ಪೊಲೀಸರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕೆ ಹೊರತು, ಬಿಜೆಪಿ ಕಾರ್ಯಕರ್ತರಂತೆ ಅಲ್ಲ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಮಧ್ಯ ಪ್ರದೇಶ ಶಾಸಕರು ಉಳಿದುಕೊಂಡಿರುವ ರೆಸಾರ್ಟ್ ನಲ್ಲಿ ಕಾರಣವಿಲ್ಲದೆ ನಮಗೆ ಪ್ರವೇಶ ನಿರಾಕರಿಸಲಾಗಿದೆ. ಪೊಲೀಸರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕೆ ಹೊರತು ಬಿಜೆಪಿ ಕಾರ್ಯಕರ್ತರಂತೆ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಸಭೆ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರೂ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ನಡೆಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಿರ್ಗಮಿತ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಮಾಜಿ ಸಚಿವರಾದ ಹೆಚ್.ಕೆ ಪಾಟೀಲ್, ಆರ್.ವಿ ದೇಶಪಾಂಡೆ, ಶಾಸಕರಾದ ಅಜೇಯ್ ಧರ್ಮಸಿಂಗ್, ಪ್ರದೇಶ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ವಿ.ಎಸ್. ಉಗ್ರಪ್ಪ ಮತ್ತಿತರರು ಇದ್ದರು.

ಈ ವೇಳೆ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು…

‘ಮಧ್ಯಪ್ರದೇಶ ಮಾಜಿ ಸಿಎಂ ಹಾಗೂ ರಾಜ್ಯಸಭಾ ಚುನಾವಣೆ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಆ ರಾಜ್ಯದ ಶಾಸಕರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದಾರೆ. ಅವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ಅವರ ಶಾಸಕರ ಬಳಿ ಮತ ಕೇಳಲು ಅವರಿಗೆ ಅಧಿಕಾರವಿದೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ. ಆದರೆ ಪೊಲೀಸರು ದಿಗ್ವಿಜಯ್ ಸಿಂಗ್ ಅವರನ್ನು ತಡೆದು ಅವರ ಹಕ್ಕನ್ನು ಕಸಿದುಕೊಂಡಿದ್ದಾರೆ.

ಶಾಸಕರ ಭೇಟಿಗೆ ಅವಕಾಶ ನೀಡುವಂತೆ ಪೊಲೀಸ್ ಆಯುಕ್ತ, ಡಿಜಿಯನ್ನೂ ಕೇಳಿದ್ದೇವೆ. ಭೇಟಿ ಮಾಡಲು ಅವಕಾಶ ನೀಡದಿರಲು ಏನಾದರೂ ಕಾನೂನು ಇದೆಯೇ? ಮಧ್ಯ ಪ್ರದೇಶ ಶಾಸಕರು ತಮಗೆ ರಕ್ಷಣೆ ಬೇಕು ಎಂದು ಕೇಳಿದ್ದಾರೆ ಹೊರತು, ತಾವು ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಹೇಳಿಲ್ಲ. ಬರಿ ಬಿಜೆಪಿಯವರು ರೆಸಾರ್ಟ್ ನಲ್ಲಿ ಇರಬಹುದೇ ಎಂದು ಪೊಲೀಸರಲ್ಲಿ ಕೇಳಿದ್ದೇವೆ.

ಮೊದಲು ಅಲ್ಲಿರುವ ಶಾಸಕರನ್ನು ಖಾಲಿ ಮಾಡಿಸಿ ಎಂದು ನಾವು ಒತ್ತಾಯಿಸಿದ್ದೇವೆ. ಆದರೆ ಈಗ ಒಂದೊಂದೇ ವಿಡಿಯೋ ಬಿಡಲು ಶುರು ಮಾಡಿದ್ದಾರೆ ಎಂದರು.

ರೆಸಾರ್ಟ್ ನಲ್ಲಿರುವ ಶಾಸಕರು ತಮಗೆ ಎಸ್ಕಾರ್ಟ್ ನೀಡುವಂತೆ, ಭದ್ರತೆ ನೀಡುವಂತೆ ಕರ್ನಾಟಕ ಪೊಲೀಸರಿಗೆ ಪತ್ರ ಕೊಟ್ಟಿದ್ದಾರೆ. ಆದರೆ, ನಮಗೆ ರೆಸಾರ್ಟ್ ಒಳಗೆ ಬಿಡುತ್ತಿಲ್ಲ. ಅವರನ್ನು ಅಲ್ಲಿಂದ ವೆಕೇಟ್ ಮಾಡದಿದ್ದರೆ ನಮ್ಮ ರಾಜಕಾರಣ ನಾವು ಮಾಡುತ್ತೇವೆ ಎಂದು ಹೇಳಿಬಂದಿದ್ದೇವೆ.

