ಬಿಜೆಪಿಯಲ್ಲಿ ಮತ್ತೊಂದು ಅನಾಮಧೇಯ ಪತ್ರ ಬಾಂಬ್ ಸ್ಫೋಟ!

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿಯಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎಂದು ಗೋಚರಿಸುತ್ತಿದ್ದರು ಪಕ್ಷದೊಳಗಿನ ಆಂತರಿಕ ತಿಕ್ಕಾಟ, ಅಸಮಾಧಾನ ಆಗಾಗ್ಗೆ ವಿವಿಧ ರೂಪದಲ್ಲಿ ಹೊರಬರುತ್ತಿದೆ.

ಬಿಜೆಪಿ ಅತೃಪ್ತ ಶಾಸಕರು ಈಗ ಮತ್ತೊಂದು ಅನಾಮಧೇಯ ಪತ್ರ ಬರೆದಿದ್ದು, ಈ ಬಾರಿ ಬಿ.ವೈ ವಿಜಯೇಂದ್ರ ರನ್ನು ಗುರಿ ಮಾಡಲಾಗಿದೆ.

ಪತ್ರದಲ್ಲಿ ಸೂಪರ್‌ ಸಿಎಂ ಬಿ.ವೈ ವಿಜಯೇಂದ್ರ ದರ್ಬಾರ್‌ ನಡೆಸುತ್ತಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಜಿಎಸ್ಟಿ ಮಾದರಿಯಲ್ಲಿ ವಿಜಯೇಂದ್ರ ಟ್ಯಾಕ್ಸ್ (ವಿಎಸ್ ಟಿ) ಸಂಗ್ರಹಣೆ ಮಾಡಲಾಗುತ್ತಿದ್ದು, ಭ್ರಷ್ಟಾಚಾರ ವ್ಯಾಪಕವಾಗಿದೆ. ಯಡಿಯೂರಪ್ಪನವರ ಮುಪ್ಪಿನ ಲಾಭ ಪಡೆದು ಪರ್ಯಾಯ ಕೂಟ ರಚಿಸಿಕೊಂಡಿದ್ದಾರೆ. ಸಿಎಂ ಕುಟುಂಬ ಸದಸ್ಯರು ಕಮಿಷನ್‌ ಆಧಾರದ ಮೇಲೆ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಡುತ್ತಿದ್ದಾರೆ.

ಯಡಿಯೂರಪ್ಪನವರ ರಾಜಕೀಯ ಯುಗವನ್ನು ಮುಗಿಸಿಸಲು ವಿಜಯೇಂದ್ರ ವಾಮ ಮಾರ್ಗ ಅನುಸರಿಸಿದ್ದಾರೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಹಾಗೂ ವಂಶ ಪಾರಂಪರಿಕ ಆಡಳಿತ ಮೇಳೈಸುತ್ತಿದೆ. ಅನುವಂಶೀಯ ಆಡಳಿತಕ್ಕೆ ಸ್ವತಃ ಬಿಎಸ್‌ವೈ ಒತ್ತಾಸೆಯಾಗಿದ್ದಾರೆ. ಮಗನ ಕಾರ್ಯವೈಖರಿಯ ಬಗ್ಗೆ ತಂದೆ ಮೆಚ್ಚುಗೆ ವ್ಯಕ್ತಪಡಿಸಿರುವುದು ದುರಾದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಲಾಗಿದೆ.

ದೇವೇಗೌಡರ ಪುತ್ರ ವ್ಯಾಮೋಹವನ್ನು ಟೀಕಿಸುತ್ತಿದ್ದ ಯಡಿಯೂರಪ್ಪನವರು ಇಂದು ತಮ್ಮ ಅಧಿಕಾರವನ್ನು ಕುಟುಂಬಕ್ಕೆ ದಯಪಾಲಿಸಿ ದೃತೃರಾಷ್ಟ್ರ ಪ್ರೇಮ ತೋರಿಸುತ್ತಿದ್ದಾರೆ. ಸರ್ಕಾರದಲ್ಲಿ ಸಿಎಂ ಯಡಿಯೂರಪ್ಪ ಕೇವಲ ಉತ್ಸವ ಮೂರ್ತಿಯಾಗಿದ್ದಾರೆ. ವಿಜಯೇಂದ್ರ ತನ್ನದೇ ಆದ ಕೂಟ ರಚಿಸಿ ಸೂಪರ್‌ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಮಧ್ಯವರ್ತಿಗಳು ಹಾಗೂ ಹಣ ಕೊಟ್ಟು ಕೆಲಸ ಮಾಡಿಕೊಳ್ಳಲು ಇಚ್ಚಿಸುವರು ಈ ಕೂಟವನ್ನು ಸಂಪರ್ಕಿಸಿ ಕಮಿಷನ್‌ ಆಧಾರದ ಮೇಲೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇತ್ತ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಮುಖ್ಯಮಂತ್ರಿಗಳ ಆದೇಶ ಇದ್ದರೂ ಕೆಲಸ ಆಗದೆ ಪರಿತಪಿಸುತ್ತಿದ್ದಾರೆ.

