ಕೊರೋನಾ ಸವಾಲಿನ ಮಧ್ಯೆ ಎಣ್ಣೆ ತಂದ ಸಂಕಷ್ಟ!

ಡಿಜಿಟಲ್ ಕನ್ನಡ ಟೀಮ್:

ಕೊರೊನಾ ವೈರಸ್​ ಮರಣ ಮೃದಂಗ ಬಾರಿಸಿ ವಿಶ್ವಾದ್ಯಂತ ನರ್ತನ ನಡೆಸುತ್ತಿದೆ. ವಿಶ್ವದಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷ ತಲುಪುತ್ತಿದೆ. ಸಾವಿನ ಸಂಖ್ಯೆ 50 ಸಾವಿರ ಸಂಖ್ಯೆ ಮುಟ್ಟುತ್ತಿದೆ. ಕೇಂದ್ರ ಸರ್ಕಾರ ದೇಶವನ್ನೇ ಲಾಕ್​ಡೌನ್​ಗೆ ಒಳಪಡಿಸಿದೆ. ಆದರೆ ಇದ್ರಿಂದ ಸಾಕಷ್ಟು ಜನ ಹಲವಾರು ರೀತಿಯ ಸಂಕಷ್ಟಗಳಿಗೆ ಒಳಗಾಗಿದ್ದಾರೆ. ಆದರೆ ಜನಸಾಮಾನ್ಯರಿಗೆ ತರಕಾರಿ, ಹಣ್ಣು ಹಂಪಲುಗಳು ಅಲ್ಪಸ್ವಲ್ಪ ದುಬಾರಿ ಆದರೂ ಸಿಗುತ್ತಿವೆ. ಆದರೆ ಸಂಪೂರ್ಣವಾಗಿ ಸಂಕಷ್ಟಕ್ಕೆ ಒಳಗಾಗಿರುವುದು ಮದ್ಯಪಾನ ಮಾಡುವ ಚಟಕ್ಕೆ ದಾಸರಾಗಿರುವ ಜನತೆ.

ಮದ್ಯ ಸಿಗಲಿಲ್ಲ ಎನ್ನುವ ಕಾರಣಕ್ಕೆ ಅನಗೋಳದ ಬೆಂಡಿಗೇರಿ ಚಾಳದಲ್ಲಿ ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡಿದ್ದಾರೆ. ಸವದತ್ತಿಯ ಅವರು ಸಲೂನ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ 42 ವರ್ಷದ ದೇವೇಂದ್ರಪ್ಪ ಹಡಪದ ಸಾವನ್ನಪ್ಪಿದ್ದಾರೆ. ಗಂಡನಿಗೆ ಕುಡಿಯುವ ಚಟವಿತ್ತು. ಮನೆಯವರು ಹಾಗೂ ಅಂಗಡಿ ಮಾಲೀಕರು ಬುದ್ಧಿವಾದ ಹೇಳಿದರೂ ಕೇಳಿರಲಿಲ್ಲ. ಲಾಕ್‌ಡೌನ್‌ ಬಳಿಕ ಅಂಗಡಿ ಕೂಡ ಬಂದ್ ಆಗಿತ್ತು. ಕುಡಿಯಲು ಮದ್ಯ ಸಿಗಲಿಲ್ಲ, ನಾನು ಬದುಕುವುದಿಲ್ಲ ಎಂದು ಅಳುತ್ತಾ ಕರೆ ಮಾಡಿದ್ದರು. ಬಳಿಕ ನಾನು ಬದುಕುವುದಿಲ್ಲ ಎಂದು ಫೋನ್​ ಕಟ್​ ಮಾಡಿದರು ಎಂದು ಮೃತನ ಪತ್ನಿ ಹೇಮಾವತಿ ಟಿಳಕವಾಡಿ ಪೊಲೀಸರಿಗೆ ತಿಲೀಸಿದ್ದಾರೆ. ಈ ಮೂಲಕ ಮದ್ಯ ಸಿಗದೆ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಮದ್ಯ ಮಾರಾಟ ಆಗದೆ ಇರುವ ಕಾರಣಕ್ಕೆ ನೂರಾರು ಕಡೆ ಮದ್ಯ ಮಾರಾಟ ಸಾಧ್ಯವಾಗ್ತಿಲ್ಲ. ಆದರೆ ನಗರ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪಟ್ಟಣಗಳು, ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ ಎಗ್ಗಿಲ್ಲದೆ ಸಾಗಿದೆ. 30 ರೂಪಾಯಿ ಕಳಪೆ ಮದ್ಯಕ್ಕೆ 150 ರೂಪಾಯಿ ತೆಗೆದುಕೊಂಡು ಮಾರಾಟ ಮಾಡಲಾಗ್ತಿದೆ. ಇನ್ನು ಕೆಲವು ಕಡೆಗಳಲ್ಲಿ ಮದ್ಯದ ಅಂಗಡಿಗಳನ್ನೇ ಕುಡುಕರು ಲೂಟಿ ಮಾಡುತ್ತಿದ್ದಾರೆ.

