ಯೆಸ್​ ಬ್ಯಾಂಕ್​ ದಿವಾಳಿ.. ಫೋನ್​ ಪೇ ಗ್ರಾಹಕರಿಗೂ ಸಂಕಷ್ಟ..!

ಡಿಜಿಟಲ್ ಕನ್ನಡ ಟೀಮ್:

ಯೆಸ್​ ಬ್ಯಾಂಕ್​ ಗ್ರಾಹಕರಿಗೆ ಸಂಕಷ್ಟದ ಕಾಲ ಶುರುವಾಗಿದೆ. ಯೆಸ್​ ಬ್ಯಾಂಕ್​ನಲ್ಲಿ ವ್ಯವಹಾರ ನಿನ್ನೆ ಸಂಜೆಯಿಂದಲೇ ಸ್ಥಗಿತವಾಗಿದೆ. ಯೆಸ್​ ಬ್ಯಾಂಕ್​​ಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಸಾಲ ವಸೂಲಿ ಮಾಡಲಾಗದೇ ದಿವಾಳಿಯಾಗಿದೆ. ಇದೀಗ ಯೆಸ್​ ಬ್ಯಾಂಕ್​ ಮೇಲೆ ಆರ್​ಬಿಐ ನಿಗಾ ಇರಿಸಿದ್ದು, ಎಲ್ಲಾ ವ್ಯವಹಾರಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದೆ. ತಾತ್ಕಾಲಿಕವಾಗಿ ರಿಸರ್ವ್ ಬ್ಯಾಂಕ್ ಆಫ್​ ಇಂಡಿಯಾ ಯೆಸ್‌ ಬ್ಯಾಂಕ್‌ನ ನಿರ್ದೇಶಕ ಮಂಡಳಿ ರದ್ದು ಮಾಡಿ ಸೂಪರ್ ಸೀಡ್​ ಆದೇಶ ಮಾಡಲಾಗಿದೆ.

ಯೆಸ್​ ಬ್ಯಾಂಕ್​ನಲ್ಲಿ​ ವಸೂಲಿಯಾಗದ 10 ಸಾವಿರ ಕೋಟಿ ಸಾಲ ಇದೆ. ಯೆಸ್​ ಬ್ಯಾಂಕ್​ನ ಇಂದಿನ ಮಾರುಕಟ್ಟೆ ಮೌಲ್ಯ 9,398 ಕೋಟಿ ಆಗಿದೆ. ಬ್ಯಾಂಕ್​ ವಹಿವಾಟು ನಡೆಸಲು ₹ 14 ಸಾವಿರ ಕೋಟಿ ಬೇಕಾಗಿದೆ.

ಮಾರ್ಚ್​ 5 ರಿಂದ ಏಪ್ರಿಲ್​ 3 ವರೆಗೆ ಕೇವಲ 50 ಸಾವಿರ ರೂಪಾಯಿ ಹಣವನ್ನು ಮಾತ್ರ ಗ್ರಾಹಕರು ಡ್ರಾ ಮಾಡಬಹುದಾಗಿದೆ. ಅದೂ ಕೂಡ ಬ್ಯಾಂಕ್​ನಿಂದಲೇ ನೇರವಾಗಿ ಹಣ ಡ್ರಾ ಮಾಡಬೇಕು. ನಿಮ್ಮದೇ ಬೇರೆ ಬ್ಯಾಂಕ್​​ ಅಕೌಂಟ್​ಗೆ ಹಣ ಟ್ರಾನ್ಸ್​ಫರ್ ಮಾಡುವ ಚಿಂತನೆಯಲ್ಲಿದ್ದರೆ ಬಿಟ್ಟುಬಿಡಿ. ಯಾಕಂದ್ರೆ ಹಣ ಬೇರೆ ಬ್ಯಾಂಕ್​ಗೆ ಟ್ರಾನ್ಸ್​ಫರ್​ ಆಗಲ್ಲ, ಎಟಿಎಂನಿಂದಲೂ ಹಣ ತೆಗೆಯಲು ಸಾಧ್ಯವಿಲ್ಲ. ಒಟ್ಟಿನಲ್ಲಿ ನಿಮ್ಮ ಹಣವನ್ನು ಬೇರೆ ಯಾವುದೇ ರೀತಿ ತೆಗೆದುಕೊಳ್ಳಲು ಆಗುವುದಿಲ್ಲ. ಬ್ಯಾಂಕ್​ಗೆ ಭೇಟಿ ಕೊಟ್ಟು ಹಣ ತೆಗೆಯಬೇಕು ಎನ್ನುವ ನಿರ್ಧಾರ ಮಾಡಿದ್ದರೂ ಇನ್ನೊಂದು ಅಡ್ಡಿಯಿದೆ. ನಿಮ್ಮದು ಬ್ಯಾಂಕ್​ನಲ್ಲಿ ಯಾವುದಾದರೂ ಲೋನ್​ ಇದ್ದರೆ, ನಿಮ್ಮ ಸೇವಿಂಗ್​ ಬ್ಯಾಂಕ್​ ಖಾತೆಯ ಹಣವನ್ನು ತೆಗೆಯಲು ಸಾಧ್ಯವಿಲ್ಲ. ನಿನ್ನೆವರೆಗಿನ ಚೆಕ್​​, ಡಿಡಿ ಮಾತ್ರ ಪಾಸ್ ಆಗುತ್ತವೆ. ಹೊಸದಾಗಿ ಚೆಕ್​ ಬುಕ್​ ಕೂಡ ಕೊಡಲ್ಲ.

