ಯಡಿಯೂರಪ್ಪ ಪರ ವಕಾಲತ್ತು ವಹಿಸಿ ಬಿಜೆಪಿ ಸಂಸದರ ವಿರುದ್ಧ ವಿಶ್ವನಾಥ್ ಕಿಡಿ!

ಡಿಜಿಟಲ್ ಕನ್ನಡ ಟೀಮ್:

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಪಾಲಿನಲ್ಲಿ ದೊಖಾ ನಡೆದಿರುವುದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಸಂಸದರು ಬಾಯಿ ಬಿಡಬೇಕು ಎಂದು ಮಾಜಿ ಶಾಸಕ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧಾರವಾಡದಲ್ಲಿ ಮಾಧ್ಯಮಗಳ ಜತೆ ಮಾತನಾಡಿರುವ ವಿಶ್ವನಾಥ್, ‘ರಾಜ್ಯ ಮತ್ತು ದೇಶದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ವಿಚಾರವನ್ನು ಅರಿತು ರಾಜ್ಯ ಬಜೆಟ್ ಬಗ್ಗೆ ವಿಶ್ಲೇಷಣೆ ಮಾಡಬೇಕಿದೆ. ಜಿಎಸ್ಟಿ ಪಾಲಿನಲ್ಲಿ ಆಗುರುವ ಅನ್ಯಾಯದ ಬಗ್ಗೆ ಮುಖ್ಯಮಂತ್ರಿಗಳು ಬಜೆಟ್ ವೇಳೆ ಹೇಳಿದ್ದಾರೆ. ಈ ಬಗ್ಗೆ ಸಂಸದರು ಮಾತನಾಡಬೇಕು. ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ ಯಡಿಯೂರಪ್ಪನವರ ಕೈ ಬಲ ಪಡಿಸಬೇಕು’ ಎಂದಿದ್ದಾರೆ.

‘ನಮ್ಮ ಸರ್ಕಾರ ಎರಡೂವರೆ ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದೆ. 4 ಲಕ್ಷ ಕೋಟಿ ವರೆಗೆ ಸಾಲ ಬೆಳೆದು ನಿಂತಿದೆ. ಸಾಲಕ್ಕೆ ಬಡ್ಡಿ ಕಟ್ಟೋಕೆ ಸಾಧ್ಯವಾಗುತ್ತಾ? ಅಧಿಕಾರಿಗಳ, ನೌಕರರ ಸಂಬಳಕ್ಕೆ 24 ಸಾವಿರ ಕೋಟಿ ಹೋಗುತ್ತಿದೆ. ಇಂದು ಜನಕ್ಕೆ ಸತ್ಯ ತಿಳಿಸಬೇಕಾಗಿದೆ. ನನ್ನ ಹತ್ತಿರ ಇರೋದೆ ಹತ್ತು ರೂಪಾಯಿ ಅಂತಾ ಹೇಳುವವರು ಬೇಕಾಗಿದೆ. ಒಂದೆಡೆ ಸಾಲದ ಶೂಲ ಜಾಸ್ತಿ ಆಗುತ್ತಿದ್ದರೆ, ಮತ್ತೊಂದೆಡೆ ಬಜೆಟ್ ತೂಕವೂ ಜಾಸ್ತಿ ಆಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

Leave a Reply