ಮೋದಿ ಕ್ಷಮೆ ಕೇಳ್ತಾರೆ, ಸಿಎಂ ಮನವಿ ಮಾಡ್ತಾರೆ, ಇವ್ರು ಧಮ್ಕಿ ಹಾಕ್ತಾರೆ..!

ಡಿಜಿಟಲ್ ಕನ್ನಡ ಟೀಮ್:

ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜನತೆ ಲಾಕ್‍ಡೌನ್ ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಎಂ ಯಡಿಯೂರಪ್ಪ ಮನವಿ ಮಾಡುತ್ತಾರೆ. ಕೊರೋನಾ ವೈರಸ್ ನಮ್ಮ ತಾಳ್ಮೆಯನ್ನು ಪರೀಕ್ಷಿಸಲೆಂದೇ ಬಂದಿರುವ ವಿಪತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ 21 ದಿನಗಳ ಕಾಲ ಲಾಕ್‍ಡೌನ್ ವಿಧಿಸಿದ್ದಾರೆ‌. ಅನಿವಾರ್ಯ ಪರಿಸ್ಥಿತಿಗಾಗಿ ಇಡೀ ದೇಶದ ಜನತೆಯ ಕ್ಷಮೆಯನ್ನೂ ಪ್ರಧಾನಿ ಕೇಳಿದ್ದಾರೆ. ದೇಶದ ಪ್ರಧಾನಮಂತ್ರಿ ಜನತೆಯ ಕ್ಷಮೆ ಕೇಳುವ ಅನಿವಾರ್ಯತೆ eದುರಾಗಿದೆ ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕು. ಇಡೀ ಜಗತ್ತಿನ ಇತಿಹಾಸದಲ್ಲಿಯೇ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಅಂತಹ ಪರಿಸ್ಥಿತಿ ಬಂದಿದೆ ಎಂದ ಮೇಲೆ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ದಯಮಾಡಿ ಮನೆಯಿಂದ ಯಾರೂ ಹೊರಗೆ ಬರಬೇಡಿ ಎಂದಿದ್ದಾರೆ. ನಾವು ಪ್ರಧಾನಿ ಹೇಳಿರುವ ಆದೇಶವನ್ನು ಪಾಲಿಸಬೇಕಿದೆ ಎಂದಿದ್ದಾರೆ.

ಆದರೆ ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕ್ಲಾಸ್ ತೆಗೆದುಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆಯುತ್ತಿದ್ದ ಕೋವಿಡ್ – 19 ಕುರಿತ ಅಧಿಕಾರಿಗಳ ಸಭೆಯಲ್ಲಿ‌ ಫುಲ್​ ಕ್ಲಾಸ್ ಕೊಟ್ಟಿದ್ದಾರೆ. ನಿನ್ನೆ ರೇಣುಕಾಚಾರ್ಯ ಜನರನ್ನು ಸೇರಿಸಿಕೊಂಡು ಓಡಾಡುತ್ತಿದ್ದರು. ಈ ವೇಳೆ ರೇಣುಕಾಚಾರ್ಯ ಅವರನ್ನು ಪ್ರಶ್ನಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಇಲ್ಲಿಗೆ ಏಕೆ ಬಂದಿದ್ದೀರಿ ಎಂದು ಕ್ಲಾಸ್ ತೆಗೆದುಕೊಂಡಿದ್ದರು. ನಿನ್ನೆ ಜಿಲ್ಲಾಧಿಕಾರಿ ಕ್ಲಾಸ್ ತೆಗೆದುಕೊಂಡಿದ್ದಕ್ಕೆ ಇವತ್ತು ರೇಣುಕಾಚಾರ್ಯ ಕೌಂಟರ್ ಕೊಟ್ಟಿದ್ದಾರೆ.

ರೇಣುಕಾಚಾರ್ಯ ಗುಂಪುಗೂಡಿಕೊಂಡು ಹೋಗಿದ್ದೂ ಅಲ್ಲದೆ ಜಿಲ್ಲಾಧಿಕಾರಿಗೆ ಅವಾಜ್​ ಹಾಕಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಜಿಲ್ಲಾಧಿಕಾರಿಗೆ ವಾರ್ನ್ ಮಾಡಿದ್ದಾರೆ ಎನ್ನಲಾಗಿದೆ. ನಾನು ಜನರ ಸೇವೆ ಮಾಡೋಕೆ ಜನಪ್ರತಿನಿಧಿ ಆಗಿರೋದು. ಹೆಂಡತಿ ಮಕ್ಕಳ ಜೊತೆ ಕೂತಕೊಂಡು ಊಟ ತಿಂಡಿ‌ ಮಾಡಿ ಮನೆಯಲ್ಲಿ ಇರೋಕೆ ಅಲ್ಲಾ. ನಮಗೂ ಕರ್ತವ್ಯ ಇದೆ. ಜನರಿಗೆ ತಿಳುವಳಿಕೆ ನೀಡುವ ಕೆಲಸ ಮಾಡೋದು ನಮ್ಮ ಕೆಲಸ. ನಮಗೂ ಜವಾಬ್ದಾರಿ‌ ಇದೆ. ಜಿಲ್ಲಾಧಿಕಾರಿ ಈ ರೀತಿ ಉಡಾಫೆ ಮಾತಾಡಬಾರದು. ಹತ್ತಾರು ಶಾಸಕರು ನಮಗೆ ಪೋನ್ ಮಾಡಿ ಮಾತಾಡಿದ್ದಾರೆ. ಜಿಲ್ಲಾಧಿಕಾರಿ ಉಡಾಫೆ ಮಾತನಾಡಿದ್ದಾರೆ ಎಂದು. ಆ ರೀತಿ ಮಾತನಾಡಬಾರದು ಇದು ಒಳ್ಳೆ ಬೆಳವಣಿಗೆ ಅಲ್ಲ. ನಾವು ಜನರ ಮಧ್ಯ ಇರ್ತೇವೆ, ಜನರ ರಕ್ಷಣೆ ನಮ್ಮ ಕರ್ತವ್ಯ ಎಂದು ದಬಾಯಿಸಿದ್ದಾರೆ. ಅಂತಿಮವಾಗಿ ರೇಣುಕಾಚಾರ್ಯ ಅವರನ್ನ ಸಚಿವ ಈಶ್ವರಪ್ಪ ಸಮಾಧಾನ ಮಾಡಿದ್ದಾರೆ. ಒಟ್ಟಾರೆ, ಪ್ರಧಾನಿ ನರೇಂದ್ರ ಮೋದಿ ಮನೆಬಿಟ್ಟು ಹೊರಕ್ಕೆ ಬರಬೇಡಿ ಎಂದಿರುವುದು, ಸಿಎಂ ಮನವಿ ಮಾಡಿರುವುದು ಯಾವುದೂ ಲೆಕ್ಕವಿಲ್ಲ. ರೇಣುಕಾಚಾರ್ಯ ಅವರು ಮಾತ್ರ ಧಮ್ಕಿ ಹಾಕುತ್ತಾ ತಿರುಗಾಡುತ್ತಿದ್ದಾರೆ.

Leave a Reply