ವೈದ್ಯಕೀಯ ಚಿಕಿತ್ಸೆ ಮದುವೆ ಕಾರ್ಯಕ್ರಮ, ಉನ್ನತ ಶಿಕ್ಷಣ ಕೈಗೊಳ್ಳಲು ಹೆಚ್ಚಿನ ಹಣ ಡ್ರಾ ಮಾಡಬಹುದು. ಆದರೆ ಆ ಹಣ ಗರಿಷ್ಠ 5 ಲಕ್ಷ ಮೀರಿರಬಾರದು. ರಿಸರ್ವ್ ಬ್ಯಾಂಕ್ ಆದೇಶದಿಂದ ಕಂಗಾಲಾಗಿರುವ ಗ್ರಾಹಕರು ಬ್ಯಾಂಕ್​ ಎದುರು ಜಮಾಯಿಸಿದ್ದಾರೆ. ಯೆಸ್​​ ಬ್ಯಾಂಕ್ ವ್ಯವಹಾರ ಸ್ಥಗಿತ ಆಗುತ್ತಿದ್ದಂತೆ ಷೇರು ಮೌಲ್ಯ ಭಾರೀ ಕುಸಿತವಾಗಿದೆ. ಶೇಕಡ 29 ರಷ್ಟು ಮೌಲ್ಯ ಕುಸಿತವಾಗಿದೆ. ಆರ್​ಬಿಐ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಯೆಸ್ ಬ್ಯಾಂಕ್ ಬಿಕ್ಕಟ್ಟಿಗೆ ತಕ್ಷಣ ಕ್ರಮಕೈಗೊಳ್ಳಲಾಗುತ್ತದೆ. ಆರ್​ಬಿಐ ಸಮರ್ಥವಾಗಿ ನಿಭಾಯಿಸುತ್ತಿದೆ, ಗ್ರಾಹಕರು ಆತಂಕಪಡಬೇಕಾಗಿಲ್ಲ ಎಂದಿದ್ದಾರೆ RBI ಗೌವರ್ನರ್​ ಶಕ್ತಿಕಾಂತ್​ ದಾಸ್​.

ಬ್ಯಾಂಕಿಂಗ್​ ಪಾರ್ಟರ್ನರ್​ ಆಗಿ ಯೆಸ್​ ಬ್ಯಾಂಕ್​ ಜೊತೆ ವ್ಯವಹಾರ ಮಾಡುತ್ತಿದ್ದ ಫೋನ್​ ಪೇ ಕೂಡ ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಹಕರು ಯಾವುದೇ ವ್ಯವಹಾರ ಮಾಡಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಈ ಬಗ್ಗೆ ಫೋನ್​ ಪೇ ಸಿಇಓ ಸಮೀರ್ ನಿಗಮ್ ಟ್ವೀಟ್​ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಇತ್ತೀಚಿಗೆ ಎಲ್ಲವೂ ನಗದು ರಹಿತ ವ್ಯವಹಾರ ಹೆಚ್ಚಾಗಿತ್ತು. ಅದರಲ್ಲೂ ಫೋನ್​ ಪೇ ಬಳಕೆ ಸಣ್ಣಪುಟ್ಟ ಅಂಗಡಿಗಳಲ್ಲೂ ಜಾಸ್ತಿಯಾಗಿತ್ತು. ಆದ್ರೀಗ ಮಾರುಕಟ್ಟೆ, ಪೆಟ್ರೋಲ್​ ಬಂಕ್​, ಮಾಲ್​ಗಳಲ್ಲಿ ಫೋನ್​ ಪೇ ಬಳಕೆ ಮಾಡಲು ಸಾಧ್ಯವಾಗದೆ ಕಂಗಾಲಾಗುತ್ತಿದ್ದಾರೆ. ಇನ್ನೊಂದು ಕಡೆ ಯೆಸ್​ ಬ್ಯಾಂಕ್​ನಲ್ಲಿ ಹಣ ಹೂಡಿಕೆ ಮಾಡಿದ್ದವರು, ಲಕ್ಷಾಂತರ ರೂಪಾಯಿ ನಿಶ್ಚಿತ ಠೇವಣಿ ಇಟ್ಟು ಲಾಭಾಂಶದಲ್ಲಿ ಜೀವನ ನಡೆಸುತ್ತಿದ್ದವರು ಕಣ್ಣು ಬಾಯಿ ಬಿಡುವಂತಾಗಿದೆ. ಪಂಜಾಬ್​ ನ್ಯಾಷನಲ್​ ಕೋ ಆಪರೇಟಿವ್​ ಹಾಗು ಬೆಂಗಳೂರಿನ ರಾಘವೇಂದ್ರ ಕೋ ಆಪರೇಟಿವ್​ ಬ್ಯಾಂಕ್​ ಬಳಿಕ ದಿವಾಳಿ ಹಂತ ತಲುಪಿರುವ ಮೂರನೇ ಭಾರತದ ಬ್ಯಾಂಕ್​ ಯೆಸ್​​ ಬ್ಯಾಂಕ್​ ಆಗಿದೆ.

Leave a Reply