ಇನ್ನೂ ಭಾರತ ಪ್ರವಾಸದ ಗುಂಗಲ್ಲಿ ಟ್ರಂಪ್! ಇದು ಮೋದಿ ಮಾಡಿದ ಮೋಡಿ!

ಡಿಜಿಟಲ್ ಕನ್ನಡ ಟೀಮ್:

ಕಳೆದ ತಿಂಗಳು ಮೊದಲ ಬಾರಿಗೆ ಭಾರತ ಪ್ರವಾಸ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೂ ಅದರ ಗುಂಗಿನಿಂದ ಹೊರ ಬಂದಿಲ್ಲ. ಮೊಟರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮ ನೋಡಿದ ಮೇಲಂತೂ ಅಮೆರಿಕದ ರ್ಯಾಲಿಗಳು ಚಿಕ್ಕದಾಗಿ ಕಾಣಲಾರಂಭಿಸಿದೆಯಂತೆ. ಅಷ್ಟರ ಮಟ್ಟಿಗೆ ಭಾರತ ಪ್ರವಾಸ ಟ್ರಂಪ್ ಮನಸ್ಸಿನ ಮೇಲೆ ಪರಿಣಾಮ ಬೀರಿದೆ.

ಭಾರತ ಪ್ರವಾಸದ ನಂತರ ಶನಿವಾರ ಮೊದಲ ಬಾರಿಗೆ ದಕ್ಷಿಣ ಕ್ಯಾರೊಲಿನ್ ನಲ್ಲಿ ಭಾಷಣ ಮಾಡಿದ ಟ್ರಂಪ್, ‘ಮೊಟರಾ ಕ್ರೀಡಾಂಗಣದಲ್ಲಿ ನನಗೆ ಸಿಕ್ಕ ಸ್ವಾಗತ ನೋಡಿದ ಮೇಲೆ ಅಮೆರಿಕದ ರ್ಯಾಲಿಗಳು ಬಹಳ ಚಿಕ್ಕದಾಗಿ ಕಾಣುತ್ತಿವೆ. 1.29 ಲಕ್ಷ ಪ್ರೇಕ್ಷರ ಸಾಮರ್ಥ್ಯದ ಕ್ರೀಡಾಂಗಣದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಇಂದು ನಡೆಯುತ್ತಿರುವ ಸಭೆಯಲ್ಲಿ 60 ಸಾವಿರ ಪ್ರೇಕ್ಷಕರ ಸಾಮರ್ಥವಿದ್ದು, ಹೆಚ್ಚೆಂದರೆ 15 ಸಾವಿರ ಜನ ಸೇರಿದ್ದೀರಿ. ಇನ್ನು ಮುಂದೆ ನಾನು ಅಮೆರಿಕದಲ್ಲಿನ ಸಭೆಗಳಲ್ಲಿ ಬಂದ ಜನರ ಸಂಖ್ಯೆ ನೋಡಿ ರೋಮಾಂಚನವಾಗುವುದು ಅನುಮಾನ’ ಎಂದಿದ್ದಾರೆ.

ಟ್ರಂಪ್ ಅವರ ಈ ಮಾತುಗಳು ಭಾರತ ಪ್ರವಾಸ ಮುಗಿಸಿ ಒಂದು ವಾರ ಕಳೆದರೂ ಆವರು ಇನ್ನೂ ಅದೇ ಗುಂಗಿನಲ್ಲಿರುವುದು ಸ್ಪಷ್ಟವಾಗುತ್ತಿದೆ. ಈ ಪ್ರವಾಸವನ್ನು ಟ್ರಂಪ್ ಜೀವನ ಪರ್ಯಂತ ಮೆಲುಕು ಹಾಕಿದರೂ ಅಚ್ಚರಿ ಇಲ್ಲ.

ಟ್ರಂಪ್ ಅವರ ಪ್ರವಾಸದ ಪ್ರತಿ ಹಂತದಲ್ಲೂ ಮುತುವರ್ಜಿ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಯಾವುದೇ ಹಂತದಲ್ಲೂ ಟ್ರಂಪ್ ಅವರ ಆತಿಥ್ಯಕ್ಕೆ ಕಿಂಚಿತ್ತೂ ಕುಂದು ಬಾರದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಮೋದಿ ಮಾಡಿದ ಮೋಡಿ ಟ್ರಂಪ್ ಅವರ ಮನದಲ್ಲಿ ಹಾಗೇ ಉಳಿಯುವುದರಲ್ಲಿ ಅನುಮಾನವಿಲ್ಲ.

Leave a Reply