ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಪ್ಯಾಕೇಜ್ ಘೋಷಿಸಿದ ಸಚಿವೆ ನಿರ್ಮಲಾ ಸೀತರಾಮನ್!

ಡಿಜಿಟಲ್ ಕನ್ನಡ ಟೀಮ್:

ಕೊರೋನಾ ಸೋಂಕು ಪರಿಸ್ಥಿತಿ ನಿಯಂತ್ರಣ ಹಾಗೂ 21 ದಿನಗಳ ಕಾಲ ದೇಶ ಲಾಕ್ ಡೌನ್ ಆಗಿರುವುದರಿಂದ ಆಗಲಿರುವ ತೊಂದರೆ ಎದುರಿಸಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಇಂದು 1.70 ಲಕ್ಷ ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಸದ್ಯದ ಪ್ರಕಟವಾಗಿರುವ ಪ್ಯಾಕೇಜ್, ಬಡವರು, ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ತಳಮಟ್ಟದಲ್ಲಿನ ನಾಗರೀಕರನ್ನು ಗಮನದಲ್ಲಿಟುಕೊಂಡು  ಪ್ಯಾಕೇಜ್ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರೆ ವರ್ಗಗಳು ಹಾಗೂ ಇಎಂಐ ಹಾಗೂ ಬಡ್ಡಿ ಕಟ್ಟುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವೆ ನಿರ್ಮಲಾ ಸೀತರಾಮನ್ ತಿಳಿಸಿದ್ದಾರೆ.

ಈ ಪ್ಯಾಕೇಜ್ ಪ್ರಮುಖ ಅಂಶಗಳು ಹೀಗಿವೆ…

 • ಪ್ರಧಾನಮಂತ್ರಿ ಬಡವರ ಕಲ್ಯಾಣ ಯೋಜನೆ: ಈ ನೂತನ ಯೋಜನೆ ಘೋಷಣೆ ಮಾಡಿದ್ದು, 1.70 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ.
 • ಪ್ರಧಾನಮಂತ್ರಿ ಬಡವರ ಕಲ್ಯಾಣ ಯೋಜನೆಯೂ ರೈತರು, ಮನ್ರೆಗಾ, ವಿಧವಾ, ಬಡ ಪಿಂಚಣೆ, ವಿಕಲ ಚೇತನ ಪಿಂಚಣೆ, ಮಹಿಳೆಯರಿಗೆ ಜನ್ ಧನ್, ಉಜ್ವಲ ಯೋಜನೆ ಮೂಲಕ ಮಹಿಳೆಯರು ಮತ್ತು ಗೃಹಿಣಿ ಅವರಿಗೆ, ಮಹಿಳಾ ಸ್ವಯಂ ಸೇವಾ ಸಂಘ, ಅಸಂಘಟಿತ ಕಾರ್ಮಿಕರಿಗೆ ಇಪಿಎಫ್ಒ, ಕಟ್ಟಡ ಕಾರ್ಮಿಕರಿಗೆ ಮತ್ತು ಜಿಲ್ಲಾ ಮಿನರಲ್ ಫಂಡ್ ಅನ್ನು ಒಳಗೊಂಡಿದೆ.
 • ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿ ಸಿಬ್ಬಂದಿಗೂ ಮುಂದಿನ ಮೂರು ತಿಂಗಳ ಕಾಲ 50 ಲಕ್ಷ ಆರೋಗ್ಯ ವಿಮೆ.
 • 80 ಕೋಟಿ ಜನ ಈ ಪ್ರಧಾನ ಮಂತ್ರಿ ಬಡವರ ಕಲ್ಯಾಣ ಯೋಜನೆ ಫಲಾನುಭವಿಗಳಾಗಿದ್ದು, ಈಗಾಗಲೇ ಜನರಿಗೆ ನೀಡಲಾಗುತ್ತಿರುವ ಪಡಿತರದ ಜತೆ ಪ್ರತಿಯೊಬ್ಬರು 5 ಕೆ.ಜಿ ಅಕ್ಕಿ/ಗೋಧಿ ಉಚಿತವಾಗಿ ನೀಡಲಾಗುವುದು. ಜತೆಗೆ ಮುಂದಿನ ಮೂರು ತಿಂಗಳ ಕಾಲ 1 ಕೆ.ಜಿ ಬೇಳೆ ಕಾಲು (ಗ್ರಾಹಕರ ಆಯ್ಕೆಯ ಬೇಳೆ) ನೀಡಲಾಗುವುದು.
 • ಇನ್ನು ಮನ್ರೆಗಾ ಯೋಜನೆ ಕಾರ್ಮಿಕರಿಗೆ ಕೂಲಿ ಪ್ರಮಾಣ ಹೆಚ್ಚಿಸಲಾಗಿದ್ದು, ದರಿಂದ 5 ಕೋಟಿ ಕುಟುಂಬಗಳು 2 ಸಾವಿರ ಹೆಚ್ಚುವರಿ ಆದಾಯ ಪಡೆಯಲಿದ್ದಾರೆ.
 • ಇನ್ನು ಏಪ್ರಿಲ್ ಮೊದಲ ವಾರದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 8.69 ಕೋಟಿ ರೈತರಿಗೆ ಸೊದಲ ಕಂತು 2 ಸಾವಿರ ಹಣವನ್ನು ಖಾತೆಗೆ ಜಮೆ.
 • 100 ನೌಕರರಿಗಿಂತ ಕಡಿಮೆ ಸಿಬ್ಬಂದಿ ಹೊಂದಿರುವ ಕಂಪನಿಗಳಿಗೆ ಶೇ.24ರಷ್ಟು ಇಪಿಎಫ್ ಅನ್ನು ಕೇಂದ್ರ ಭರಿಸಲಿದೆ.
 • ಜನ್ ಧನ್ ಖಾತೆ ಹೊಂದಿರುವ ಮಹಿಳೆಯರ ಖಾತೆಗೆ 500 ರೂ. ಜಮೆ.
 • 63 ಲಕ್ಷ ಮಹಿಳಾ ಸ್ವಯಂ ಸೇವಾ ಗುಂಪುಗಳಿದ್ದು, ಅವರಿಗೆ ನೀಡಲಾಗುತ್ತಿರುವ 10 ಲಕ್ಷ ಸಾಲವನ್ನು 20 ಲಕ್ಷಕ್ಕೆ ಹೆಚ್ಚಳ.
 • ಉಜ್ವಲ ಯೋಜನೆ ಮೂಲಕ 8.3 ಕೋಟಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ಮುಂದಿನ ಮೂರು ತಿಂಗಳು ಉಚಿತ ಅಡುಗೆ ಅನಿಲ.
 • ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ (3.5 ಕೋಟಿ ಕಾರ್ಮಿಕರಿಗೆ) 31,000 ಕೋಟಿ ಅನುದಾನ.

Leave a Reply