ದೇಶದ ಜನರಲ್ಲಿ ಕ್ಷಮೆ ಕೋರಿದ ಪ್ರಧಾನಿ!

ಡಿಜಿಟಲ್ ಕನ್ನಡ ಟೀಮ್:

ಕೊರೋನಾ ಸೋಂಕು ನಿಯಂತ್ರಣಕ್ಕೆ ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು. ಹೀಗಾಗಿ ದೇಶದಲ್ಲಿ ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗಿದ್ದು, ಇದಕ್ಕಾಗಿ ಜನರಲ್ಲಿ ಕ್ಷಮೆ ಕೋರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಇಂದು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೇಳಿದ್ದಿಷ್ಟು…

‘ಈ ರೀತಿಯ ಕಠಿಣ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಈ ನಿರ್ಧಾರದಿಂದ ಬಡವರಿಗೆ ನನ್ನ ಮೇಲೆ ಕೋಪ ಬಂದಿದ್ದು, ಏಕೆ ಈ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಕೊರೋನಾ ವೈರಸ್​ ನಿಯಂತ್ರಿಸಲು ನಮ್ಮ ಮುಂದೆ ಬೇರೆ ದಾರಿಯೇ ಇರಲಿಲ್ಲ. ಈ ರೀತಿಯ ನಿರ್ಧಾರಗಳನ್ನು ಯಾರೂ ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ. ಆದರೆ, ಬೇರೆ ದೇಶಗಳ ಸ್ಥಿತಿ ನೋಡಿದಾಗ ಈ ರೀತಿಯ ಕ್ರಮವೇ ಸರಿಯಾಗಿದೆ.

ಸಮಸ್ಯೆಗಳು ಅಥವಾ ರೋಗಗಳು ಹೆಚ್ಚುವ ಮೊದಲೇ ನಾವು ಕ್ರಮ ಕೈಗೊಳ್ಳಬೇಕು. ಕೊರೋನಾ ವೈರಸ್​ ಎಲ್ಲರಿಗೂ ಹಾನಿ ಉಂಟು ಮಾಡುತ್ತಿದೆ. ಈ ವೈರಸ್​ ವಿರುದ್ಧ ಎಲ್ಲರೂ ಹೋರಾಡಬೇಕಿದೆ. ಹೀಗಾಗಿ ಎಲ್ಲರೂ ಬಂದ್​ ಆದೇಶವನ್ನು ಪಾಲಿಸಬೇಕು. ನಿಮಗೆ ನೀವೇ ಲಕ್ಷ್ಮಣ ರೇಖೆ ಹಾಕಿಕೊಂಡು ಲಾಕ್​ಡೌನ್​ ಯಶಸ್ವಿಗೊಳಿಸಬೇಕು.

ಸಾಕಷ್ಟು ಜನರು ಕೊರೋನಾ ವೈರಸ್​ ವಿರುದ್ಧ ಹೋರಾಡುತ್ತಿದ್ದಾರೆ. ವೈದ್ಯರು, ನರ್ಸ್​ಗಳು ಮತ್ತು ಔಷಧಾಲಯದವರು ಕೊರೋನಾ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಇವರು ಮೊದಲ ಸಾಲಿನ ಸೈನಿಕರು.’

Leave a Reply