ಬಜೆಟ್‌ ಅಸಮಾಧಾನ, ಕೇಂದ್ರದ ವಿರುದ್ಧ ಬುಸುಗುಟ್ಟಿದ ಸಿಎಂ!?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಬಜೆಟ್‌ ಮಂಡನೆ ಆಗಿದೆ. ಯಾವುದೇ ಹೊಸ ಯೋಜನೆಗಳಿಲ್ಲ. ಇರುವ ಯೋಜನೆಗಳಿಗೂ ಸೂಕ್ತ ಅನುದಾನ ಒದಗಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಅಸಮಾಧಾನ ಹೊರ ಹಾಕಿದ್ದು, ಇದೊಂದು ಕೆಟ್ಟ ಬಜೆಟ್‌ ಎಂದು ಮೂದಲಿಸಿದ್ದಾರೆ. ಆದ್ರೆ ವಿರೋಧ ಪಕ್ಷಗಳು ಈ ರೀತಿ ಟೀಕೆ ಮಾಡುವುದು ಸಾಮಾನ್ಯ ಎಂದುಕೊಳ್ಳುತ್ತೇವೆ. ಆದರೆ ಈ ಬಾರಿಯ ಬಜೆಟ್‌ ಮಂಡನೆ ಸ್ವತಃ ಬಜೆಟ್‌ ಮಂಡಿಸಿದ ಸಿಎಂ ಯಡಿಯೂರಪ್ಪ ಅವರಿಗೇ ಅಸಮಾಧಾನ ತಂದಿಟ್ಟಿದೆ. ಬಜೆಟ್‌ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಗುಡುಗಿರುವ ಸಿಎಂ ಯಡಿಯೂರಪ್ಪ, ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಾತಿನ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸರಿ ದಾರಿಗೆ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇವೆ. ರೈತರ ಸಾಲ ಮನ್ನಾದಿಂದ ಉಂಟಾದ ಸಮಸ್ಯೆಯನ್ನು ಸರಿಪಡಿಸುವ ಕೆಲಸ ನಡೆದಿದೆ ಎನ್ನುವ ಮೂಲಕ ಪರೋಕ್ಷವಾಗಿ ರೈತರ ಸಾಲ ಮನ್ನಾದಿಂದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಇದೇ ವೇಳೆ ಕೇಂದ್ರದಿಂದ ಅನುದಾನ ಕಡಿಮೆ ಆಗಿದೆ. ಆರ್ಥಿಕ ಪರಿಸ್ಥಿತಿ‌ ಸ್ವಲ್ಪ ಸರಿ ಇಲ್ಲ. ಸಂಪನ್ಮೂಲ ಕ್ರೋಢೀಕರಣಕ್ಕೆ ತೆರಿಗೆ ಹೆಚ್ಚಳ ಅನಿವಾರ್ಯವಾಗಿದೆ. ತೆರಿಗೆ ಭಾರ ಹೆಚ್ಚಿಸೋದು ಅನಿವಾರ್ಯವಾಗಿದೆ ಎನ್ನುವ ಮೂಲಕ ಪೆಟ್ರೋಲ್‌ ಮದ್ಯದ ಮೇಲಿನ ಸೆಸ್‌ ಹೆಚ್ಚಳದ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.

ಜಿಎಸ್‌ಟಿಯಿಂದ ಇಡೀ ದೇಶದಲ್ಲಿ ಕರ್ನಾಟಕ್ಕೆ ಭಾರೀ ಹಿನ್ನಡೆ ಆಗಿದೆ. ನೀರಾವರಿಗೆ ಹೆಚ್ಚು ಒತ್ತು ಕೊಟ್ಟು ಬಜೆಟ್ ಮಂಡನೆ ಮಾಡಿದ್ದೇವೆ. ನಾವು ನೀರಾವರಿಗೆ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳದಿಂದ 1,500 ಕೋಟಿ ಆದಾಯ ಬರುವ ನಿರೀಕ್ಷೆ ಇದೆ. ಲಿಕ್ಕರ್ ಸೆಸ್‌ ಹೆಚ್ಚಳದಿಂದ 1,200 ಕೋಟಿ ಆದಾಯ ಬರುವ ನಿರೀಕ್ಷೆ ಇದೆ ಎಂದಿದ್ದಾರೆ. ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ಬಂದಿಲ್ಲ. ಹಾಗಾಗಿ ಬೆಲೆ ಹೆಚ್ಚಳ ಮಾಡೋದು ಅನಿವಾರ್ಯವಾಗಿದೆ ಎಂದು ನೇರ ಆರೋಪ ಮಾಡಿದ್ದಾರೆ.

