ಡಿಜಿಟಲ್ ಕನ್ನಡ ಟೀಮ್:
ಕರೋನಾ ಸೋಂಕು ತೀವ್ರತೆ ಹೆಚ್ಚುತ್ತಿದ್ದು, ಜನರನ್ನು ಕಾಪಾಡಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ಆರೋಗ್ಯ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಧ್ಯಮಗಳ ಜತೆ ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು…
‘ಕೋರೊನಾ ತುರ್ತು ಪರಿಸ್ಥಿತಿಯಿಂದ ಜನ್ರು ಕಷ್ಟ ಅನುಭವಿಸುತ್ತಿದ್ದಾರೆ. ಸೋಂಕು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ನಿಯಂತ್ರಿಸಲು 15 ದಿನಗಳ ರಜೆ 1 ತಿಂಗಳ ವರೆಗೂ ವಿಸ್ತರಣೆಯಾಗಬಹುದು.
ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಬ್ಯಾಂಕ್ ಗ್ರಾಯಕರಿಗೆ ಇಎಂಐ ಕಟ್ಟಲು ಕಷ್ಟವಾಗುತ್ತಿದೆ. ಒಂದು ತಿಂಗಳ ಇಎಂಐ ಗಳನ್ನ ಮುಂದೂಡಬೇಕು.
ಜನರ ಕಷ್ಟ ಅರ್ಥ ಮಾಡಿಕೊಂಡು ಸರ್ಕಾರ ಒಂದು ತಿಂಗಳ ಬ್ಯಾಂಕ್ ಗ್ರಾಹಕರ ಬಡ್ಡಿ ಮನ್ನಾ ಮಾಡಬೇಕು ಎಂದು ಈ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ.
ಆರೋಗ್ಯ ವಿಚಾರದಲ್ಲಿ ನಾನು ರಾಜಕೀಯ ಮಾಡೋಕೆ ಹೋಗಲ್ಲಾ. ಈ ಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ಜನಗಳನ್ನ ಉಳಿಸಿಕೊಳ್ಳೋ ಜವಾಬ್ದಾರಿ ನಮ್ಮ ಮೇಲಿದೆ.
ಕೋರೋನಾ ವಿಚಾರದಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಉನ್ನತ ಮಟ್ಟದ ವೈದ್ಯರ ಸಭೆ ಕರೆಯಬೇಕು. ಸೇವಾ ಮನೋಭಾವದಿಂದ ಕೆಲಸ ಮಾಡಲು ಖಾಸಗಿ ಅವ್ರಿಗೂ ಸೂಚಿಸಬೇಕು.’
ಜನರ ಅಭಿಮಾನ ಬೇಡ ಎನ್ನಲು ಆಗುವುದಿಲ್ಲ:
ತಮ್ಮನ್ನು ಭೇಟಿ ಮಾಡಲು ನೂರಾರು ಕಾರ್ಯಕರ್ತರು ಆಗಮಿಸಿ ನೂಕು ನುಗ್ಗಲು ನಡೆದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ‘ನಾನು ಯಾರನ್ನು ಇಲ್ಲಿಗೆ ಬರುವಂತೆ ಹೇಳಿಲ್ಲ. ನಾನು ಬರುವ ವಿಚಾರ ತಿಳಿದು ಅವರೇ ಬಂದಿದ್ದಾರೆ. ಅಭಿಮಾನದಿಂದ ಬಂದಾಗ ಏನು ಮಾಡೋಕೆ ಆಗಲ್ಲಾ. ಅವರ ಹುರುಪು, ಉತ್ಸಾಹ ಕಡಿಮೆ ಮಾಡಲು ಆಗಲ್ಲಾ’ ಎಂದರು.