ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟಕ್ಕೆ ಸಜ್ಜಾಗುತ್ತಿದ್ಯಾ ವೇದಿಕೆ..?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸರ್ಕಾರ ಆಡಳಿತದಲ್ಲಿದ್ದಾಗ ಬಿಜೆಪಿ ಶಾಸಕರಾದ ಉಮೇಶ್‌ ಕತ್ತಿ ಪ್ರತ್ಯೇಕ ಕರ್ನಾಟಕ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಲಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎನ್ನುತ್ತ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಿದ್ರೆ, ನಾನೇ ಮುಂದಾಳತ್ವ ವಹಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ರು. ಇದೇ ರೀತಿ ಪ್ರತ್ಯೇಕ ರಾಜ್ಯದ ಹೆಸರು ಹೇಳಿಕೊಂಡು ಸಾಕಷ್ಟು ಕೆಲಸಗಳನ್ನು ಮಾಡಿಸಿಕೊಳ್ಳಲು ತಂತ್ರಗಾರಿಕೆಯಾಗಿ ಬಳಸುತ್ತಿದ್ರು. ಇದೀಗ ಮತ್ತೆ ಪ್ರತ್ಯೇಕ ರಾಜ್ಯ ಕೂಗು ಜೋರಾಗುವ ಸಾಧ್ಯತೆ ಹೆಚ್ಚಾಗಿದೆ. ಅದೂ ಕೂಡ ಸ್ವಂತ ಬಿಜೆಪಿ ಪಕ್ಷದ ವಿರುದ್ಧವೇ ಕತ್ತಿ ತನ್ನ ಹಳೇ ವರಸೆ ಶುರು ಮಾಡಿದ್ದಾರೆ. ಉಮೇಶ್‌ ಕತ್ತಿ ವರಸೆಗೆ ಬಿಜೆಪಿ ನಾಯಕರೇ ಸಾಥ್‌ ಕೊಡುವ ಮುನ್ಸೂಚನೆ ಕೊಟ್ಟಿದ್ದಾರೆ.

ವಿಧಾನಸಭಾ ಅಧಿವೇಶದ ಸಮಯದಲ್ಲೇ ಮಾತನಾಡಿರುವ ಬಿಜೆಪಿ ಶಾಸಕ ಉಮೇಶ್‌ ಕತ್ತಿ, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಕಿಡಿ ಕಾರಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗದೆ ಬೇರೆ ದಾರಿ ಇಲ್ಲ. ಅಖಂಡ ಕರ್ನಾಟಕದಲ್ಲಿ ಇದ್ದುಕೊಂಡು ಉದ್ದಾರವಾಗುತ್ತೇವೆ ಎಂಬ ಭ್ರಮೆ ನಮಗೆ ಇಲ್ಲ ಎಂದಿದ್ದಾರೆ. ಕರ್ನಾಟಕವನ್ನು ಪ್ರತ್ಯೇಕಿಸಬೇಕು ಎಂಬ ಇಚ್ಚೆ ನನಗೇನೂ ಇರಲಿಲ್ಲ. ಆದರೆ ಕಳೆದ ಹಲವು ವರ್ಷಗಳಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ. ಇದೀಗ ಯಡಿಯೂರಪ್ಪ ಸರ್ಕಾರದಲ್ಲೂ ಮುಂದುವರಿದಿದೆ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಇಳಿಯಲು ನಾನು ಸಿದ್ಧ ಎಂದಿದ್ದರು. ಇದೀಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಪರ ವಿರೋಧ ಚರ್ಚೆ ಶುರುವಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಶಾಸಕ ಉಮೇಶ್‌ ಕತ್ತಿ ಮಾತನ್ನು ವಿರೋಧಿಸಿದ್ದಾರೆ. ಪ್ರತ್ಯೇಕ ರಾಜ್ಯ ಕೇಳುವುದು ತಪ್ಪು, ಅಖಂಡ ಕರ್ನಾಟಕ ಆಗಲಿ ಎಂದು ಹೋರಾಟ ಮಾಡಿದ್ದೇವೆ. ರಾಜ್ಯ ವಿಭಜನೆ ಮಾತು , ರಾಜೀನಾಮೆ ಕೊಡುತ್ತೆವೆ ಎನ್ನುವುದು ತಪ್ಪು. ಉಮೇಶ್ ಖತ್ತಿ ಸದನದಲ್ಲಿ ಹೋರಾಟ ಮಾಡಿ ತಮ್ಮ ಕ್ಷೇತ್ರಕ್ಕೆ ಅನುದಾನ ತರಿಸಿಕೊಳ್ಳಲಿ. ಪ್ರತ್ಯೇಕ ರಾಜ್ಯದ ಮಾತು ಬೇಡ ಎಂಬ ಸಲಹೆ ನೀಡಿದ್ದರು. ಬೇಕಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ, ಪ್ರತ್ಯೇಕ ರಾಜ್ಯ ರಚನೆ ಒತ್ತಾಯ ಬೇಡ ಎಂದಿದ್ದಾರೆ.

ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಮಾತನಾಡಿ ಮಾಜಿ ಸಚಿವ ಉಮೇಶ್ ಕತ್ತಿಗೆ ಟಾಂಗ್ ಕೊಟ್ಟಿದ್ದಾರೆ. ಈ ಬಾರಿ ಸಿಎಂ ಯಡಿಯೂರಪ್ಪ ಅತ್ಯಂತ ಸಮತೋಲಿತ ಬಜೆಟ್ ಕೊಟ್ಟಿದ್ದಾರೆ‌. ಅದರಲ್ಲೂ ಉತ್ತರ ಕರ್ನಾಟಕ ಭಾಗದ ನೀರಾವರಿಗೆ ಹೆಚ್ವಿನ ಪಾಲು ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೆ ಬೇಕಾದರೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ‌. ಹಾಗಾಗಿ ಉಮೇಶ್‌ ಕತ್ತಿ ಅವರು ಕೇಳಿದ್ದಾರೆ. ಆದರೆ, ಬಿಜೆಪಿ ಶಿಸ್ತಿನ ಪಕ್ಷ. ಯಾರಿಗಾದರೂ ಅಸಮಾಧಾನವಿದ್ದರೆ ಅದನ್ನು ಪಕ್ಷದ ವೇದಿಕೆಯಲ್ಲಿ ಪ್ರಶ್ನಿಸಿ ಬಗೆ ಹರಿಸಿಕೊಳ್ಳಬಹುದು ಎಂದಿದ್ದಾರೆ.

ಉಮೇಶ ಕತ್ತಿ ಪ್ರತ್ಯೇಕ ರಾಜ್ಯದ ಬೇಡಿಕೆ ಬಗ್ಗೆ ಮಾತನಾಡಿರುವ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌, ಉತ್ತರ ಕರ್ನಾಟಕ ಪ್ರತ್ಯೇಕವಾಗುವುದಕ್ಕೆ ಈ ಭಾಗ ಅಭಿವೃದ್ಧಿಯಾಗಬೇಕು. ಕಲ್ಯಾಣ ಕರ್ನಾಟಕ ಭಾಗಕ್ಕೆ ಹಿಂದಿನ‌ ಸರಕಾರದಲ್ಲಿ ೧೫೦೦ ಕೋಟಿ ರೂಪಾಯಿ ಅನುದಾನ ನೀಡಿದ್ದರು. ಆದರೆ ಈ ಸರಕಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಮೂಲಕ ಪ್ರತ್ಯೇಕ ರಾಜ್ಯ ಕೂಗಿದೆ ದನಿಯಾಗಿದ್ದಾರೆ.

ಈ ನಡುವೆ ಭಾನುವಾರ ನಡೆದ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಉದ್ಘಾಟನಾ ಸಮಾರಂಭಕ್ಕೆ ಸಿಎಂ ಯಡಿಯೂರಪ್ಪ ಗೈರಾಗುವ ಮೂಲಕ ಉತ್ತರ ಕರ್ನಾಟಕದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಉದ್ಘಾಟನಾ ಸಮಾರಂಭಕ್ಕೆ ಸಿಎಂ ಪ್ರತಿನಿಧಿಯಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭಾಗಿಯಾಗಿದ್ರು. ಸಿಎಂ ಯಡಿಯೂರಪ್ಪ ಗೈರು ಹಾಜರಿ ಬಗ್ಗೆ ಕೂಡಲ ಸಂಗಮ ಪೀಠಧ್ಯಾಕ್ಷ ಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಹುದ್ದೆಯಲ್ಲಿರುವರು ನಾಯಕರಲ್ಲ, ಕಾಯಕದ ನೇಗಿಲು ಹೊತ್ತವರು ನಾಯಕರು. ವೋಟ್ ಪಡೆದು ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಿಲ್ಲ, ನಮ್ಮಲ್ಲಿ ಒಗ್ಗಟ್ಟಿದ್ದರೆ ಸಿಎಂ ಕೂಡ ಬರ್ತಾರೆ. ಪಿಎಂ ಕೂಡ ಬರ್ತಾರೆ. ನಾವು ಅಲ್ಪ ತೃಪ್ತರು ಅಂತಾ ಪರೋಕ್ಷವಾಗಿ ಉತ್ತರ ಕರ್ನಾಟಕ ಕೂಗಿದೆ ಬೆಂಬಲ ಸೂಚಿಸಿದ್ದಾರೆ, ಒಟ್ಟಾರೆ ಬಿಜೆಪಿ ಶಾಸಕರು ಬಿಜೆಪಿ ಸರ್ಕಾರದ ಅವಧಿಯಲ್ಲೇ ಪ್ರತ್ಯೇಕ ರಾಜ್ಯದ ಕೂಗಿಗೆ ವೇದಿಕೆ ಮಾಡುತ್ತಿದ್ದಾರೆಯೇ ಎನಿಸುತ್ತಿದೆ.

Leave a Reply