ಗದಗ ಜಿಲ್ಲೆಯ MSIL ಮದ್ಯದಂಗಡಿಯಲ್ಲಿ ಕುಡುಕರು ಮದ್ಯವನ್ನು ಕಳ್ಳತನ ಮಾಡಿದ್ದಾರೆ. ಗದಗ ತಾಲೂಕಿನ ಕಳಸಾಪೂರ ಗ್ರಾಮದ ಹೊರವಲಯದಲ್ಲಿರುವ MSIL ಶಾಪ್​​ನ ಅಂಗಡಿ ಬೀಗ ಮುರಿದು ಕಳ್ಳತನ ಮಾಡಿದ ಕಳ್ಳರು, ಕಡಿಮೆ ಬೆಲೆ ಮದ್ಯವನ್ನು ಮಾತ್ರ ದೋಚಿಕೊಂಡು ಎಸ್ಕೇಪ್​ ಆಗಿದ್ದಾರೆ. ದುಬಾರಿ ಬೆಲೆಯ ಮದ್ಯ ಅಂಗಡಿಯಲ್ಲಿ ಇದ್ದರೂ ಅದನ್ನು ಅಲ್ಲೇ ಬಿಟ್ಟು ಕೇವಲ ಕಡಿಮೆ ಬೆಲೆ ಮದ್ಯವನ್ನು ಮಾತ್ರ ಕಳ್ಳತನ ಮಾಡಿದ್ದಾರೆ. ವಿಶೇಷ ಅಂದರೆ ಅಂಗಡಿಯಲ್ಲಿದ್ದ 1 ಲಕ್ಷ 50 ಸಾವಿರ ನಗದು ಕಳ್ಳರು ತೆಗೆದುಕೊಂಡು ಹೋಗಿಲ್ಲ. ಗದಗ ಗ್ರಾಮೀಣ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ತುಂಬಾ ಜನರು ಕುಡಿತದ ಚಟಕ್ಕೆ ದಾಸ್ಯರಾಗಿ ಇರುತ್ತಾರೆ. ಅವರಿಗೆ ಊಟ ಇಲ್ಲದಿದ್ದರೂ ಬದುಕಬಲ್ಲರು. ಆದರೆ ಮದ್ಯ ಇಲ್ಲದಿದ್ದರೆ ಯಾವುದೇ ಚಟುವಟಿಕೆ ನಡೆಯುವುದಕ್ಕೆ ಸಾಧ್ಯವೇ ಇರುವುದಿಲ್ಲ. ಇದೇ ಕಾರಣಕ್ಕಾಗಿ ಕೇರಳದಲ್ಲಿ ವೈದ್ಯರಿಂದ ಪ್ರಿಸ್ಕಿಪ್ಷನ್​ ಪಡೆದುಕೊಂಡು ಬಂದರೆ ಮದ್ಯವನ್ನು ಕೊಡುವಂತೆ ಸರ್ಕಾರ ಆದೇಶ ಮಾಡಿತ್ತು. ಅವಶ್ಯಕತೆ ಇದ್ದವರಿಗೆ ಮದ್ಯ ಸಿಗದಿದ್ದರೆ ಇಲ್ಲವೇ ದರೋಡೆ ಮಾಡುತ್ತಾರೆ. ಇಲ್ಲವೇ ಖಿನ್ನತೆಗೆ ಒಳಗಾಗಿ ಮನೆಯವರು ಅಥವಾ ಸಿಕ್ಕಸಿಕ್ಕವರ ಹತ್ಯೆ ಮಾಡುತ್ತಾರೆ ಅಥವಾ ಆತ್ಮಹತ್ಯೆಗೆ ಶರಣಾಗುತ್ತಾರೆ. ಈ ಬಗ್ಗೆ ತಜ್ಞರು ಸರ್ಕಾರಕ್ಕೆ ಸೂಕ್ತ ಮಾಹಿತಿ ನೀಡುವ ಮೂಲಕ ಸಮ್ಯೆಗೆ ಇತಿಶ್ರಿ ಹಾಡಬೇಕಿದೆ.

Leave a Reply