ಡಿಜಿಟಲ್ ಕನ್ನಡ ಟೀಮ್:
2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಇಡೀ ದೇಶಕ್ಕೆ ಶಾಕ್ ಕೊಟ್ಟಿದ್ರು. ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದಲೇ ಜಾರಿಗೆ ಬರುವಂತೆ 1 ಸಾವಿರ ಹಾಗು 500 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಲಾಗುತ್ತಿದೆ. ಇನ್ನು ಮುಂದೆ ದೇಶದಲ್ಲಿ 2 ಎರಡು ಮುಖ ಬೆಲೆಯ ನೋಟುಗಳು ನಡೆಯುವುದಿಲ್ಲ ಎಂದು ಬಿಟ್ಟಿದ್ದರು. ಈ ಶಾಕ್ ಇನ್ನೂ ಹಾಗೇ ಇರುವಂತೆ ಮತ್ತೊಂದು ಶಾಕ್ ಕೊಟ್ಟಿದ್ದರು. ಅದೇನಂದರೆ, 2 ಸಾವಿರ ಮುಖ ಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದರು.
ಜನರು ಈಗ ತಮ್ಮ ಬಳಿ ಇರುವ ನೋಟುಗಳನ್ನು ಬ್ಯಾಂಕ್ಗೆ ಕೊಟ್ಟು ಬದಲಾವಣೆ ಮಾಡಿಕೊಳ್ಳಬಹುದು ಎನ್ನುವ ಮೂಲಕ ಕಪ್ಪು ಹಣದ ಪತ್ತೆಗೆ ಹೊಸ ಅಸ್ತ್ರವನ್ನೇ ಬೀಸಿದರು ಎನ್ನುವ ಲೆಕ್ಕಾಚಾರ ಶುರುವಾಗಿತ್ತು. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಲೆಕ್ಕದಲ್ಲಿ ಬಹುತೇಕ ಅಷ್ಟೂ ಹಣವೂ ವಾಪಸ್ ಬಂದು ಬಿಟ್ಟಿತ್ತು.
ನೋಟ್ ಬ್ಯಾನ್ ಬಳಿಕ ಭಾರತ ಅತಿಯಾಗಿ ಬಳಲಿದ್ದು ಎಂದರೆ ಜಿಎಸ್ಟಿ ಜಾರಿಯಿಂದ. 2017ರ ಜೂನ್ 30ರ ಮಧ್ಯರಾತ್ರಿ ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ಎರಡೂ ಸದನಗಳನ್ನು ಒಟ್ಟಿಗೆ ಸೇರಿಸಿ ಜಿಎಸ್ಟಿ ಬಗ್ಗೆ ಘೋಷಣೆ ಮಾಡಲಾಯ್ತು. ತಯಾರಿಕ ಕಂಪನಿಯಲ್ಲೇ ಜಿಎಸ್ಟಿ ಜಾರಿ ಮಾಡುವುದರಿಂದ ತೆರಿಗೆ ಕಳ್ಳತನಕ್ಕೆ ಬ್ರೇಕ್ ಬೀಳಲಿದ್ದು, ಸರ್ಕಾರದ ಬೊಕ್ಕಸಕ್ಕೆ ಕಳ್ಳ ಮಾರ್ಗದಲ್ಲಿ ತೆರಿಗೆ ವಂಚನೆ ಮಾಡುವ ಜನರನ್ನು ತೆರಿಗೆ ವ್ಯಾಪ್ತಿಗೆ ತರಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಜಿಎಸ್ಟಿ ಜಾರಿ ಆದ ಬಳಿಕ ಭಾರತದ ಆರ್ಥಿಕತೆ ತಲ್ಲಣಗೊಳ್ಳಲು ಶುರುವಾಯ್ತು.
