ಕರ್ನಾಟಕ, ಮಧ್ಯ ಪ್ರದೇಶ ಆಪರೇಷನ್ ಕಮಲ ಸೇಮ್ ಟು ಸೇಮ್..!

ಡಿಜಿಟಲ್ ಕನ್ನಡ ಟೀಮ್:

History Repeats… ಇತಿಹಾಸ ಮರುಕಳಿಸುತ್ತದೆ ಎಂಬ ಮಾತನ್ನು ಕೇಳಿದ್ದೇವೆ. ಆದರೆ ರಾಜಕೀಯದಲ್ಲಿ ಇದು ಸರ್ವೇ ಸಾಮಾನ್ಯ. ಏಳೆಂಟು ತಿಂಗಳ ಹಿಂದೆ ರಾಜ್ಯ ರಾಜಕೀಯಕ್ಕೂ ಈಗ ಮಧ್ಯ ಪ್ರದೇಶ ರಾಜಕೀಯ ಕೂಡ ಈ ಮಾತನ್ನು ಖಚಿತಪಡಿಸುತ್ತಿದೆ.

ಕಳೆದ ವರ್ಷ ಜುಲೈನಲ್ಲಿ ಕಾಂಗ್ರೆಸ್, ಜೆಡಿಎಸ್‌ನ 17 ಶಾಸಕರನ್ನು ಮುಂಬೈನಲ್ಲಿಟ್ಟಿದ್ದ ಬಿಜೆಪಿ ನಾಯಕರು ಸರ್ಕಾರ ಉರುಳಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಆದರೆ ಅಂದಿನ ಪ್ರಭಾವಿ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅಂತಿಮ ಪ್ರಯತ್ನವಾಗಿ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಮನವೊಲಿಸಿ ವಾಪಸ್ ಕರೆದುಕೊಂಡು ಬರುವ ಮನಸ್ಸು ಮಾಡಿದ್ದರು. ಶಾಸಕರು ಉಳಿದುಕೊಂಡಿದ್ದ ಹೋಟೆಲ್‌ನಲ್ಲೇ ರೂಮ್ ಬುಕ್ ಮಾಡಿಕೊಂಡು ಮುಂಬೈಗೆ ತೆರಳಿದ್ದರು. ಹೋಟೆಲ್‌ನವರ ಮೇಲೆ ಮಹಾರಾಷ್ಟ್ರ ಸರ್ಕಾರ ಒತ್ತಡ ತಂದು ರೂಮ್ ಬುಕ್ಕಿಂಗ್ ರದ್ದು ಮಾಡಿಸಿದೆ ಎಂದು ಕೋಪಗೊಂಡ ಡಿ.ಕೆ ಶಿವಕುಮಾರ್ ಮಳೆಯಲ್ಲೇ ನೆನೆಯುತ್ತ ನಿಂತರು. ಅಲ್ಲೇ ಬೀದಿಯಲೇ ತಿಂಡಿ ತಿಂದು ಕುಳಿತರು. ಆದರೂ ಹೋಟೆಲ್ ಒಳಗೆ ಹೋಗಲು ಅವಕಾಶ ಕೊಡದ ಪೊಲೀಸರು, ಡಿಕೆ ಶಿವಕುಮಾರ್ ಅವರನ್ನು ವಶಕ್ಕೆ ಪಡೆದುಕೊಂಡು ಏರ್ಪೋರ್ಟ್‌ಗೆ ತಂದು ಬೆಂಗಳೂರು ಫ್ಲೈಟ್ ಹತ್ತಿಸಿ ಮಹಾರಾಷ್ಟ್ರದಿಂದ ಹೊರಗೆ ಕಳುಹಿಸುವ ಕೆಲಸ ಮಾಡಿದ್ದರು‌. ಈ ಎಲ್ಲ ಘಟನೆಗಳು ನಮ್ಮ ಕಣ್ಮುಂದೆಯೇ ಇದೆ. ಈ ಘಟನೆ ಈಗ ಕರ್ನಾಟಕದಲ್ಲಿ ಮರುಕಳಿಸಿದೆ.

