ಮಧ್ಯ ಪ್ರದೇಶದಲ್ಲೀಗ ಕರ್ನಾಟಕ ಮಾದರಿ ಆಪರೇಷನ್ ಕಮಲ!

ಡಿಜಿಟಲ್ ಕನ್ನಡ ಟೀಮ್:

ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಈಗ ಮಧ್ಯ ಪ್ರದೇಶದಲ್ಲಿ ಪುನರಾವರ್ತನೆಯಾಗುತ್ತಿದೆ.

ಹೌದು, ಹೇಗೆ ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿನ ಬಿರುಕನ್ನು ಬಳಸಿಕೊಂಡು ಬಿಜೆಪಿ ಆಪರೇಷನ್ ಕಮಲ ನಡೆಸಿತ್ತೋ, ಈಗ ಮಧ್ಯ ಪ್ರದೇಶದಲ್ಲೂ ಬಿಜೆಪಿ ಅಲ್ಲಿನ ಕಮಲನಾಥ್ ಸರ್ಕಾರದಲ್ಲಿನ ಬಿರುಕನ್ನು ಬಳಸಿಕೊಂಡು ಸರ್ಕಾರ ಬೀಳಿಸಲು ಪ್ರಯತ್ನಿಸಲಾಗುತ್ತಿದೆ.

ರಾಜ್ಯದಲ್ಲಿ ನಡೆದ ಆಪರೇಷನ್ ಕಮಲದ ವೇಳೆ ಅತೃಪ್ತ ಶಾಸಕರಿಗೆ ಆಗಿನ ಮಹಾರಾಷ್ಟ್ರ ಬಿಜೆಪಿ ಸರ್ಕಾರ ಆಶ್ರಯ ನೀಡಿದರೆ, ಈಗ ಮಧ್ಯ ಪ್ರದೇಶ ಕಾಂಗ್ರೆಸ್ ನ ಅತೃಪ್ತ ಶಾಸಕರಿಗೆ ಕರ್ನಾಟಕ ಆಶ್ರಯ ನೀಡಿದೆ ಎಂಬ ವರದಿ ಬಂದಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಕಳೆದ ಮಂಗಳವಾರದದಿಂದ ಮಹಾರಾಷ್ಟ್ರದ ಇಬ್ಬರು ಸಚಿವರು ಸೇರಿದಂತೆ 10 ಶಾಸಕರನ್ನು ಬೆಂಗಳೂರಿನ ಸರ್ಜಾಪುರ ಮತ್ತು ವೈಟ್ ಫೀಲ್ಡ್ ಸುತ್ತಮುತ್ತಲ ವಿಲ್ಲಾಗಳಲ್ಲಿ ಇರಿಸಲಾಗಿದೆ.

ಈ ಶಾಸಕರನ್ನು ದೇಶದ ವಿವಿಧ ಭಾಗಗಳಿಂದ ಚಾರ್ಟೆಡ್ ವಿಮಾನದ ಮೂಲಕ ಕರೆ ತರಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿರುವುದಾಗಿ ವರದಿಯಲ್ಲಿ ತಿಳಿಸಿದೆ. ಇನ್ನು ಕಾಂಗ್ರೆಸ್ ಶಾಸಕರು ಬಿಜೆಪಿ ವಶದಲ್ಲಿದ್ದಾರೆ ಎಂಬ ವರದಿಯನ್ನು ಬಿಜೆಪಿ ನಿರಾಕರಿಸಿದೆ.

ಈ ಮಧ್ಯೆ ಮಹಾರಾಷ್ಟ್ರ ಅತೃಪ್ತ ಶಾಸಕರನ್ನು ಪತ್ತೆ ಹಚ್ಚಿ ಅವರ ಮನವೊಲಿಕೆಗೆ ಕಾಂಗ್ರೆಸ್ ನಲ್ಲಿ ತಂಡಗಳನ್ನು ಮಾಡಲಾಗಿದೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರು ಈಗ ಇರುವ ಸ್ಥಳದಿಂದ ಬೇರೆಡೆಗೆ ರವಾನಿಸಲು ಪ್ರಯತ್ನ ನಡೆಸಲಾಗುತ್ತಿದೆ.

Leave a Reply