ಕೈಗಾರಿಕೋದ್ಯಮಗಳು ಮುಚ್ಚುವ ಹಂತಕ್ಕೆ ಬಂದು ಬಿಟ್ಟವು. ಅದೆಷ್ಟೋ ಕಂಪನಿಗಳು ತನ್ನ ನೌಕರರಿಗೆ ವಿಆರ್ಎಸ್ ಕೊಟ್ಟು ಕಳುಹಿಸಿದವು. ಇನ್ನೂ ಸಾಕಷ್ಟು ಕಂಪನಿಗಳು ಅನೈತಿಕ ಮಾರ್ಗಗಳ ಮೂಲಕವೇ ತನ್ನ ನೌಕರರನ್ನು ಮನೆಗೆ ಕಳಹಿಸುವ ಕೆಲಸ ಮಾಡಿದ್ದವು. ಯಾವಾಗ ಕೈಗಾರಿಕೆಗಳಲ್ಲಿ ಸರಕು ಉತ್ಪನ್ನ ಕಡಿಮೆ ಆಯ್ತು, ದೇಶದ ಜಿಡಿಪಿ ಪಾತಾಳಕ್ಕೆ ಕುಸಿದು ಬೀಳ್ತು. ಸದ್ಯದ ಭಾರತದ ಜಿಡಿಪಿ ದರ ಕೇವಲ ಶೇಕಡ 4.7ರಷ್ಟಾಗಿದೆ.
ಕೈಗಾರಿಕೋದ್ಯಮಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದ ಹಾಗೆ ಬ್ಯಾಂಕ್ಗಳ ಮೇಲೆ ಗಾಢವಾದ ಪರಿಣಾಮ ಬೀರಲು ಶುರುವಾಯ್ತು. ದೇಶದಲ್ಲಿ ಹಣದ ವ್ಯವಹಾರ ಕಡಿಮೆಯಾಗುತ್ತಾ ಸಾಗಿತು. ಪಾತಾಳಕ್ಕೆ ಕುಸಿದ ಜಿಡಿಪಿಯನ್ನು ಮೇಲಕ್ಕೆ ಎತ್ತುವ ಉದ್ದೇಶದಿಂದ ಕೇಂದ್ರ ಸರ್ಕಾರವೇ ಸಾಲ ಮೇಳಗಳನ್ನು ಮಾಡಿತ್ತು. ಬ್ಯಾಂಕ್ನಲ್ಲೇ ಹಣ ಉಳಿದುಕೊಂಡರೆ, ದೇಶದ ಆರ್ಥಿಕತೆ ಕುಸಿತದಿಂದ ಮೇಲೇಳುವುದಿಲ್ಲ ಎನ್ನುವ ಕಾರಣಕ್ಕೆ ಸಾಲವನ್ನು ವಿತರಿಸುವ ಕೆಲಸ ಮಾಡಿತ್ತು. ಇದೀಗ ಅದೇ ಬ್ಯಾಂಕ್ಗಳು ಕೊಟ್ಟ ಸಾಲವನ್ನು ವಸೂಲಿ ಮಾಡಲಾಗದೆ ದಿವಾಳಿಯಾಗುವತ್ತ ಸಾಗಿವೆ.
ಮೊದಲಿಗೆ ಪಂಜಾಬ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ಕಳೆದ ವರ್ಷ್ ಸೆಪ್ಟೆಂಬರ್ನಲ್ಲಿ ಸೂಪರ್ ಸೀಡ್ ಆಗಿತ್ತು. ಬೆಂಗಳೂರು ಮೂಲಕ ಗುರು ರಾಘವೇಂದ್ರ ಕೋ ಆಪರೇಟಿವ್ ಜನವರಿಯಲ್ಲಿ ಬಾಗಿಲು ಬಂದ್ ಮಾಡಿತ್ತು. ಇದೀಗ ವಾಣಿಜ್ಯ ಬ್ಯಾಂಕ್ ಆಗಿರುವ ಯೆಸ್ ಬ್ಯಾಂಕ್ ದಿವಾಳಿಯಾಗಿದೆ. ಸಾಲ ವಸೂಲು ಮಾಡಲಾಗದೆ ಈ ಪರಿಸ್ಥಿಗೆ ಬಂದಿದೆ ಎನ್ನಲಾಗುತ್ತಿದೆ. ಮೊದಲೇ ಹಣಕಾಸಿನ ಹರಿವು ಇಲ್ಲದೆ ಕಂಗಾಲಾಗಿರುವ ಕೈಗಾರಿಕೋದ್ಯಮಿಗಳು, ಕೆಲಸವಿಲ್ಲದೆ ನಿರುದ್ಯೋಗಿಗಳಾಗಿರುವ ಜನರು ಸಾಲ ವಾಪಸ್ ಕಟ್ಟಲು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗಿದೆ.