ಕೊರೋನಾ ಎದುರಿಸಲು ಸರ್ಕಾರಕ್ಕೆ ನಮ್ಮ ಸಹಕಾರ, ಜನರ ಮೇಲಿರಲಿ ಕೇಂದ್ರದ ಮಮಕಾರ: ರಾಹುಲ್ ಗಾಂಧಿ

ಡಿಜಿಟಲ್ ಕನ್ನಡ ಟೀಮ್:

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಅದರ ಕೋಟ್ಯಾಂತರ ಜನರು ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ. ಈ ಹಂತದಲ್ಲಿ ಕೇಂದ್ರ ಸರ್ಕಾರವು ಬಡ ಜನರ ಹಿತಾಸಕ್ತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಈ ವಿಚಾರವಾಗಿ ರಾಹುಲ್ ಗಾಂಧಿ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಆ ಪತ್ರದ ಸಾರಾಂಶ ಹೀಗಿದೆ…

‘ಇಡೀ ಪ್ರಪಂಚದಾದ್ಯಂತ ಮಾನವಕುಲಕ್ಕೆ ಕಂಟಕ ಎದುರಾಗಿರುವ ಸಂದರ್ಭದಲ್ಲಿ ನಾನು ಮತ್ತು ನಮ್ಮ ಪಕ್ಷದ ಕೋಟ್ಯಾಂತರ ಕಾರ್ಯಕರ್ತರು ನಿಮ್ಮ ಜತೆ ನಿಲ್ಲುವುದಾಗಿ ಈ ಮೂಲಕ ತಿಳಿಸಲು ಬಯಸುತ್ತೇನೆ. ಭಾರತದಲ್ಲಿ ಹರಡುತ್ತಿರುವ ಕೊರೋನಾ ಸೋಂಕು ನಿಯಂತ್ರಣ ವಿಚಾರದಲ್ಲಿ ಸರ್ಕಾರ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ನಾವು ಸರ್ವ ರೀತಿಯ ಸಹಕಾರವನ್ನು ನೀಡುತ್ತಿದ್ದೇವೆ.

ಕೋವಿಡ್ 19 ವೈರಸ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದ್ದು, ಇದನ್ನು ನಿಯಂತ್ರಿಸಲು ತಕ್ಷಣವೇ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಭಾರತ ಈಗ ಮೂರು ವಾರಗಳ ಕಾಲ ಲಾಕ್ ಡೌನ್ ಪರಿಸ್ಥಿತಿಯಲ್ಲಿದೆ. ದೇಶದಾದ್ಯಂತ ಈ ಲಾಕ್ ಡೌನ್ ನಿಂದಾಗಿ ನಮ್ಮ ಜನರು, ಸಮಾಜ ಮತ್ತು ಆರ್ಥಿಕತೆಯ ಮೇಲೆ ಭಾರಿ ಪ್ರಮಾಣದ ದುಷ್ಪರಿಣಾಮ ಬೀರಲಿದೆ.

ಭಾರತದ ಪರಿಸ್ಥಿತಿ ಇತರೆ ದೇಶಗಳಿಗಿಂತ ಭಿನ್ನವಾಗಿದ್ದು, ಅದನ್ನು ಅರ್ಥ ಮಾಡಿಕೊಳ್ಳುವುದು ಬಹಳ ನಿರ್ಣಾಯಕವಾಗಿದೆ. ಇತರೆ ದೊಡ್ಡ ದೇಶಗಳು ಕೂಡ ಲಾಕ್ ಡೌನ್ ತಂತ್ರಗಾರಿಕೆಯನ್ನೇ ಬಳಸಿದ್ದು, ಹೀಗಾಗಿ ನಾವು ಈ ಸವಾಲನ್ನು ಎದುರಿಸಲು ವಿಭಿನ್ನ ಮಾರ್ಗವನ್ನು ಅನುಸರಿಸಬೇಕಾದ ಅನಿವಾರ್ಯತೆ ಇದೆ. ಭಾರತದಲ್ಲಿ ದಿನಗೂಲಿ ಆದಾಯವನ್ನೇ ನಂಬಿ ಜೀವನ ನಡೆಸುತ್ತಿರುವ ಬಡ ಕಾರ್ಮಿಕರ ಸಂಖ್ಯೆ ಅಪಾರವಾಗಿದೆ. ಹೀಗಾಗಿ ಆರ್ಥಿಕ ಪ್ರಕ್ರಿಯೆಯನ್ನೇ ಸಂಪೂರ್ಣವಾಗಿ ನಿಲ್ಲಿಸಿರುವುದದಿಂದ ಹೆಚ್ಚಿನ ಪರಿಣಾಮ ಬೀರಿದೆ.

