ಕೊರೋನಾ ನಿಯಂತ್ರಣ, ನಿರ್ವಹಣೆ: ಸರ್ವಪಕ್ಷ ಸಭೆ ಕರೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಡಿಕೆ ಶಿವಕುಮಾರ್ ಆಗ್ರಹ

ಡಿಜಿಟಲ್ ಕನ್ನಡ ಟೀಮ್:

ಕೊರೋನಾ ಸೋಂಕು ಪರಿಸ್ಥಿತಿ ನಿಯಂತ್ರಣ ಹಾಗೂ ನಿರ್ವಹಣೆ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಗುರುವಾರ ಮಾಧ್ಯಮಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಆರ್ ಎಸ್ಎಸ್ ಸದಸ್ಯರಿಗೆ ದೇಣಿಗೆ ಸಂಗ್ರಹಿಸಿ, ಆಹಾರ ಪದಾರ್ಥ ವಿತರಿಸಲು ಅನುಮತಿ ನೀಡಿದ್ದು ಯಾರು? ಎಂದು ಪ್ರಶ್ನಿಸಿದರು. ಇದೇ ವೇಳೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರದರ್ಶಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಉಪಸ್ಥಿತರಿದ್ದರು.

‘ಕೊರೋನಾ ಸೋಂಕು ಸಮಸ್ಯೆ ಕೇವಲ ಬಿಜೆಪಿ ಸಮಸ್ಯೆಯಲ್ಲ. ಇದು ರಾಜ್ಯ ಹಾಗೂ ದೇಶದ ಸಮಸ್ಯೆ. ರಾಜ್ಯದಲ್ಲಿ ಸರ್ವಪಕ್ಷ ಸಭೆ ಕರೆಯುವಂತೆ ಮುಖ್ಯಮಂತ್ರಿಗಳಿಗೆ ಕೇಳಿದ್ದೇನೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಾಷ್ಟ್ರಮಟ್ಟದಲ್ಲಿ ಸರ್ವಪಕ್ಷ ಸಭೆ ಕರೆದು ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಈ ಸಮಸ್ಯೆಯನ್ನು ರಾಜಕೀಯ ಹಾಗೂ ಸಿದ್ಧಾಂತದ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಆರ್ ಎಸ್ಎಸ್ ಸದಸ್ಯರು ದೇಣಿಗೆ ಸಂಗ್ರಹಿಸಿ, ಜನರಿಗೆ ಆಹಾರ ಪದಾರ್ಥ ಹಂಚುತ್ತಿದ್ದಾರೆ. ಇದಕ್ಕೆ ಅನುಮತಿ ನೀಡಿದ್ದು ಯಾರು? ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆ ತಮ್ಮ ಭಾಷಣದಲ್ಲಿ 21 ದಿನಗಳ ಕಾಲ ಇಡೀ ದೇಶವೇ ಲಾಕ್ ಡೌನ್ ಮಾಡಲು ಹೇಳಿದ್ದಾರೆ. ನಾವು ಅದನ್ನು ಗೌರವಿಸುತ್ತೇವೆ. ಅದಕ್ಕೆ ಬದ್ಧರಾಗಿ ಪಾಲಿಸುತ್ತಿದ್ದೇವೆ. ನಮ್ಮ ಕಾರ್ಯಕರ್ತರಿಗೂ ಮನೆಯಲ್ಲೇ ಉಳಿಯಲು ಸೂಚಿಸಿದ್ದೇವೆ’ ಎಂದರು.

‘ಆದರೆ, ಆರ್ ಎಸ್ಎಸ್ ಹಾಗೂ ಆ ಮೂಲಕ ಬಿಜೆಪಿ ಕೊರೋನಾ ಕಾಯಿಲೆಯನ್ನೂ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ನಮಗೂ ಜನರ ಬಗ್ಗೆ ಕಾಳಜಿ ಇದೆ. ನಮಗೂ ಸಮಸ್ಯೆಯಲ್ಲಿರುವವರಿಗೆ ಸಹಾಯ ಮಾಡಲು ಮನಸ್ಸು ತುಡಿಯುತ್ತಿದೆ. ಎಲ್ಲರಿಗೂ ಮನೆಯಲ್ಲಿ ಇರಲು ಹೇಳಿ ಆರ್ ಎಸ್ಎಸ್ ಸದಸ್ಯರನ್ನು ಬೀದಿಯಲ್ಲಿ ದೇಣಿಗೆ ಸಂಗ್ರಹಿಸಿ, ಆಹಾರ ಪದಾರ್ಥ ಹಂಚಲು ಬಿಟ್ಟಿರುವುದು ಸರಿಯೇ? ನಮಗೊಂದು ಕಾನೂನು, ಅವರಿಗೊಂದು ಕಾನೂನು ಇದೆಯೇ? ಈ ಸಂಕಷ್ಟದ ಸಮಯವನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯೇ ಎಂದು ಪ್ರಶ್ನಿಸಿದರು.

‘ನಮಗೂ ದೊಡ್ಡ ಮಟ್ಟದ ಕಾರ್ಯಕರ್ತರ ಪಡೆ ಇದೆ. ನಾವೂ ಬೀದಿಗಿಳಿದು ದೇಣಿಗೆ ಸಂಗ್ರಹಿಸಿ, ಆಹಾರ ಪದಾರ್ಥ ಹಂಚಿಕೆ ಮಾಡಲು ಅನುಮತಿ ನೀಡುತ್ತಾರಾ? ನಾವು ಆರ್ ಎಸ್ಎಸ್ ಸದಸ್ಯರಂತೆ ಬೀದಿಗೆ ಇಳಿದು ಸಹಾಯ ಮಾಡಲು ಮುಂದಾದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದಿಲ್ಲ. ಇದನ್ನು ನಿಭಾಯಿಸಲು ಸರ್ಕಾರ ಸಿದ್ಧವಾಗಿದೆಯೇ? ಮುಖ್ಯಮಂತ್ರಿಗಳು ಪರಿಹಾರ ನಿಧಿ ಸ್ಥಾಪಿಸಿ, ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಅದನ್ನು ಸ್ವಾಗತಿಸುತ್ತೇವೆ. ಸರ್ಕಾರ ಆ ಕೆಲಸ ಮಾಡಲಿ, ಆದರೆ ಬಿಜೆಪಿ, ಆರೆಸ್ಸಸ್ಗೆ ಅವಕಾಶ ನೀಡಿರುವುದು ಸರಿಯಲ್ಲ’ ಎಂದರು.

Leave a Reply