ಕಮಲನಾಥ್ ರಾಜೀನಾಮೆ! ಆಪರೇಷನ್ ಕಮಲ ಇರೋವಾಗ ಜನರ ಆಶೀರ್ವಾದ ಯಾಕ್ರೀ ಬೇಕು?

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕ ಮಾದರಿಯಲ್ಲಿ ಮಧ್ಯ ಪ್ರದೇಶದಲ್ಲೂ ಕಮಲನಾಥ್ ಅವರ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಅದರೊಂದಿಗೆ ದೇಶದಲ್ಲಿ ತಾನು ಚುನಾವಣೆಯಲ್ಲಿ ಬಹುಮತ ಪಡೆಯದಿದ್ದರೂ ಅಧಿಕಾರಕ್ಕೆ ಬರುತ್ತೇವೆ ಎಂಬುದನ್ನು ಬಿಜೆಪಿ ಮತ್ತೊಮ್ಮೆ ಸಾಬೀತುಪಡಿಸಿದೆ.

ರಾಜ್ಯಗಳಲ್ಲಿ ಸರ್ಕಾರ ಸ್ಥಾಪಿಸಬೇಕಾದರೆ ಜನರು ನೀಡುವ ಮತವೇ ಪ್ರಮುಖ ಕಾರಣ ಎಂಬ ವಾತಾವರಣ ದಿನೇ ದಿನೇ ಬದಲಾಗುತ್ತಿದೆ. ಜನ ಮತ ನೀಡಿ ಅಧಿಕಾರ ನೀಡುವುದು ಒಂದು ನೆಪ. ಚುನಾವಣೆ ನಂತರ ರಾಜಕೀಯ ಪಕ್ಷಗಳು ಅದನ್ನು ಕಿತ್ತುಕೊಳ್ಳುವುದು ಅಥವಾ ಉಳಿಸಿಕೊಳ್ಳುವುದು ಅವರ ಸಾಮರ್ಥ್ಯಕ್ಕೆ (ಸಂವಿಧಾನ ಬದ್ಧವೋ ವಿರುದ್ಧವೋ ಕುದುರೆ ವ್ಯಾಪಾರ ಮಾಡುವುದು) ಬಿಟ್ಟ ವಿಚಾರ ಎಂಬುದು ಸದ್ಯ ರಾಷ್ಟ್ರದ ಹಲವು ರಾಜ್ಯಗಳಲ್ಲಿನ ಚಿತ್ರಣ.

ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಹೇಗೆ ಆಪರೇಷನ್ ಕಮಲದ ಮೂಲಕ ಸಮಾಧಿ ಮಾಡಿ ಅದರ ಮೇಲೆ ಹೇಗೆ ಬಿಎಸ್ ಯಡಿಯೂರಪ್ಪ ಅಧಿಕಾರ ನಡೆಸುತ್ತಿದ್ದಾರೋ ಅದೇ ಮಾದರಿಯಲ್ಲಿ ಮಧ್ಯ ಪ್ರದೇಶ ಸರ್ಕಾರವನ್ನು ಕೆಡವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇದು ಅಕ್ರಮ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ಎಂದು ಗೊತ್ತಿದ್ದರೂ ಇದಕ್ಕೆ ರಾಜಕೀಯ ತಂತ್ರಗಾರಿಕೆ ಬಣ್ಣ ಬಲಿಯಲಾಗುತ್ತಿದೆ. ಇದಕ್ಕೆ ಜನರು ಆಶೀರ್ವಾದ (ಕರ್ನಾಟಕ ಉಪ ಚುನಾವಣೆ ಫಲಿತಾಂಶ) ಮಾಡಿರುವುದು ರಾಜಕಾರಣವು ಪ್ರಜಾಪ್ರಭುತ್ವವನ್ನು ಎತ್ತ ಕರೆದುಕೊಂಡು ಹೋಗುತ್ತಿದೆ ಎಂಬ ಆತಂಕ ಮೂಡುವಂತೆ ಮಾಡಿದೆ.

ಜನರು ಕೊಟ್ಟ ಆದೇಶಕ್ಕೆ ಗೌರವವಿಲ್ಲ. ಜನ ನಮ್ಮ ಸರ್ಕಾರ ತಿರಸ್ಕರಿಸಿದರೆ ಐದು ವರ್ಷ ವಿರೋಧ ಪಕ್ಷದಲ್ಲಿ ಕೂತು ಹೋರಾಡಿ ಮತ್ತೆ ಜನರ ಆಶೀರ್ವಾದದೊಂದಿಗೆ ಅಧಿಕಾರ ಹಿಡಿಯುವ ಸಂಯಮ ಬಿಜೆಪಿಯಲ್ಲಿ ಇಲ್ಲವಾಗಿದೆ.

ಒಟ್ಟಿನಲ್ಲಿ ಜನ ಇದಕ್ಕೆ ಎಷ್ಟು ದಿನಗಳ ಕಾಲ ಪ್ರೋತ್ಸಾಹ ನೀಡುತ್ತಾರೋ ಅಷ್ಟು ದಿನ ಪ್ರಜಾಪ್ರಭುತ್ವಕ್ಕೆ ಸಮಾಧಿ ಕಟ್ಟುವ ಕೆಲಸ ನಿರಾತಂಕವಾಗಿ ಮುಂದುವರಿಯಲಿದೆ.

Leave a Reply