ಬೆಂಗಳೂರಿನಿಂದ ಹೋದ್ರು ಹಳ್ಳಿ ಸೇರಿದ್ರು.. ಬೇರೆಯವರ ಕಥೆ..?

ಡಿಜಿಟಲ್ ಕನ್ನಡ ಟೀಮ್:

ಇಡೀ ವಿಶ್ವದಲ್ಲೇ ಕೊರೊನಾ ವೈರಸ್​ ಆರ್ಭಟ ಮುಂದುವರಿದಿದೆ. ಭಾರತ ಲಾಕ್​ಡೌನ್​ ಆಗಿ ಮೂರು ದಿನಗಳೇ ಕಳೆದು ಹೋಗಿವೆ. ಬೆಂಗಳೂರಿನಲ್ಲಿದ್ದ ಲಕ್ಷ ಲಕ್ಷ ಹಳ್ಳಿ ಜನರರು ತಮ್ಮ ತಮ್ಮ ಹುಟ್ಟೂರು ಕಡೆಗೆ ಹೋಗಲು ಸಿಎಂ ಬಿಎಸ್​ ಯಡಿಯೂರಪ್ಪ ಅನುವು ಮಾಡಿಕೊಟ್ಟಿದ್ದರು. ಹಾಗಾಗಿ ಎದ್ದೆವೋ ಬಿದ್ದೆವೋ ಎನ್ನುವಂತೆ ಕೊರೊನಾದಿಂದ ತಪ್ಪಿಸಿಕೊಳ್ಳಲು ಓಡೋಡಿ ಹೋದರು. ಆದರೆ ಬೇರೆ ರಾಜ್ಯಗಳಲ್ಲಿರುವ ಕನ್ನಡಿಗರ ಪರಿಸ್ಥಿಯಲ್ಲಿ ಕೇಂದ್ರ ಸರ್ಕಾರವೂ ಗಮನಿಸುತ್ತಿಲ್ಲ. ರಾಜ್ಯ ಸರ್ಕಾರವೂ ಅವರನ್ನು ನೋಡುತ್ತಿಲ್ಲ.

ಕೊರೊನಾ ಹೆಮ್ಮಾರಿ ನಿಯಂತ್ರಣಕ್ಕೆ ಗೊತ್ತಿರುವ ಮಾರ್ಗ ಎಂದರೆ ಸೋಷಿಯಲ್​ ಡಿಸ್ಟೆನ್ಸ್​ ಮಾತ್ರ. ಔಷಧಿಯಿಂದ ನಿಯಂತ್ರಣ ಮಾಡೋಣ ಎಂದರೆ ಕೊರೊನಾ ವೈರಸ್​ಗೆ ಇನ್ನೂ ಕೂಡ ಮದ್ದು ಪತ್ತೆಯಾಗಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ಭಾರತವನ್ನು ಲಾಕ್​ಡೌನ್​ ಮಾಡಲು ಕರೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಊರುಗಳಿಗೆ ತೆರಳುವ ಜನರಿಗೆ ಸ್ವಲ್ಪ ಕಾಲಾವಕಾಶ ಮಾಡಿಕೊಟ್ಟಿದ್ರಿಂದ ಬೆಂಗಳೂರು ಖಾಲಿಯಾಗಿದೆ. ಆದರೆ ಹೊರ ರಾಜ್ಯದಲ್ಲಿರುವ ಕನ್ನಡಿಗರು ತಮ್ಮ ಹುಟ್ಟೂರುಗಳಿಗೆ ವಾಪಸ್​ ಆಗಲು ಸಾಧ್ಯವಾಗದೆ ಕಣ್ಣೀರು ಇಡುತ್ತಿದ್ದಾರೆ.

