ತಡವಾದರೂ ಸಿಕ್ತು ನ್ಯಾಯ! ಹೈದರಾಬಾದ್ ಎನ್ ಕೌಂಟರ್ ಗಿಂತ ನಿರ್ಭಯಾ ಗಲ್ಲು ಶಿಕ್ಷೆಗೆ ಹೆಚ್ಚಿನ ತೂಕ!

ಡಿಜಿಟಲ್ ಕನ್ನಡ ಟೀಮ್:

ಸುದೀರ್ಘ ಏಳು ವರ್ಷಗಳ ನಿರಂತರ ಹೋರಾಟದ ನಂತರ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಇಂದು ಗಲ್ಲು ಶಿಕ್ಷೆಯಾಗುವ ಮೂಲಕ ಸಂತ್ರಸ್ತೆಗೆ ನ್ಯಾಯ ಸಿಕ್ಕಿದೆ. ಆ ಮೂಲಕ ಅತ್ಯಾಚಾರದಂತಹ ನೀಚ ಕೃತ್ಯ ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬ ಸಂದೇಶ ರವಾನೆಯಾಗಿದೆ.

ನಾಲ್ವರು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಿರುವ ಸುದ್ದಿ ಕೇಳಿ ಕೇವಲ ಸಂತ್ರಸ್ತೆ ಪೋಷಕರು ಹಾಗೂ ವಕೀಲರಿಗೆ ಮಾತ್ರವಲ್ಲ, ಇಡೀ ದೇಶವೇ ತಮಗೆ ಸಿಕ್ಕ ನ್ಯಾಯವೆಂಬ ನೆಮ್ಮದಿ ಭಾವ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ವಿಚಾರವಾಗಿ ಹೈದರಾಬಾದ್ ಪಶು ವೈದ್ಯೆ ಪ್ರಕರಣದಲ್ಲಿ ನಾಲ್ವರ ಎನ್ ಕೌಂಟರ್ ಹಾಗೂ ನಿರ್ಭಯಾ ಪ್ರಕರಣದಲ್ಲಿ ನಾಲ್ವರಿಗೆ ಗಲ್ಲು ಶಿಕ್ಷೆ ಸಾಕಷ್ಟು ಚರ್ಚೆಯಾಗಿವೆ. ಎನ್ ಕೌಂಟರ್ ಪ್ರಕರಣವನ್ನು ಭಾವನಾತ್ಮಕವಾಗಿ ಜನ ಹೆಚ್ಚಾಗಿ ಸಂಭ್ರಮಿಸಿದ್ದರೂ ಎನ್ ಕೌಂಟರ್ ಗಿಂತ ನಿರ್ಭಯಾ ಪ್ರಕರಣದಲ್ಲಿನ ಗಲ್ಲು ಶಿಕ್ಷೆಗೆ ಹೆಚ್ಚಿನ ತೂಕವಿದೆ.

ನಿಜ, ನಿರ್ಭಯಾ ಪ್ರಕರಣದಲ್ಲಿ ಶಿಕ್ಷೆ ತಡವಾಗಿದೆ. ಇದು ನಮ್ಮ ಕಾನೂನಿನಲ್ಲಿರುವ ಲೋಪಗಳನ್ನು ನಮಗೆ ತೋರಿಸುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಲೋಪಗಳನ್ನು ತಿದ್ದುಕೊಂಡರೆ ಸಮಾಜದಲ್ಲಿನ ಕ್ರಿಮಿಗಳಿಗೆ ಎಚ್ಚರಿಕೆ ಸಂದೇಶ ರಾವನೆಯಾಗುವುದು ಖಚಿತ. ಇನ್ನು ಎನ್ ಕೌಂಟರ್ ಗಿಂತ ಗಲ್ಲು ಶಿಕ್ಷೆ ತೂಕ ಹೆಚ್ಚು ಎಂದು ಹೇಳಲು ಕಾರಣವಿದೆ. ಎನ್ ಕೌಂಟರ್ ನಲ್ಲಿ ಸತ್ತವರು ಆರೋಪ ಹೊತ್ತವರು. ಎನ್ ಕೌಂಟರ್ ನಂತರ ಈ ವಿಚಾರವಾಗಿ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗದೇ ಹೋಗಿದೆ.

ಎನ್ ಕೌಂಟರ್ ನಲ್ಲಿ ಸತ್ತವರು ಆರೋಪಿಗಳಾಗಿದ್ದರೇ ಹೊರತು ಅಪರಾಧಿ ಎಂದು ತೀರ್ಮಾನವಾಗಿರಲಿಲ್ಲ. ಇನ್ನು ಎನ್ ಕೌಂಟರ್ ನಲ್ಲಿ ಸತ್ತವರಲ್ಲಿ ಎಲ್ಲರೂ ಅತ್ಯಾಚಾರದಲ್ಲಿ ಭಾಗಿಯಾಗಿದ್ದರೇ? ಇದರ ಹಿಂದೆ ದೊಡ್ಡವರ ಕೈವಾಡ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆಯೇ? ಎಂಬ ಅನೇಕ ಪ್ರಶ್ನೆಗಳು ಹಾಗೇ ಉಳಿದಿವೆ. ಆದರೆ ನಿರ್ಭಯಾ ಪ್ರಕರಣದಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದ್ದು, ಯಾವುದೇ ಗೊಂದಲಗಳಿಲ್ಲದೇ ಅಪರಾಧಿಗಳಿಗೆ ಶಾಸ್ತಿಯಾಗಿದೆ.

Leave a Reply