ಹೀಗಾಗಿ ಸರ್ಕಾರ ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಸೂಕ್ಷ್ಮ ರೀತಿಯಲ್ಲಿ ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕಿದೆ. ನಮ್ಮ ಹಿರಿಯ ನಾಗರೀಕರನ್ನು ಈ ಸೋಂಕಿನಿಂದ ದೂರವಿರುವಂತೆ ನೋಡಿಕೊಳ್ಳುವುದು ನಮ್ಮ ಪ್ರಮುಖ ಆದ್ಯತೆಯಾಗಬೇಕು. ಈ ಸಂದರ್ಭದಲ್ಲಿ ಹಿರಿಯ ನಾಗರೀಕರ ಜತೆಗಿನ ಸಂಪರ್ಕದಿಂದ ಆಗುವ ಅನಾಹುತಗಳ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಬೇಕಾಗಿದೆ.

ಭಾರತದಲ್ಲಿ ಕೋಟ್ಯಾಂತರ ಹಿರಿಯ ನಾಗರೀಕರು ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡುವ ನಿರ್ಧಾರದಿಂದ ಆರ್ಥಿಕತೆಯ ಯಂತ್ರ ನಿಂತುಹೋಗಿದ್ದು, ಯುವ ಜನರ ಉದ್ಯೋಗದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಅವರೆಲ್ಲರೂ ತಮ್ಮ ಗ್ರಾಮಗಳತ್ತ ಮುಖ ಮಾಡಿದ್ದಾರೆ. ಆ ಮೂಲಕ ಅವರು ತಮ್ಮ ಪೋಷಕರು ಹಾಗೂ ಹಿರಿಯರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಜೀವಹಾನಿಯಾಗುವ ಸಂಭವವಿದೆ.

ನಾವು ತಕ್ಷಣವೇ ನಮ್ಮ ಸಾಮಾಜಿಕ ಸುರಕ್ಷತೆ ಬಲಪಡಿಸುವ ಬಗ್ಗೆ ಗಮನಹರಿಸಬೇಕು. ಹೀಗಾಗಿ ಲಭ್ಯವಿರುವ ಎಲ್ಲ ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಬಡ ಕಾರ್ಮಿಕರಿಗೆ ಕೂಡಲೆ ಸೂರಿನ ವ್ಯವಸ್ಥೆ ಕಲ್ಪಿಸಿ ಅವರಿಗೆ ಆಸರೆಯಾಗಿ ನಿಲ್ಲಬೇಕು. ಕೇಂದ್ರ ಸರ್ಕಾರದ ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡಿರುವುದು ಈ ನಿಟ್ಟಿನಲ್ಲಿ ತೆಗೆದುಕೊಂಡಿರುವ ಉತ್ತಮ ಹೆಜ್ಜೆಯಾಗಿದೆ. ಆದರೆ ಈ ಪ್ಯಾಕೇಜ್ ನಲ್ಲಿರುವ ಹಣ ಆದಷ್ಟು ಬೇಗ ಬಿಡುಗಡೆಯಾಗಿ ಜನರಿಗೆ ತಲುಪುವುದು ಬಹಳ ಮುಖ್ಯವಾಗಿದೆ. ಹೀಗಾಗಿ ಈ ಪ್ಯಾಕೇಜ್ ಬಿಡುಗಡೆ ಮತ್ತು ಅನುಷ್ಠಾನಕ್ಕೆ ದಿನಾಂಕ ನಿಗದಿಪಡಿಸಿ ನಿರ್ದಿಷ್ಠ ಮಾರ್ಗಸೂಚಿಯನ್ನು ಹಾಕಿಕೊಳ್ಳಬೇಕಿದೆ. ಅತಿ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಿಗೆ ಈ ಪ್ಯಾಕೇಜ್ ನಲ್ಲಿ ಅತಿಹೆಚ್ಚಿನ ಪಾಲು ಸಿಗುವಂತಾಗಬೇಕು. ಜತೆಗೆ ಸಾವಿರಾರು ಹಾಸಿಗೆ ಸಾಮರ್ಥ್ಯದ ಹಾಗೂ ವೆಂಟಿಲೇಟರ್ ವ್ಯವಸ್ಥೆ ಇರುವ ಆಸ್ಪತ್ರೆ ಸೌಲಭ್ಯಗಳು ಕಲ್ಪಿಸಬೇಕು. ಇದಕ್ಕೆ ಬೇಕಾದ ಎಲ್ಲ ಅಗತ್ಯ ಸಲಕರಣೆಗಳ ಉತ್ಪಾದನೆಯನ್ನು ಆದಷ್ಟು ಬೇಗ ಮಾಡುವುದು ನಿರ್ಣಾಯಕವಾಗಿದೆ. ಇದರ ಜತೆಗೆ ನಾವು ಈಗ ಮಾಡುತ್ತಿರುವ ಕೊರೋನಾ ಸೋಂಕು ಪರೀಕ್ಷೆಗಳ ಪ್ರಮಾಣವನ್ನು ಹೆಚ್ಚಿಸುವತ್ತ ಗಮನಹರಿಸಬೇಕು. ಆಗ ಮಾತ್ರ ನಾವು ಇದನ್ನು ನಿಯಂತ್ರಿಸಲು ಸಾಧ್ಯ.