ಪೊಲೀಸರು ಬಿಜೆಪಿ ಕಾರ್ಯಕರ್ತರಂತೆ ನಡೆದುಕೊಳ್ಳಬೇಡಿ, ಸಂವಿಧಾನದಲ್ಲಿ ನಿಮಗೆ ಯಾವ ರೀತಿ ನಡೆದುಕೊಳ್ಳಬೇಕೆಂಬುದಿದೆ. ನಾವು ರೆಸಾರ್ಟ್ ಗೆ ಹೋಗಬೇಡಿ ಅನ್ನಲು ಪೊಲೀಸರಿಗೆ ಹಕ್ಕಿಲ್ಲ. ದಿಗ್ವಿಜಯ್ ಸಿಂಗ್ ಅವರನ್ನು ರೆಸಾರ್ಟ್ ಪ್ರವೇಶ ತಡೆಯಲು ಕಾರಣವೇನು? ಅವರೇನು ಶಸ್ತ್ರಾಸ್ತ್ರಗಳೊಂದಿಗೆ ರೆಸಾರ್ಟ್ ಪ್ರವೇಶ ಮಾಡುತ್ತಿದ್ದರೆ?’

ನಮ್ಮ ಶಾಸಕರ ಮತ ಕೇಳಲು ಹೋಗಿದ್ದೆ: ದಿಗ್ವಿಜಯ್ ಸಿಂಗ್

ನಂತರ ಮಾತನಾಡಿದ ದಿಗ್ವಿಜಯ್ ಸಿಂಗ್, ‘ನಾನೇನು ಕುದುರೆ ವ್ಯಾಪಾರಕ್ಕಾಗಿ ರೆಸಾರ್ಟ್ ಗೆ ಹೋಗಿರಲಿಲ್ಲ. ನಮ್ಮ ಪಕ್ಷದ ಶಾಸಕರು ಅಲ್ಲಿದ್ದರು, ಅವರನ್ನು ಭೇಟಿ ಮಾಡಿ‌ ಮತ ಕೇಳಲು ಹೋಗಿದ್ದೆ. ಆದರೆ ನಮಗೆ ರೆಸಾರ್ಟ್ ಒಳಗೆ ಬಿಡಲಿಲ್ಲ, ನಮ್ಮನ್ನು ಬಂಧಿಸಿದರು. ಈ ರೀತಿ ಬಂಧಿಸಲು ಅವಕಾಶ ಕೊಟ್ಟವರು ಯಾರು?

ರೆಸಾರ್ಟ್ ಸಾರ್ವಜನಿಕ ಸ್ಥಳ, ಅಲ್ಲಿಗೆ ಭೇಟಿಗೆ ಅವಕಾಶ ಕೊಡುತ್ತಿಲ್ಲ.‌ ಕರ್ನಾಟಕ ಪೊಲೀಸರೇಕೆ ತಡೆಯುತ್ತಿದ್ದಾರೆ, ಯಾವ ಕಾನೂನಿನಡಿ ನಮ್ಮನ್ನು ತಡೆಯಲಾಗುತ್ತದೆ, ಆ ವರ್ತನೆ ಏಕೆಂಬುದು ನನ್ನ ಆಕ್ಷೇಪ. ರೆಸಾರ್ಟ್ ನಲ್ಲಿರುವವರು ಹಲವು ದಶಕದಿಂದ ನನ್ನ ಜತೆ ಇದ್ದವರು.

ಅಮಿತ್ ಷಾ, ನರೇಂದ್ರ ಮೋದಿ ನಿರ್ದೇಶನದ ಮೇಲೆ ಇದೆಲ್ಲ ನಡೆಯುತ್ತಿದೆ. ಬಿಜೆಪಿ ಪ್ರಜಾತಂತ್ರ ಮೌಲ್ಯವನ್ನು ಹಾಳು ಮಾಡುತ್ತಿದೆ. ಕರ್ನಾಕದಲ್ಲೂ ಹಾರ್ಸ್ ಟ್ರೇಡಿಂಗ್ ಮಾಡಿದ್ದು ಗೊತ್ತಿದೆ. ಅದನ್ನ ಬಿಜೆಪಿ ಈಗಲೂ ಮುಂದುವರಿಸಿಕೊಂಡು ಬರುತ್ತಿದೆ. ಈ ಶಾಸಕರಿಗೆ ಚಾರ್ಟೆಡ್ ಫ್ಲೈಟ್ ಬುಕ್ ಮಾಡಿರೋದು ಬಿಜೆಪಿ. ಹೊಟೇಲ್ ಬುಕ್ ಮಾಡಿರೋದು ಬಿಜೆಪಿ. ಶಾಸಕರ ಖರೀದಿ ಮಾಡ್ತಿರೋದು ಬಿಜೆಪಿ. ಇದೆಲ್ಲವೂ ಬಹಿರಂಗವಾಗಿಯೇ ನಡೆಯುತ್ತಿದೆ.