ಕೇಂದ್ರದಿಂದ ಅನುದಾನ ಕಡಿಮೆ ವಿಚಾರದ ಬಗ್ಗೆ ಮಾತನಾಡಿರುವ ಸಿಎಂ ಯಡಿಯೂರಪ್ಪ, ಕೇಂದ್ರ ಸರ್ಕಾರಕ್ಕೆ ‌ಪ್ರಸ್ತಾವನೆಯನ್ನು ಮಾರ್ಚ್‌ ೧೩ರಂದು ಕೊಡ್ತಿದ್ದೇವೆ. ೧೫ನೇ ಹಣಕಾಸು ಕುರಿತು ಸಭೆ ಇದೆ. ಆ ಸಭೆಯಲ್ಲಿ ಹಣ ಕಡಿತದ ಬಗ್ಗೆ ವಾದ ಮಂಡಿಸುತ್ತೇವೆ. ಜಿಎಸ್‌ಟಿಯಲ್ಲಿ ಸಿಗಬೇಕಾದ ಪಾಲಿನ ಬಗ್ಗೆ ಪ್ರಸ್ತಾಪ ಮಾಡ್ತೇವೆ. ಆ ಸಭೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೋಗ್ತಾರೆ. ಯಾವುದೇ ಮುಚ್ಚು ಮರೆ ಇಲ್ಲದೇ ಬಜೆಟ್ ಬಗ್ಗೆ ತಿಳಿಸಿದ್ದೇನೆ ಎನ್ನುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಸಿಎಂ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಯಾವುದೇ ಮುಚ್ಚು ಮರೆ ಇಲ್ಲದೇ ಹೇಳ್ತಿದ್ದೇನೆ. ಕೇಂದ್ರ ಸರ್ಕಾರದಿಂದ ಸಿಗಬೇಕಿದ್ದ ಅನುದಾನ ಹಾಗೂ ಜಿಎಸ್‌ಟಿ ಪಾಲು ಕಡಿಮೆಯಾಗಿದೆ. ಅದಕ್ಕಾಗಿ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸರಿ ಇಲ್ಲ ಎಂದು ನೇರವಾಗಿ ತಿಳಿಸಿದ್ದಾರೆ.

ಈ ಹಿಂದೆ ತುಮಕೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಎದುರೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಬಳಿಕ ಕೇಂದ್ರದಿಂದ 1200 ಕೋಟಿ ಪರಿಹಾರ ನೀಡಿಲಾಗಿತ್ತು. ಇದೀಗ ಬಜೆಟ್‌ಗೂ ಮುನ್ನವೇ ವಿರೋಧ ಪಕ್ಷಗಳು ಅನುದಾನ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆದ್ರೆ ಕೇಂದ್ರದ ಪರ ಬ್ಯಾಟ್‌ ಬೀಸಿದ್ದ ಬಿಜೆಪಿ ನಾಯಕರು ಕೇಂದ್ರದಿಂದ ಎಲ್ಲ ಸರ್ಕಾರಕ್ಕಿಂತಲೂ ಹೆಚ್ಚಿನ ಪರಿಹಾರ ಬಂದಿದೆ ಎಂದು ಸಮರ್ಥಿಸಿಕೊಂಡಿದ್ದರು. ಆದ್ರೆ, ಇದೀಗ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಯಡಿಯೂರಪ್ಪ ‌ಅವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಕೇಂದ್ರ ಸರ್ಕಾರ ಏನು ಮಾಡುತ್ತೆ ಎನ್ನುವುದು ಕುತೂಹಲ ಮೂಡಿಸಿದೆ.

Leave a Reply