ಡಿಜಿಟಲ್ ಕನ್ನಡ ಟೀಮ್:
ಕೊರೋನಾ ವೈರಸ್ ಸೋಂಕು ವಿರುದ್ಧದ ಹೋರಾಟ ಜಗತ್ತಿನ ಮೂರನೇ ಮಹಾಯುದ್ಧ. ಇದರ ವಿರುದ್ಧದ ಇಡೀ ಭಾರತ ಒಟ್ಟಾಗಿ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದು, ಇದೇ ಭಾನುವಾರ ಎಲ್ಲರೂ ತಮ್ಮನ್ನು ತಾವು ಮನೆಯಲ್ಲೇ ಕೂಡಿ ಹಾಕಿಕೊಂಡು ಜನತಾ ಕರ್ಫ್ಯೂ ಹೇರಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಕೊರೋನಾ ಸೋಂಕು ವಿಚಾರವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ, ಹೇಳಿದ್ದಿಷ್ಟು…
ಕೊರೋನಾ ವೈರಸ್ ಬಗ್ಗೆ ಜಗತ್ತು ಎರಡು ತಿಂಗಳಿಂದ ಮಾತನಾಡುತ್ತಿದ್ದಾರೆ. ದೇಶದ ಜನರು ಕೊರೋನಾ ವೈರಸ್ ಬಗ್ಗೆ ಆತಂಕಕ್ಕೆ ಈಡಾಗಿದ್ದು, ಇಡೀ ಮಾನವ ಸಮೂಹ ಸಂಕಟಕ್ಕೆ ಸಿಲುಕಿದೆ. ಈ ಮಾರಕ ಮಹಾಮಾರಿಗೆ ಯಾವುದೇ ಔಷಧವನ್ನು ಕಂಡು ಹಿಡಿಯಲಾಗಿಲ್ಲ. ಕೊರೋನಾ ವೈರಸ್ನಿಂದ ದೇಶದ ಜನರು ನಿಶ್ಚಿಂತೆಯಿಂದ ಇರಲು ಸಾಧ್ಯವಾಗುತ್ತಿಲ್ಲ. ಆದರೂ ಈ ಬಗ್ಗೆ ಜನರು ಹೆದರುವ ಅವಶ್ಯಕತೆ ಇಲ್ಲ.
ಪ್ರತಿ ಬಾರಿ ನಾನು ನಿಮ್ಮಲ್ಲಿ ಏನೇ ಕೇಳಿದರೂ ನೀವು ಅದನ್ನು ನೀಡಿ ಆಶೀರ್ವದಿಸಿದ್ದೀರಾ. ಈಗ ಮತ್ತೊಮ್ಮೆ ನಿಮ್ಮ ಮುಂದೆ ಬೇಡಿಕೆ ಇಡುತ್ತಿದ್ದು, ನಾನು ನಿಮ್ಮಲ್ಲಿ ವಿನಮ್ರವಾಗಿ ಕೇಳಿಕೊಳ್ಳುತ್ತಿದ್ದೇನೆ. ನಿಮ್ಮ ಮುಂದಿನ ಕೆಲವು ದಿನಗಳು ನನಗೆ ಬೇಕಾಗಿದೆ. ಕೊರೋನಾ ವೈರಸ್ ಅನ್ನು ನಾವೆಲ್ಲರೂ ಎಚ್ಚರಿಕೆಯಿಂದ ಒಟ್ಟಾಗಿ ಎದುರಿಸಬೇಕಾಗಿದೆ. ಹೀಗಾಗಿ ದಯವಿಟ್ಟು ಎಲ್ಲರೂ ಪ್ರತ್ಯೇಕವಾಗಿ ಇರೋಣ. ಗುಂಪು ಸೇರುವುದು ಬೇಡ, ಸಾಮಾಜಿಕವಾಗಿ ಸ್ವಲ್ಪ ದಿನ ಅಂತರವನ್ನು ಕಾಯ್ದುಕೊಳ್ಳೋಣ. ನಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಆರೋಗ್ಯವಾಗಿರಲು ನಮಗೆ ಸಂಯಮ ಕಡ್ಡಾಯವಾಗಿದೆ. ಕೆಲ ವಾರಗಳವರೆಗೆ ಜನರು ಅಗತ್ಯವಿದ್ದರೆ ಮಾತ್ರ ತಮ್ಮ ಮನೆಗಳಿಂದ ಹೊರಗೆ ಹೋಗಬೇಕು ಎಂದು ನಾನು ವಿನಂತಿಸುತ್ತೇನೆ.
ಇಂತಹ ಸಂಕಷ್ಟಕರ ಸಮಯದಲ್ಲಿ ಜನರು ತಮ್ಮಷ್ಟಕ್ಕೆ ತಾವೇ ಕರ್ಫ್ಯೂ ವಿಧಿಸಿಕೊಳ್ಳಬೇಕು. ಈ ಮೂಲಕ ಮಾರಕ ಸೋಂಕು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಇದೇ ಮಾರ್ಚ್ 22ರ ಭಾನುವಾರದಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದೇಶದ ಪ್ರತಿಯೊಬ್ಬರು ಜನತಾ ಕರ್ಫ್ಯೂ ಪಾಲಿಸಬೇಕು. ಈ ಸಮಯದಲ್ಲಿ ಯಾರೊಬ್ಬರೂ ಕೂಡ ತಮ್ಮ ಮನೆಯಿಂದ ಹೊರಗೆ ಬರಬಾರದು.
ಆಸ್ಪತ್ರೆಗೆ ರೊಟಿನ್ ಚೆಕಪ್ಗೆ ಹೋಗುವುದನ್ನು ನಿಲ್ಲಿಸಿ, ಒಂದು ವೇಳೆ ನಿಮಗೆ ಅತ್ಯಗತ್ಯವಲ್ಲದ ಶಸ್ತ್ರಚಿಕಿತ್ಸೆಗೆ ದಿನಾಂಕ ನಿಗದಿಯಾಗಿದ್ದರೆ ಅದನ್ನು ಒಂದು ತಿಂಗಳುಗಳ ಕಾಲ ಮುಂದೂಡಿ. ಆಸ್ಪತ್ರೆಗಳ ಮೇಲೆ ನಾವು ಒತ್ತಡ ಹಾಕಬಾರದು ಎಂಬುದು ನಮ್ಮ ಗಮನದಲ್ಲಿ ಇರಲಿ.