ಸರ್ವರಿಗೂ ಸೂರು ನೀಡುವುದೇ ಸರ್ಕಾರದ ಗುರಿ: ಸಿಎಂ ಯಡಿಯೂರಪ್ಪ

ಡಿಜಿಟಲ್ ಕನ್ನಡ ಟೀಮ್:

ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆ ಸರ್ವರಿಗೂ ಸೂರು ನೀಡುವ ಯೋಜನೆಯಡಿ ರಾಜ್ಯ ಸರ್ಕಾರದ ರಾಜೀವ್‍ಗಾಂಧಿ ವಸತಿ ನಿಗಮ ನಿಯಮಿತದಡಿ ಒಂದು ಲಕ್ಷ ಬಹುಮಹಡಿ ವಸತಿ ಗೃಹಗಳನ್ನು ಬೆಂಗಳೂರಿನಲ್ಲಿ ಕಟ್ಟಲು ಉದ್ದೇಶಿಸಲಾಗಿದ್ದು, ಇಂದು ಮೊದಲ 932 ಬಹುಮಹಡಿ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿರುವುದು ಸಂತಸ ತಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.

ಇಂದು ನಗರದ ಹೊರವಲಯದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಾಣಿಗರಹಳ್ಳಿ ಸರ್ವೆ ನಂ. 74 ರಲ್ಲಿ ಹಮ್ಮಿಕೊಂಡಿದ್ದ ಶಂಕುಸ್ಥಾಪನೆ ನೆರವೇರಿಸಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಬಡಜನರು ನೆಮ್ಮದಿ ಹಾಗೂ ಸ್ವಾಭಿಮಾನದಿಂದ ಬದುಕು ಸಾಗಿಸುವ ಉದ್ದೇಶದಿಂದ ಈ ಬೃಹತ್ ವಸತಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಶೀಘ್ರದಲ್ಲಿ ಬೆಂಗಳೂರಿನ ಇತರೆ ಪ್ರದೇಶಗಳಲ್ಲಿ ಪ್ರಾರಂಭಿಸುವುದಾಗಿ ಹೇಳಿದರು.

ಬೆಂಗಳೂರಿನಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗಗಳನ್ನು ಬಿಡಿಸಿಕೊಂಡು ಬಡವರಿಗೆ ವಸತಿ ಗೃಹಗಳು ಸೇರಿದಂತೆ ಹಲವು ಸಾರ್ವಜನಿಕ ಉಪಯೋಗಿ ಯೋಜನೆಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಮುಖ್ಯ ಪ್ರದೇಶಗಳ ಒತ್ತುವರಿ ಜಾಗಗಳನ್ನು ಬಿಡಿಸಿಕೊಂಡು ಹರಾಜು ಮೂಲಕ ಮಾರಾಟ ಮಾಡಿ, ಅದರಿಂದ ಬರುವ ಹಣವನ್ನು ಸಾರ್ವಜನಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುವುದು ಎಂದರು.

ಇದೇ ಸಮಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶುಭ ಕೋರಿದರು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಅವರು ಮಾತನಾಡಿ ಈ ಬಹುಮಹಡಿ ವಸತಿ ಗೃಹಗಳ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ಮನೆಗು ಒಂದೂವರೆ ಲಕ್ಷ ರೂ.ಗಳನ್ನು ಸಹಾಯಧನವಾಗಿ ನೀಡಿದೆ. ವಸತಿ ಸಚಿವ ವಿ. ಸೋಮಣ್ಣ ಅವರು ಬಹುಮಹಡಿ ವಸತಿ ಗೃಹ ನಿರ್ಮಾಣದಡಿ ಅತ್ಯಂತ ಉತ್ತಮವಾದ ಹೆಸರನ್ನು ಹೊಂದಿದ್ದು, ಮುಂದಿನ ವರ್ಷದೊಳಗೆ ಇಂದು ಶಂಕುಸ್ಥಾಪನೆ ನೆರವೇರಿದ ಈ 932 ಬಹುಮಹಡಿ ವಸತಿ ಗೃಹಗಳನ್ನು ಉತ್ತಮ ಗುಣಮಟ್ಟದಲ್ಲಿ ಕಟ್ಟಿ ಬಡವರಿಗೆ ಹಂಚಿ ಒಂದೇ ದಿನ ಎಲ್ಲಾ ಮನೆಗಳ ಗೃಹಪ್ರವೇಶದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.

