ಎಲ್ಲ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ನರೇಂದ್ರ ಮೋದಿ ಸಭೆ!

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲಿ ಕೋರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಇಂದು ಎಲ್ಲ ರಾಜ್ಯದ ಸಿಎಂಗಳ ಜೊತೆ ಪಿಎಂ ವೀಡಿಯೋ ಸಂವಾದ ನಡೆಸುತ್ತಿದ್ದಾರೆ.

ನಮ್ಮ ರಾಜ್ಯದ ಸಿಎಂ ಜೊತೆಯೂ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದು, ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವರ ಶ್ರೀರಾಮುಲು ಭಾಗಿಯಾಗಲಿದ್ದಾರೆ. ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂವಾದದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ರಾಜ್ಯದ ಸ್ಥಿತಿಗತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ವರದಿ ಕೊಡಲಿದ್ದಾರೆ.

ಕೊರೋನಾ ವೈರಸ್ ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳು, ಇಲ್ಲಿಯವರೆಗೆ ರಾಜ್ಯದಲ್ಲಿ ಎಷ್ಟು ಕೊರೋನಾ ಸೊಂಕು ಪತ್ತೆಯಾಗಿವೆ. ಸೋಂಕು ಪೀಡಿತರ ಸ್ಥಿತಿ ಹೇಗಿದೆ. ಸೋಂಕು ಪೀಡಿತರಿಗೆ ಯಾವ ರೀತಿ ಚಿಕಿತ್ಸೆ ಕೊಡಲಾಗ್ತಿದೆ. ಅವರಲ್ಲಿ ಎಷ್ಟು ಮಂದಿ ಗುಣ ಮುಖರಾಗಿದ್ದಾರೆ. ವೈರಸ್ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರೋ ಕ್ರಮಗಳು ಯಾವುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಸಿಎಂ ಬಿಎಸ್ ಯಡಿಯೂರಪ್ಪ ನೀಡಲಿದ್ದಾರೆ.

ದೇಶದಲ್ಲಿ ಕೊರೋನಾ ವೈರಸ್‌ನಿಂದ ಮೊದಲು ಸಾವನ್ನಪ್ಪಿದ್ದು ನಮ್ಮ ಕರ್ನಾಟಕದ ಕಲಬುರ್ಗಿಯಲ್ಲಿ. ಹೀಗಾಗಿ ಈ ವಿಚಾರ ಕೂಡ ಚರ್ಚೆಗೆ ಬರುವ ಸಾಧ್ಯತೆಯಿದ್ದು, ಎಲ್ಲಿ ಲೋಪವಾಗಿದ್ದು, ಹೈದ್ರಾಬಾದ್‌ನಲ್ಲಿ ವಿಮಾನ ಇಳಿದು ಕಲಬುರಗಿಗೆ ಬಂದ ಮಾಹಿತಿ ಸಿಕ್ಕಿರಲಿಲ್ವಾ..? ಮಾಹಿತಿ ಇದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರಾ..? ಎನ್ನುವ ಮಾಹಿತಿಯನ್ನೂ ಪ್ರಧಾನಿ ಪ್ರಸ್ತಾಪ ಮಾಡಬಹುದು ಎನ್ನಲಾಗಿದೆ. ಇದೀಗ ಬೆಂಗಳೂರಲ್ಲಿ ಯಾವ ರೀತಿ ಕ್ರಮ ಜರುಗಿಸಲಾಗಿದೆ. ವೈರಸ್ ಹರಡದ ಸರ್ಕಾರ ಜನರಿಗೆ ಕಳುಹಿಸುತ್ತಿರುವ ಜಾಗೃತಿ ಸಂದೇಶ ಏನು..? ವೈರಸ್ ಬಂದ ನಂತರ ಇಷ್ಟು ದಿನದಲ್ಲಿ ಸರ್ಕಾರ ಏನೆಲ್ಲಾ ಕ್ರಮಗಳನ್ನು ಕೈಗೊಂಡಿದೆ..? ಜನಸಂದಣಿ ಒಟ್ಟಿಗೆ ಇರದಂತೆ ಮಾಡಲು ರಾಜ್ಯ ಸರ್ಕಾರ ಹೊರಡಿಸಿದ ಆದೇಶಗಳು. ಗಡಿ ಜಿಲ್ಲೆಗಳಲ್ಲಿ ಅನುಸರಿಸಿರುವ ಎಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.

ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಇಂದಿನ ಸಂವಾದದಲ್ಲಿ ಭಾಗಿಯಾಗಿ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಒಂದು ವೇಳೆ ಯಾವ ರಾಜ್ಯ ಸರ್ಕಾರ ತೆಗೆಸುಕೊಂಡಿರುವ ನಿಲುವುಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿ ಎನಿಸುವುದಿಲ್ಲ. ಆ ರಾಜ್ಯಕ್ಕೆ ಕೇಂದ್ರ ಸರ್ಕಾರವೇ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಲಿದೆ ಎನ್ನಲಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಕೊರೊನಾದಿಂದ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆಯೂ ಪ್ರಧಾನಿ ರಾಜ್ಯದ ಮುಖ್ಯಮಂತ್ರಿಗಳನ್ನು ಎಚ್ಚರಿಸಲಿದ್ದಾರೆ.

ಪ್ರಧಾನಿ ಜೊತೆಗಿನ ವೀಡಿಯೋ ಸಂವಾದಕ್ಕೂ ಮೊದಲೇ ಸಿಎಂ ಪೂರ್ವ ತಯಾರಿಗೆ ಸಿದ್ದತಾ ಸಭೆ ನಡೆಸಲು ಮುಂದಾಗಿದ್ದಾರೆ. ಮಧ್ಯಾಹ್ನ 3.30ಕ್ಕೆ ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಪ್ರಧಾನಿಗೆ ತಲುಪಿಸ ಬೇಕಿರುವ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು , ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹಾಗೂ ಎರಡೂ ಇಲಾಖೆಯ ಅಧಿಕಾರಿಗಳ ಭಾಗವಹಿಸಲಿದ್ದಾರೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮಾಡಿರೋ ಕಾರ್ಯಕ್ರಗಳ ಸಂಪೂರ್ಣ ಪಟ್ಟಿ ಮಾಡಿಕೊಳ್ಳಲಿದ್ದಾರೆ.

ಅಂತಿಮವಾಗಿ ಕೊರೊನಾ ವೈರಸ್ ತಡೆಗೆ ಕೇಂದ್ರದಿಂದ ಸಹಾಯ ಕೇಳುವ ಬಗ್ಗೆ ಸಿಎಂ ಯಡಿಯೂರಪ್ಪ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ವೈರಸ್ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ವೈರಸ್ ಹರಡದ ರೀತಿಯಲ್ಲಿ ಕೆಲವು ಕ್ರಮ ಮಾಡಲು ಹಣ ಮೀಸಲು ಇಡಬೇಕಿದೆ. ಮೊದಲು 70 ಕೋಟಿ ಬಿಡುಗಡೆ ಮಾಡಲಾಗಿತ್ತು. ಇದೀಗ 200 ಕೋಟಿ ಹಣ ಕೊಡಲಾಗಿದೆ. ಈಗ ಮೀಸಲಿಟ್ಟಿರುವ ಹಣದಲ್ಲೂ ವೈರಸ್ ಹರಡದ ರೀತಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗ್ತಿದೆ. ಜೊತೆಗೆ ವಿಶೇಷ ಭದ್ರತೆಗಳನ್ನು ಕೂಡ ಮಾಡಲಾಗಿದೆ. ಅಲ್ಲದೆ ಕೆಲವು ಕಡೆ ಲ್ಯಾಬ್‌ಗಳನ್ನು ಕೂಡ ತೆರೆಯಲಾಗಿದೆ. ಆದರೆ ಎಲ್ಲಾ ಜಿಲ್ಲೆಗಳಲ್ಲೂ ಲ್ಯಾಬ್ ಮಾಡಬೇಕಿದ್ದು, ಪ್ರತ್ಯೇಕ ಕಟ್ಟಡ ಮಾಡಬೇಕಿದೆ. ಏರ್ಪೋರ್ಟ್, ರೈಲ್ವೆ ನಿಲ್ದಾಣದ ಬಳಿಯೂ ತಪಾಸಣೆ ಮಾಡಲಾಗ್ತಿದೆ ಇದನ್ನೆಲ್ಲಾ ಮಾಡಲು ಸಾಕಷ್ಟು ಹಣದ ಅವಶ್ಯಕತೆ ಇದೆ ಎಂದು ಮನವರಿಕೆ ಮಾಡಿಕೊಡಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

Leave a Reply