ಕೂಲಿ ಅರಸಿಕೊಂಡು ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದ 400 ಕಾರ್ಮಿಕರು ಹುಟ್ಟೂರಿಗೆ ವಾಪಸ್​ ಬರಲಾಗದೆ ಪರದಾಡುತ್ತಿದ್ದಾರೆ. ಕಲಬುರಗಿ ಜಿಲ್ಲೆ ಜೇವರ್ಗಿ, ಚಿತ್ತಾಪುರ, ಗುರುಮಠಕಲ್ ಮತ್ತಿತರ ಕಡೆಯಿಂದ ಜೀವನೋಪಾಯಕ್ಕಾಗಿ ಮುಂಬೈ ನಗರ ಸೇರಿದ್ದರು. ಆದರೀಗ ಇಡೀ ದೇಶವೇ ಲಾಕ್​ಡೌನ್​ ಆಗಿದೆ. ಇತ್ತ ಕಲಬುರಗಿ ಕೂಡ ಲಾಕ್​ಡೌನ್​ ಆಗಿದೆ. ಅತ್ತ ಮುಂಬೈನಲ್ಲಿ ಕೆಲಸವೂ ಸಿಗದೆ, ತಿನ್ನಲು ಅನ್ನವಿಲ್ಲ. ಇತ್ತ ಊರಿಗಾದರೂ ವಾಪಸ್​ ಹೋಗೋಕ್ಷ ಎಂದರೆ ಸಾರಿಗೆ ಸೌಕರ್ಯವಿಲ್ಲ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.

ಮಹಾರಾಷ್ಟರದಲ್ಲಿ ಸಿಲುಕಿರುವ ಕೂಲಿ ಕಾರ್ಮಿಕರು ವಿಡಿಯೋ ಕಳುಹಿಸಿದ್ದು, ನಮಗೆ ಊಟ ಅಷ್ಟೇ ಅಲ್ಲದೆ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಇದೆ. ಹೊರಗೆ ಬಂದರೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಇಲ್ಲಿಂದ ನಮ್ಮನ್ನು ಕರೆದುಕೊಂಡು ಹೋಗಿ ಮತ ಹಾಕಿಸಿಕೊಳ್ಳಲು ಸಾಕಷ್ಟು ಆಮೀಷ ಕೊಡುತ್ತೀರಿ. ಆದರೆ ಈಗ ನಮ್ಮ ಕ್ಷ ನಿಮಗೆ ಬೇಕಾಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ವಿಡಿಯೋ ನೋಡೊದ ಸುರಪುರ ಶಾಸಕ ರಾಜುಗೌಡ, ಮಹಾರಾಷ್ಟ್ರದಲ್ಲಿ ಸಿಲುಕಿರುವ ಕನ್ನಡಿಗ ಕೂಲಿ ಕಾರ್ಮಿಕರನ್ನು ವ್ಯಾಪಸ್​ ಕರೆತರಲು ಅನುಕೂಲ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದಾರೆ.

ಕುಂದಾನಗರಿ ಬೆಳಗಾವಿಯ 350ಕ್ಕೂ ಹೆಚ್ಚು ಕಾರ್ಮಿಕರು ಗೋವಾದಲ್ಲಿ ಸಿಲುಕಿದ್ದಾರೆ. ದೇಶ ಲಾಕ್​ಡೌನ್​ ಆದ ಬಳಿಕ ಬೆಳಗಾವಿಗೆ ವಾಪಸ್​ ಬರಲಾಗದೆ ಪರಿತಪಿಸುತ್ತಿದ್ದಾರೆ. ಇದೇ ರೀತಿ ಗೋವಾದ ಶಿವೋಲಿ, ಮಾಪ್ಸಾ ಸೇರಿ ವಿವಿಧ ಕಡೆ ಸಾವಿರಾರು ಕಾರ್ಮಿಕರು ನೆಲೆಸಿದ್ದಾರೆ. ಎಲ್ಲರನ್ನೂ ವಾಪಸ್​ ಕರೆಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕಾಲ್ನಡಿಗೆಯಲ್ಲೇ ತಮ್ಮ ಊರುಗಳತ್ತ ಹೆಜ್ಜೆ ಹಾಕಿದ್ದಾರೆ. ಆದರೆ ರಾಜ್ಯ ಗಡಿಯಲ್ಲಿ ಪ್ರವೇಶ ಕೊಡದ ಪೊಲೀಸರು ಸರ್ಕಾರದ ನಿರ್ದೇಶನಕ್ಕಾಗಿ ಕಾಯುತ್ತಿದ್ದಾರೆ.