ವಿಜಯೇಂದ್ರನ ಒಪ್ಪಿಗೆ ಹಾಗೂ ಆದೇಶ ಇಲ್ಲದೆ ಸರಕಾರದಲ್ಲಿ ಏನೂ ನಡೆಯದು ಎನ್ನುವುದು ಶಾಸಕರ ಅನುಭವ. ಪುತ್ರನನ್ನು ಭೇಟಿ ಮಾಡುವಂತೆ ಬಿಎಸ್‌ವೈ ಸೂಚನೆ ನೀಡುವುದು ನಮ್ಮ ಆತ್ಮಗೌರವಕ್ಕೆ ಧಕ್ಕೆ ಉಂಟುಮಾಡಿದೆ ಎಂದು ಅತೃಪ್ತ ಶಾಸಕರು ಅತೃಪ್ತಿ ಹೊರಹಾಕಿದ್ದಾರೆ.

ವಿಜಯೇಂದ್ರ ಸರಕಾರವನ್ನು ಪ್ರೈ ಲಿ ಕಂಪನಿಯಂತೆ ಕಾರ್ಪೋರೇಟ್‌ ಸ್ಟೈಲ್‌ನಲ್ಲಿ ನಡೆಸುತ್ತಿದ್ದಾನೆ. ಮುಂದಿನ ಮುಖ್ಯಮಂತ್ರಿ ಎನ್ನುವ ಭ್ರಮೆಯಲ್ಲಿ ಉತ್ತರಾಧಿಕಾರಿಯೆಂದು ಬಿಂಬಿಸಿಕೊಳ್ಳುತ್ತಿದ್ದಾನೆ. ಬಿಜೆಪಿ ಶಾಸಕರುಗಳ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ. ವಿರೋಧ ಪಕ್ಷಗಳ ಮುಖಂಡರುಗಳ ಕ್ಷೇತ್ರಗಳಿಗೆ ನೂರಾರು ಕೋಟಿ ಅನುದಾನ ಬಿಡುಗಡೆಗೆ ಶಿಫಾರಸ್ಸು ಮಾಡಿದ್ದಾರೆ. ಈ ಮೂಲಕ ಭ್ರಷ್ಟಾಚಾರದ ವಿರುದ್ದ ವಿರೋಧ ಪಕ್ಷಗಳ ಧ್ವನಿಯನ್ನು ಕೊಂಡುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ತಂದೆ ಮಕ್ಕಳ ಈ ವರ್ತನೆಗೆ ಶಾಸಕರು ಬೇಸತ್ತಿದ್ದೇವೆ
ಕ್ಷೇತ್ರದ ಮತದಾರರ ಮುಂದೆ ತಲೆತಗ್ಗಿಸುವಂತಾಗಿದೆ. ನಮ್ಮ ಅಳಲನ್ನು ಪಕ್ಷದ ಆಂತರಿಕ ಹಾಗೂ ಶಾಸಕಾಂಗ ಸಭೆಯಲ್ಲಿ ಹೇಳಲೂ ಅವಕಾಶ ಸಿಗುತ್ತಿಲ್ಲ. ಮುಖ್ಯಮಂತ್ರಿ ಸ್ಥಾನದ ಸಂವಿಧಾನ ಬದ್ಧ ಅಧಿಕಾರವನ್ನು ವಿಜಯೇಂದ್ರ ಚಲಾಯಿಸುತ್ತಿದ್ದಾನೆ. ಪ್ರತಿಯೊಂದು ಕೆಲಸಕ್ಕೆ ವಿಜಯೇಂದ್ರ ಮುಂದೆ ತಲೆತಗ್ಗಿಸಿ ನಿಲ್ಲುವಂತ ಅನಿವಾರ್ಯತೆ ಶಾಸಕರಿಗೆ ಬಂದೊದಗಿದೆ. ಸ್ವಾಭಿಮಾನ ಮೂಲ ಮಂತ್ರವಾಗಿರುವ ಬಿಜೆಪಿ ಪಕ್ಷದ ಶಾಸಕರುಗಳು ಸಿಎಂ ಪುತ್ರನ ಮುಂದೆ ಅಂಗಲಾಚುವುದು ನಾಚಿಗೇಡಿನ ಸಂಗತಿಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಶಾಸನ ಬದ್ಧ ಅಧಿಕಾರ ಮಗ ಚಲಾಯಿಸುತ್ತಿರುವುದು ಶಾಸಕರು ಹಾಗೂ ಪಕ್ಷಕ್ಕೆ ಮಾಡುತ್ತಿರುವ ಅವಮಾನವಾಗಿದೆ. ಕೇಂದ್ರದ ಪ್ರಾಮಾಣಿಕ ಆಡಳಿತ ರಾಜ್ಯದ ಭ್ರಷ್ಟ ಆಡಳಿತದಿಂದ ದ್ವಂದ್ವ ಉಂಟಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಕಾರ್ಯಗಳು ಆಗುತ್ತಿಲ್ಲ ಹಾಗೂ ಶಾಸಕರು ಸ್ಪಂದಿಸಲು ಆಗುತ್ತಿಲ್ಲ. ಆಡಳಿತದಲ್ಲಿರುವ ಭ್ರಷ್ಟಾಚಾರ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಲಾಗಿದೆ.

ಪತ್ರದ ಪೂರ್ಣ ವಿವರ ಇಲ್ಲಿದೆ…

Leave a Reply