ವಸತಿ ಸಚಿವ ವಿ.ಸೋಮಣ್ಣ ಅವರು ಮಾತನಾಡಿ ಮುಂದಿನ ವರ್ಷದೊಳಗೆ ಐದು ಸಾವಿರಕ್ಕಿಂತ ಹೆಚ್ಚಿನ ಬಹುಮಹಡಿ ವಸತಿ ಗೃಹಗಳನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದ್ದು, ಮಾತಿಗಿಂತ ಕೆಲಸ ಮಾಡಿ ತೋರಿಸುತ್ತೇವೆ. ಈ ವಸತಿ ಗೃಹಗಳು ಬಡವರಿಗೆ ತಲುಪಿಸುವ ಜವಾಬ್ದಾರಿ ಸಹ ಇಲ್ಲಿನ ಸ್ಥಳೀಯ ಪ್ರತಿನಿಧಿಗಳಿಗಿದ್ದು, ಅವರು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮತ್ತು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸುವ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ನಗರದ ಆನೇಕಲ್‍ನಲ್ಲಿ ಐದು ಸಾವಿರ, ಯಶವಂತಪುರ ವ್ಯಾಪ್ತಿಯಲ್ಲ್ಲಿ ಎಂಟು ಸಾವಿರ ಬಹುಮಹಡಿ ವಸತಿ ಗೃಹಗಳನ್ನು ನಿರ್ಮಿಸಲು ಈಗಾಗಲೇ ಈ ಯೋಜನೆ ಸಿದ್ಧವಾಗಿದ್ದು, ಪ್ರತಿಯೊಂದು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷ ಬೇಧ ಮರೆತು ಬಡವರಿಗಾಗಿ ಬಹುಮಹಡಿ ವಸತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ಕಂದಾಯ ಸಚಿವ ಆರ್. ಅಶೋಕ್ ಅವರು ಮಾತನಾಡಿ ಐದು ಎಕರೆ ವಿಸ್ತೀರ್ಣದಲ್ಲಿ ಈ 932 ಬಹುಮಹಡಿ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರದ ಇನ್ನೂ ಬಹಳ ಜಮೀನು ಇದ್ದು, ಹೆಚ್ಚಿನ ಬಹುಮಹಡಿ ವಸತಿ ಗೃಹಗಳನ್ನು ಕಟ್ಟಲು ಅವಕಾಶವಿದೆ. ಈ 932 ಬಹುಮಹಡಿ ವಸತಿ ಗೃಹಗಳಿಗಾಗಿ ಒಟ್ಟು 3,500 ಅರ್ಜಿಗಳು ಈಗಾಗಲೇ ಬಂದಿರುವುದು ಮನೆಗಳ ಬೇಡಿಕೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಸರ್ಕಾರಿ ಜಮೀನುಗಳ ಒತ್ತುವರಿ ಅಧ್ಯಯನಕ್ಕಾಗಿ ಸರ್ಕಾರ ಈಗಾಗಲೇ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಸಮಿತಿ ನೀಡುವ ವರದಿಯ ಆಧಾರದ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಒತ್ತುವರಿ ಭೂಮಿಯನ್ನು ತೆರವುಗೊಳಿಸಿ, ಬಡವರಿಗೆ ಮನೆ, ಆಸ್ಪತ್ರೆ, ಶಾಲೆ ಮತ್ತು ಸ್ಮಶಾನ ಸೇರಿದಂತೆ ಜನೋಪಯೋಗಿ ಕಾರ್ಯಗಳಿಗಾಗಿ ಬಳಸಿಕೊಳ್ಳಲಾಗುವುದು.