ಇಷ್ಟೇ ಅಲ್ಲದೆ ಚಿಕ್ಕಮಗಳೂರಿನ ನೂರಾರು ಕಾರ್ಮಿಕರು ಆಂಧ್ರಪ್ರದೇಶದ ಗುಂಟೂರಿನಲ್ಲಿ ಕೆಲಸ ಮಾಡುತ್ತಿದ್ದು, ಇದೀಗ ಅಲ್ಲೂ ಕೂಡ ಲಾಕ್​ಡೌನ್​ನಿಂದ ಕಂಗೆಟ್ಟಿದ್ದಾರೆ. ಮುಖ್ಯಮಂತ್ರಿಗಳೇ ದಯವಿಟ್ಟು ನಮ್ಮ ಮೇಲೆ ಕರುಣೆ ತೋರಿಸಿ, ನಮ್ಮನ್ನು ಇಲ್ಲಿಂದ ಕರೆಸಿಕೊಳ್ಳಿ ಎಂದು ಅಂಗಲಾಚಿದ್ದಾರೆ. ತೆಲಂಗಾಣದಲ್ಲೂ ರಾಜ್ಯದ ಕಾರ್ಮಿಕರು ಸಿಲುಕಿದ್ದಾರೆ. ಕರೀಂನಗರದಲ್ಲಿ ಅನ್ನ ನೀರಿಲ್ಲದೆ ಪರದಾಡುತ್ತಿದ್ದಾರೆ. ಸೇಡಂ ತಾಲೂಕಿನ 40ಕ್ಕೂ ಹೆಚ್ಚು ಕಾರ್ಮಿರು, ಕಟ್ಟಡ ನಿರ್ಮಾಣಕ್ಕೆಂದು ತೆರಳಿದ್ದರು. ಆದರೆ ಕರೀಂನಗರಕ್ಕೆ ಕರೆದೊಯ್ದಿದ್ದ ಗುತ್ತಿಗೆದಾರ ಲಾಕ್​ಡೌನ್​ ಆಗುತ್ತಿದ್ದಂತೆ ಜಾಗ ಖಾಲಿ ಮಾಡಿದ್ದಾನೆ. ಫೋನ್​ ಸ್ವಿಚ್​ ಆಫ್​ ಆಗಿದೆ. ಹೊತ್ತಿರ ಊಟಕ್ಕೂ ಪರದಾಡುತ್ತಿದ್ದಾರೆ.

ಕೊರೊನಾ ಮಹಾಮಾರಿ ತಡೆಗೆ ದೇಶವನ್ನು ಲಾಕ್​ಡೌನ್​ ಮಾಡಿರುವುದು ಸರಿ. ಆದರೆ ಈ ರೀತಿ ವಲಸೆ ಹೋಗಿರುವ ಕಾರ್ಮಿಕರ ಜವಾಬ್ದಾರಿ ಯಾರದ್ದು..? ಕೂಲಿ ಇಲ್ಲದಿದ್ದರೆ ಅನ್ನಕ್ಕೂ ಗತಿಯಿಲ್ಲ ಎನ್ನುವ ಪರಿಸ್ಥಿತಿಯಲ್ಲಿರುವ ಜನರ ಕೂಗು ಆಲಿಸಬೇಕಾದವರು ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಸರ್ಕಾರಗಳಿಗೆ ಇವರ ಗೋಳು ಬೇಕಿಲ್ಲ. ನಮ್ಮ ಕನ್ನಡಿಗರು ಎನ್ನು ಏಕೈಕ ಕಾರಣಕ್ಕಾದರು ನಮ್ಮ ರಾಜ್ಯ ಸರ್ಕಾರ ಅವರನ್ನು ವಾಪಸ್​ ಕರೆತರುವ ಕೆಲಸ ಮಾಡಬೇಕಿದೆ. ಒಂದು ವೇಳೆ ಕರೆತರಲು ಸಾಧ್ಯವಾಗದೆ ಇದ್ದರೆ ಅಲ್ಲಿಯೇ ಮೂಲಭೂತ ಸೌಕರ್ಯ ಮಾಡಿಕೊಡುವ ಕೆಲಸ ಮಾಡಬೇಕಿದೆ.

Leave a Reply