ಹೌದು, ಮಧ್ಯಪ್ರದೇಶದ 20 ಶಾಸಕರನ್ನು ಹೈಜಾಕ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರನ್ನು ಉರುಳಿಸುವ ಎಲ್ಲಾ ಸಾಧ್ಯತೆ ಜೊತೆ ಹೊರಟಿದ್ದು, ಎಲ್ಲಾ ಶಾಸಕರನ್ನು ದೇವನಹಳ್ಳಿ ಬಳಿಯ ಪ್ರೇಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‌ನಲ್ಲಿ ಇರಿಸಲಾಗಿದೆ. ಮಧ್ಯಪ್ರದೇಶ ಸಚಿವರು ಬೆಂಗಳೂರಿಗೆ ಬಂದಿಳಿದಿದ್ದು, ತಮ್ಮ ಪಕ್ಷದ ಶಾಸಕರ ಮನವೊಲಿಸುವ ಕಸರತ್ತು ನಡೆಸಿದ್ದಾರೆ. ಆದರೆ ಕರ್ನಾಟಕ ಸರ್ಕಾರ, ರೆಸಾರ್ಟ್‌ನಲ್ಲಿದ್ದ ಶಾಸಕರು ದೂರು ನೀಡಿದ್ದಾರೆ ಎಂದು ಶಾಸಕರನ್ನ ಬಲವಂತವಾಗಿ ಮನವೊಲಿಸಲು ಯತ್ನದ ಆರೋಪದ ಮೇಲೆ ಮಧ್ಯಪ್ರದೇಶದಿಂದ ಬಂದಿದ್ದ 10 ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರನ್ನು ಬೆಂಗಳೂರು ಉತ್ತರ ತಾಲೂಕಿನ ಸಾಧಹಳ್ಳಿ ಬಳಿಯ ಎಂಬೆಸ್ಸಿ ರೆಸಾರ್ಟ್ ಬಳಿ ಬಂಧನ ಮಾಡಿದ್ದಾರೆ. ಈ ನಡುವೆ ರೆಸಾರ್ಟ್‌ಗೆ ಬಾರಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಮಧ್ಯಪ್ರದೇಶ ಸಚಿವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಪೊಲೀಸರ ಚಿಂತನೆ ನಡೆಸಿದ್ದರು. ಬಂಧಿಸಲು ಬಂದ ಪೊಲೀಸ್ ಅಧಿಕಾರಿ ಜೊತೆ ಮಧ್ಯಪ್ರದೇಶದ ಶಿಕ್ಷಣ ಸಚಿವ ಜೀತು ಪಟ್ವಾನಿ ವಾಗ್ವಾದ ನಡೆಸಿದ್ದಾರೆ.

ದೇವನಹಳ್ಳಿ ಪ್ರೆಸ್ಟೀಜ್ ಗಲ್ಫ್ ಶೇರ್ ಮುಂದೆ ಹೈ ಡ್ರಾಮವೇ ನಡೆದಿದ್ದು, ಮಧ್ಯಪ್ರದೇಶದಿಂದ‌ ಬಂದಿರುವ ಕಾಂಗ್ರೆಸ್ ಮುಖಂಡರ ಒಂದು ತಂಡವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಟೀಂ ಜೊತೆ ಸ್ಥಳೀಯ ಕಾಂಗ್ರೇಸ್ ಮುಖಂಡರಿದ್ದು, 500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. 10 ಕೆಎಸ್‌ಆರ್ಪಿ, ಮೂವರು DySP, 8 ಮಂದಿ ಸರ್ಕಲ್ ಇನ್ಸ್ಪೆಕ್ಟರ್ , 15 ಮಂದಿ ಸಬ್ ಇನ್ಸ್‌ಪೆಕ್ಟರ್ ಗಳ ನಿಯೋಜನೆ ಮಾಡಲಾಗಿದೆ. ದೇವನಹಳ್ಳಿ ನಂದಿ ಬೆಟ್ಟ ಹೆದ್ದಾರಿ ಸಂಪೂರ್ಣ ಖಾಕಿ ಮಯವಾಗಿದ್ದು, ಕಾಂಗ್ರೆಸ್ ಮುಖಂಡರನ್ನು ತಡೆಯಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಕಾರ್ಯಕರ್ತರ ವಶಕ್ಕೆ ಪಡೆಯಲು ಮೂರು ಸಾರಿಗೆ ಬಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಒಟ್ಟಾರೆ ಮುಂಬೈನಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಅಂದಿನ ಬಿಜೆಪಿ‌ ಸರ್ಕಾರ ನಡೆಸಿಕೊಂಡ ರೀತಿಯಲ್ಲೇ ಇಂದಿನ ಬಿಜೆಪಿ ಸರ್ಕಾರ ಮಧ್ಯಪ್ರದೇಶ ಸಚಿವರನ್ನು ನಡೆಸಿಕೊಳ್ತಿದೆ.

Leave a Reply