ಕಂದಾಯ ಇಲಾಖೆಯಿಂದ ವಸತಿ ಇಲಾಖೆಗೆ ಈಗಾಗಲೇ ರಾಜ್ಯಾದ್ಯಂತ 2,500 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದ್ದು, ಒತ್ತುವರಿ ಭೂಮಿ ತೆರವುಗೊಳಿಸಿದ ನಂತರ ಮುಂದಿನ ಮೂರು ವರ್ಷಗಳಲ್ಲಿ ಹತ್ತು ಸಾವಿರ ಎಕರೆ ಭೂಮಿಯನ್ನು ವಿವಿಧ ಉದ್ದೇಶಗಳಿಗಾಗಿ ಇತರೆ ಇಲಾಖೆಗಳಿಗೆ ಹಸ್ತಾಂತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಆರ್. ಮಂಜುನಾಥ್ ಅವರು ಮಾತನಾಡಿ ಪಕ್ಷ ಬೇಧ ಮರೆತು ಇತರೆ ಪಕ್ಷದವನಾದ ನನ್ನ ಕ್ಷೇತ್ರವನ್ನು ಈ ಯೋಜನೆಯಡಿ ಆಯ್ಕೆ ಮಾಡಿಕೊಂಡು 932 ಬಹುಮಹಡಿ ವಸತಿ ಗೃಹಗಳನ್ನು ನಿರ್ಮಿಸುತ್ತಿರುವುದು ಮುಖ್ಯಮಂತ್ರಿಗಳ ಅಭಿವೃದ್ಧಿ ಕನಸನ್ನು ತೋರಿಸುತ್ತಿದೆ ಎಂದು ಮುಖ್ಯಮಂತ್ರಿಗಳನ್ನು ಶ್ಲಾಘಿಸಿದರು.

ಬೆಂಗಳೂರಿನಲ್ಲಿ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ ಅತ್ಯಂತ ಹೆಚ್ಚು ವಲಸಿಗರನ್ನು ಮತ್ತು ಕಾರ್ಮಿಕರನ್ನು ಹೊಂದಿರುವ ಪ್ರದೇಶವಾಗಿದ್ದು, ಇಲ್ಲಿ ಬಹುಮಹಡಿ ವಸತಿ ಗೃಹಗಳ ಅವಶ್ಯಕತೆ ಇರುವುದನ್ನು ಮನಗಂಡು ಸರ್ಕಾರ ಒಂದು ಲಕ್ಷ ಬಹುಮಹಡಿ ವಸತಿ ಗೃಹಗಳ ಈ ಯೋಜನೆಗೆ ತಮ್ಮ ಕ್ಷೇತ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದು ಸಂತಸ ತಂದಿದೆ.

ಈ ಕ್ಷೇತ್ರ ಬೆಂಗಳೂರಿಗೆ ಕರ್ನಾಟಕದ 22 ಜಿಲ್ಲೆಗಳ ಹೆಬ್ಬಾಗಿಲಿನಂತೆ ಇದ್ದು, ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಬಹಳಷ್ಟು ಬಡವರಿಗೆ ಬದುಕು ಕಟ್ಟಿಕೊಳ್ಳುವ ಸ್ಥಳವಾಗಿದೆ. ಈ ಕ್ಷೇತ್ರದ ಚಿಕ್ಕಬಾಣಾವರ ಸೇರಿದಂತೆ ಕೆಲವು ಗ್ರಾಮಪಂಚಾಯ್ತಿಗಳನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ಮೂಲಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮರಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪಾರ್ವತಿ ಚಂದ್ರಪ್ಪ, ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೃತಿ ಸುರೇಶ್, ವಸತಿ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ರಾಜೀವ್ ಗಾಂಧಿ ವಸತಿ ನಿಗಮ ನಿಯಮ ವ್ಯವಸ್ಥಾಪಕ ನಿರ್ದೇಶಕ ಡಾ|| ವಿ.ರಾಮಪ್ರಸಾದ್ ಮನೋಹರ್, ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಅವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

***********

Leave a Reply