕರ ನಿದ್ದೆಗೇಡಿಸಿದೆ. ವಿಧಾನಸಭೆಯಲ್ಲಿ ಎನ್ ಸಿಆರ್ ವಿರುದ್ಧ ಗೊತ್ತುವಳಿ ಮಂಡನೆ, ತನ್ನ ಮಾಜಿ ಮೈತ್ರಿ ಸ್ನೇಹಿತ ತೇಜಸ್ವಿ ಯಾದವ್ ಜತೆಗಿನ ಎರಡು ಸುತ್ತಿನ ಮಾತುಕತೆ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ. ಈ ಎಲ್ಲ ಬೆಳವಣಿಗೆಗಳು ಬಿಹಾರವೂ ಬಿಜೆಪಿಯ ಕೈಜಾರುತ್ತಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಮೊನ್ನೆ ಬಿಹಾರ ವಿಧಾನಸಭೆಯಲ್ಲಿ ಮಧ್ಯಾಹ್ನ ಸಿಎಂ ನಿತೀಶ್ ಕುಮಾರ್ ತಮ್ಮ ಕಚೇರಿಯಲ್ಲಿದ್ದಾಗ ತೇಜಸ್ವಿ ಯಾದವ್ ಆಪ್ತರು ದೌಡಾಯಿಸಿ, ತಮ್ಮ ಭೇಟಿಗೆ ಸಮಯ ಬೇಕು ಎಂದು ಕೇಳಿದರು ತಕ್ಷಣವೇ ಅವಕಾಶ ನೀಡಿದ ನಿತೀಶ್, ತೇಜಸ್ವಿ ಯಾದವ್ ಜತೆ ಮಾತನಾಡಿದರು. ಈ ಸಭೆ ಬೆನ್ನಲ್ಲೇ ಮಧ್ಯಾಹ್ನ ಕಲಾಪ ಆರಂಭವಾದಾಗ ಬಿಜೆಪಿ ನಾಯಕರಿಗೆ ಶಾಕ್ ಕಾದಿತ್ತು. ಕಾರಣ ಎನ್ ಸಿಆರ್ ವಿರುದ್ಧದ ಗೊತ್ತುವಳಿ ಮಂಡನೆಯಾಗಿ ಅದಕ್ಕೆ ಅನುಮತಿಯನ್ನು ಪಡೆಯಲಾಯಿತು. ತೇಜಸ್ವಿ ಹಾಗೂ ನಿತೀಶ್ ಕುಮಾರ್ ಭೇಟಿ ಹಾಗೂ ಎನ್ ಸಿಆರ್ ವಿರುದ್ಧದ ಗೊತ್ತುವಳಿ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲದ ಬಿಜೆಪಿ ನಾಯರು ಶಾಕ್ ಆಗಿದ್ದರು.

ಇನ್ನು ವಿಧಾನಸಭಾ ಸ್ಪೀಕರ್ ವಿಜಯ್ ಚೌಧರಿ ಕಚೇರಿಯಲ್ಲಿ ನಿನ್ನೆ ನಿತೀಶ್ ಕುಮಾರ್ ಹಾಗೂ ತೇಜಸ್ವಿ ಯಾದವ್ ಎರಡನೇ ಸುತ್ತಿನ ಮಾತುಕತೆ ನಡೆಸಿರುವುದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ. ಹೀಗಾಗಿ ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಅವರ ಪ್ರತಿ ನಡೆ ಮೇಲೂ ಹದ್ದಿನ ಕಣ್ಣಿಟ್ಟಿದೆ.

ಈ ಮಧ್ಯೆ ನಿತೀಶ್ ಕುಮಾರ್ ಮತ್ತೆ ಮಹಾಘಟಬಂಧನ್ ಗೆ ಮರಳಿದರೆ ತಪ್ಪೇನು? ಎಂದು ಮಾಜಿ ಸಿಎಂ ಜಿತಿನ್ ರಾಮ್ ಮಾಝಿ ಪ್ರಶ್ನೆ ಮಾಡಿದ್ದಾರೆ. ಇನ್ನು ನಿತೀಶ್ ಪರ ಕಾಂಗ್ರೆಸ್ ನಾಯಕರೂ ಕೂಡ ಬ್ಯಾಟ್ ಬೀಸುತ್ತಿದ್ದು, ಬಿಹಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಬಿಜೆಪಿ ನಾಯಕರಿಗೆ ಅರ್ಥವಾಗಿದೆ.

ಕಳೆದ ತಿಂಗಳು ಸಿಎಎ ಜಾಗೃತಿ ಸಮಾವೇಶದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಎದುರಿಸಲಾಗುವುದು’ ಎಂದು ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆಗಳು ಬಿಜೆಪಿಯ ನಿದ್ದೆಗೆಡಿಸಿದೆ.

Leave a Reply