ನಾಲ್ಕು ಜಿಲ್ಲೆಗೆ ಹರಡುತ್ತಾ ನಂಜನಗೂಡಿನ ವಿಷ..?

ಕೊರೊನಾ ಮಹಾಮಾರಿ ದಿನೇದಿನೇ ಹೆಚ್ಚಾಗುತ್ತಿದ್ದು, ಇಂದು ಮೈಸೂರಿನಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಮೈಸೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 3ನೇ ಸೋಂಕಿತ ರೋಗಿಯಿಂದ 9 ಮಂದಿಗೆ ಸೋಂಕು ಹರಡಿದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಇಡೀ ಕರ್ನಾಟಕ ರಾಜ್ಯದಲ್ಲಿ ಕೋವಿಡ್ – 19, ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ. 10 ಸೋಂಕಿತರು ನಂಜನಗೂಡಿನ ಜುಬಿಲೆಂಟ್ಸ್ ಕಂಪನಿ ನೌಕರರಾಗಿದ್ದಾರೆ. ಉಳಿದ ಇಬ್ಬರು ಕೊರೊನಾ ಸೋಂಕಿತರು ಹೊರಗಿನಿಂದ ಬಂದವರು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ರಾಜ್ಯದಲ್ಲಿ ಇದೀಗ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಕೇಸ್‌ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಮಂಡ್ಯ, ಹಾಸನ , ಚಾಮರಾಜನರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಕಾರ್ಮಿಕರು ಕೆಲಸ ಮಾಡುತ್ತಿದ್ದು ಸಾಕಷ್ಟು ಮಂದಿ ಯುಗಾದಿ ಹಬ್ಬ ಆಚರಣೆಗೆ ಸ್ವಂತ ಊರುಗಳಿಗೆ ಹೋಗಿ ಬಂದಿದ್ದಾರೆ. ನಂಜನಗೂಡಿನ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ 36 ಜನರಿಗೆ ಚಾಮರಾಜನಗರ ಜಿಲ್ಲೆಯ ಅಂಬೇಡ್ಕರ್ ಭವನದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಒಬ್ಬರಿಗೆ ಜಿಲ್ಲಾಸ್ಪತ್ರೆ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಎಂದು ಚಾಮರಾಜನಗರದ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಹೇಳಿದ್ದಾರೆ.

ನಂಜನಗೂಡಲ್ಲಿ ಇಂದು 4 ಜನರಿಗೆ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ಜೂಬಿಲೆಂಟ್ಸ್​ ಕಾರ್ಖಾನೆ ಸಿಬ್ಬಂದಿಯಿಂದ ನಾಲ್ವರಿಗೆ ಸೋಂಕು ಹರಡಿದೆ ಎನ್ನುವ ಆತಂಕ ಶುರುವಾಗಿದೆ. ಮೈಸೂರಲ್ಲಿ ಒಟ್ಟು 12 ಮಂದಿಗೆ ಸೋಂಕು ದೃಢಪಟ್ಟಿದೆ. ಹಾಸನ ಜಿಲ್ಲೆಯಲ್ಲಿ 10 ಮಂದಿಗೆ ಸೋಂಕಿನ ಶಂಕೆ ವ್ಯಕ್ತವಾಗಿದೆ. ಹಾಸನ ಜಿಲ್ಲೆಯಲ್ಲಿ ಮೂವರು ಶಂಕಿತರು ನಾಪತ್ತೆಯಾಗಿದ್ದಾರೆ ಎನ್ನಲಾಗ್ತಿದೆ. ಮಂಡ್ಯದಲ್ಲೂ ಒಬ್ಬರಿಗೆ ಸೋಂಕು ಹರಡಿರೋ ಶಂಕೆ ವ್ಯಕ್ತವಾಗಿದೆ. ಚಾಮರಾಜನಗರದ ಕೆಲವರಿಗೆ ಸೋಂಕಿನ ಭೀತಿ ಇದ್ದು, ಬಳ್ಳಾರಿಯಲ್ಲಿ ಇಬ್ಬರಿಗೆ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ.

ಬಳ್ಳಾರಿಗೂ ನಂಜನಗೂಡಿನ ಕೊರೊನಾ ನಂಟಿದೆ ಅಂತಾ ಅಧಿಕಾರಿಗಳು ಹೇಳುತ್ತಿದ್ದಾರೆ. ನಂಜನಗೂಡಿನ ಕಾರ್ಮಿಕನ ಸಂಪರ್ಕದಲ್ಲಿದ್ದ ಬಳ್ಳಾರಿ ಮೂಲದ ಇಬ್ಬರ ಕುಟುಂಬದ ಸದಸ್ಯರು ಸಿರಗುಪ್ಪಕ್ಕೆ ತೆರಳಿದ್ದಾರೆ. ಈ ವೇಳೆ ಇಬ್ಬರನ್ನೂ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ಮಾಡಿದ್ದಾರೆ. ಸದ್ಯ ಇಬ್ಬರಿಗೂ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐಸೊಲೇಷನ್‌ ವಾರ್ಡ್​ನಲ್ಲಿ ಇಟ್ಟಿದ್ದಾರೆ. ರಕ್ತದ ಮಾದರಿ ಸಂಗ್ರಹಿಸಿ ಟೆಸ್ಟ್​ಗೆ ಕಳುಹಿಸಲಾಗಿದೆ. ಒಟ್ಟಾರೆ, ನಣಜನಗೂಡಿನ ನಂಜು ಹಾಸನ, ಮಂಡ್ಯ, ಚಾಮರಾಜನಗರಕ್ಕೆ ಪಸರಿಸುತ್ತದೆ ಎನ್ನುವ ಆತಂಕ್ ನಡುವೆ ಬಳ್ಳಾರಿಯತ್ತಲೂ ಪ್ರಯಾಣ ಮುಂದುವರಿಸಿದೆ ಎನ್ನುವ ಆತಂಕಕಾರಿ ವಿಚಾರ ಬಯಲಾಗಿದೆ.

Leave a Reply