ಸರ್ಕಾರ ದಿಢೀರನೆ ಲಾಕ್ ಡೌನ್ ನಿರ್ಧಾರ ಘೋಷಣೆ ಮಾಡಿರುವುದರಿಂದ ಜನಸಾಮಾನ್ಯರಲ್ಲಿ ಆತಂಕ ಮತ್ತು ಗೊಂದಲ ಹೆಚ್ಚಿದೆ. ಸಾವಿರಾರು ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಬಾಡಿಗೆ ಕಟ್ಟಲು ಸಾಧ್ಯವಾಗದೇ ಮನೆಗಳನ್ನು ತ್ಯಜಿಸುವಂತೆ ಮಾಡಿದೆ. ಹೀಗಾಗಿ ಈ ವಿಚಾರದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ತಕ್ಷಣವೇ ಈ ಜನರ ಮನೆ ಬಾಡಿಗೆಗೆ ಆರ್ಥಿಕ ನೆರವು ನೀಡಬೇಕಿದೆ. ಸಣ್ಣ ಕೈಗಾರಿಕೆಗಳು, ಕಾರ್ಖಾನೆಗಳು ಹಾಗೂ ಕಟ್ಟಡ ನಿರ್ಮಾಣ ಕೇಂದ್ರಗಳು ಬಾಗಿಲು ಮುಚ್ಚಿರುವ ಪರಿಣಾಮ ಸಾವಿರಾರು ಕಾರ್ಮಿಕರು ತಮ್ಮ ಊರುಗಳತ್ತ ಮುಖಮಾಡಿದ್ದಾರೆ. ಲಾಕ್ ಡೌನ್ ನಿಂದಾಗಿ ಅವರಿಗೆ ಸಾರಿಗೆ ವ್ಯವಸ್ಥೆ ಇಲ್ಲದೇ ರಾಜ್ಯಗಳ ಗಡಿಯಲ್ಲಿ ಸಾವಿರಾರು ಮಂದಿ ಕಾರ್ಮಿಕರು ಸಿಲುಕಿ ಒದ್ದಾಡುತ್ತಿದ್ದಾರೆ. ದಿನಗೂಲಿ ನೌಕರರಿಗೆ ಆದಾಯ ಇಲ್ಲದೇ ಪೌಷ್ಠಿಕತೆ ಕೊರತೆ ಹಾಗೂ ಅಗತ್ಯ ಮೂಲಭೂತ ಸೇವೆಗಳಿಲ್ಲದೇ ಪರದಾಡುವಂತಾಗಿದೆ. ಅವರು ಈಗ ದೂರದ ಊರಿಗೆ ಹೋಗಲು ಸಾಧ್ಯವಾಗದೇ ನಿರಾಶ್ರಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಅವರ ನೆರವಿಗೆ ಬಂದು ಅವರು ಉಳಿದುಕೊಳ್ಳಲು ಸೂರು ಕಲ್ಪಿಸುವ ಅಗತ್ಯವಿದೆ. ಮುಂದಿನ ಕೆಲವು ಸಂಕಷ್ಟದ ತಿಂಗಳುಗಳನ್ನು ಈ ಬಡ ಕಾರ್ಮಿಕ ವರ್ಗ ಸಮರ್ಥವಾಗಿ ಎದುರಿಸಲು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಹಾಕಬೇಕಿದೆ.

ವೈರಸ್ ಸೋಂಕಿನಿಂದ ಹಾಗೂ ಮುಂದಿನ ಕೆಲವು ವಾರಗಳ ಕಾಲ ಜಾರಿಯಲ್ಲಿರುವ ಲಾಕ್ ಡೌನ್ ನಿಂದ ಆಗಲಿರುವ ಅನಾಹುತಗಳಿಂದ ನಮ್ಮ ಪ್ರಮುಖ ಆರ್ಥಿಕ ಕೇಂದ್ರಗಳನ್ನು ರಕ್ಷಿಸಲು ಸರ್ಕಾರ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ರೈತರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಜಾಲಗಳು ನಮ್ಮ ಆರ್ಥಿಕತೆಯ ಪುನರ್ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಹೀಗಾಗಿ ಸರಿಯಾದ ಸಮಯದಲ್ಲಿ ಸೂಕ್ತ ಕ್ರಮಗಳೊಂದಿಗೆ ಅವರನ್ನು ಸಂಪರ್ಕಿಸಿ, ಅವರ ಹಿತಾಸಕ್ತಿ ಕಾಪಾಡಿ ಅವರಲ್ಲಿ ಆತ್ಮವಿಶ್ವಾಸ ಮೂಡುವಂತೆ ಮಾಡಬೇಕು.

ಈ ಸವಾಲಿನ ಸಂದರ್ಭವನ್ನು ಸಮರ್ಥವಾಗಿ ಎದುರಿಸಿ, ಇದರಿಂದ ಹೊರಬರುವ ಹೋರಾಟದಲ್ಲಿ ನಾವು ಸರ್ಕಾರದ ಜತೆ ಬೆಂಬಲವಾಗಿ ನಿಲ್ಲುತ್ತೇವೆ.’

Leave a Reply