ಸಾರ್ವಜನಿಕ ಸ್ಥಳಗಳಿಗೆ ಎಲ್ಲರೂ ಹೋಗಬಹುದು. ರಮಡಾ ಹೊಟೇಲ್ ನಲ್ಲಿ ನಮ್ಮ ಶಾಸಕರಿದ್ದಾರೆ. ಸಾರ್ವಜನಿಕ ಸ್ಥಳಕ್ಕೆ ಹೋದರೆ ತಡೆದಿದ್ದು ಯಾಕೆ? ಸಾರ್ವಜನಿಕ ಸ್ಥಳಕ್ಕೆ ಅಷ್ಟೊಂದು ಪೊಲೀಸರನ್ನ ಹಾಕಿರೋದು ಯಾಕೆ? ಸಿಎಂ ಯಡಿಯೂರಪ್ಪ ಆದೇಶದಿಂದ ತಾನೇ ಈ ಭದ್ರತೆ? ಶಾಸಕರನ್ನ ಖರೀದಿಸುತ್ತಿರುವುದಕ್ಕೆ ಇನ್ನೇನು ಸಾಕ್ಷಿ ಬೇಕು?

ಶಾಸಕ ಮನೋಜ್ ಚೌದರಿ ರೆಸಾರ್ಟ್ ನಲ್ಲಿದ್ದಾರೆ. ಅವರನ್ನ ಭೇಟಿ ಮಾಡೋಕೆ ಅವರ ತಂದೆ ನಾರಾಯಣ ಚೌದರಿ ಭೇಟಿ ಕೊಟ್ಟಿದ್ರು. ಮಗನನ್ನ ನೋಡೋಕೆ ತಂದೆಗೆ ಅವಕಾಶವಿಲ್ಲವೆಂದ್ರೆ ಹೇಗೆ?

ಪೊಲೀಸರ ನಿರ್ಧಾರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ರಾಜ್ಯ ಪೊಲೀಸರು ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶ ಗಾಳಿಗೆ ತೂರಿದ್ದಾರೆ. ನಾವು ಶಾಸಕರ ಭೇಟಿಗೆ ನ್ಯಾಯಾಲದ ಮೊರೆ ಹೋಗಿದ್ದೇವೆ.

ಪ್ರಸ್ತುತ ರಾಜಕೀಯ ಬೆಳವಣಿಗೆಯನ್ನ ಜನರು ಗಮನಿಸುತ್ತಿದ್ದಾರೆ. ಬಿಜೆಪಿಯ ಕಾರ್ಯಕ್ರಮಗಳು ಹೇಗಿದೆ ಜನರಿಗೆ ಅರ್ಥವಾಗುತ್ತಿದೆ. ವ್ಯಾಪಂ ಕೇಸ್,ಮನಿ ಲ್ಯಾಂಡರಿಂಗ್, ಹನಿಟ್ರ್ಯಾಪ್ ಪ್ರಕರಣ ನಡೆದಿವೆ. ಇದೆಲ್ಲದರ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ.

ಮೈನಿಂಗ್ ಮಾಫಿಯಾಕೆ ಕಮಲ್ ನಾಥ್ ಕಡಿವಾಣ ಹಾಕಿದ್ದರು. ಆಡಳಿತದಲ್ಲಿ ಪಾರದರ್ಶಕತೆಯನ್ನ ತಂದಿದ್ದರು. ಡೇ ಒನ್ ನಿಂದಲೂ ಬಿಜೆಪಿಯ ವಿರೋಧವಿತ್ತು. ಸರ್ಕಾರ ರಚನೆಯಿಂದಲೂ ಶಾಸಕರನ್ನ ಸೆಳೆಯುವ ಪ್ರಯತ್ನ ಮಾಡಿದ್ದರು.

ನಮ್ಮದು ಸಿದ್ಧಾಂತದ ಮೇಲೆ ನಂಬಿಕೆಯಿಟ್ಟಿರುವ ಪಕ್ಷ. ಮಹಾತ್ಮಗಾಂಧಿ, ನೆಹರು ಅವರ ಐಡಿಯಾಲಜಿ ಮೇಲೆ ನಿಂತಿರುವ ಪಕ್ಷ ಕಾಂಗ್ರೆಸ್.

ದೇಶದಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ಉದ್ಯೋಗವಿಲ್ಲದೆ ಜನ ಪರದಾಡುತ್ತಿದ್ದಾರೆ. ಕೊರೋನಾ ವೈರಸ್ ಇಂದು ತಲ್ಲಣವನ್ನೇ ಮೂಡಿಸಿದೆ. ಇದರ ಬಗ್ಗೆ ಗಮನ ಹರಿಸೋಕೆ ಪ್ರಧಾನಿಗೆ ಬಿಡುವಿಲ್ಲ. ಬಿಜೆಪಿ ನಾಯಕರು ಶಾಸಕರ ಖರೀದಿಗೆ ಒತ್ತು ನೀಡಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ಬಂದ ಸರ್ಕಾರಗಳನ್ನ ಉರುಳಿಸ್ತಿದ್ದಾರೆ’
ಎಂದರು.

Leave a Reply