ರಾಜ್ಯ ಸರ್ಕಾರದಲ್ಲಿ ಕರೊನಾ ಕಲಹ! ಯಶಸ್ವಿಯಾಗುತ್ತಾ ಹೊರ ಮದ್ದು..?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಕರೊನಾ ಕಾಣಿಸಿಕೊಂಡ ಮೊದಲ ದಿನದಿಂದಲೂ ಕರೊನಾ ವಿಚಾರದಲ್ಲಿ ಸರ್ಕಾರ ಎಡವುತ್ತಲೇ ಸಾಗಿದೆ ಎನ್ನುವುದು ಜನಸಾಮಾನ್ಯರಿಗೂ ಮೇಲ್ನೋಟಕ್ಕೆ ಕಾಣಿಸುತ್ತಿದೆ. ತೆಗೆದುಕೊಳ್ಳುವ ನಿರ್ಧಾರಗಳು ಪೂರ್ವಾಪರ ಯೋಜನೆ ಮಾಡದೆ ಪ್ರಕಟ ಮಾಡುವ ನಿಲುವುಗಳು. ಬೀದಿಗೆ ಬಂದವರನ್ನು ಸೂಕ್ತ ರೀತಿಯಲ್ಲಿ ನಿಯಂತ್ರಣ ಮಾಡಲಾಗದೆ ಅಮಾನವೀಯವಾಗಿ ಹಲ್ಲೆ ಮಾಡಿದ್ದು, ನಗರದಿಂದ ಹಳ್ಳಿ ಕಡೆಗೆ ಹೋಗಿ ಎಂದು ಬಸ್​ ಸೌಕರ್ಯ ಕೊಡದೆ ಜನರು ಬೀದಿಯಲ್ಲಿ ಪರದಾಡುವ ಸ್ಥಿತಿಗೆ ಬಂದರು. ಇದೆಲ್ಲದರ ನಡುವೆ ಕರೊನಾ ಕಂಟ್ರೋಲ್​ ಮಾಡಬೇಕಾದ ಮಹತ್ವ ಇಲಾಖೆ ನಿರ್ವಹಿಸುವ ಇಬ್ಬರು ಸಚಿವರು ಸರ್ಕಾರದ ಮಟ್ಟದಲ್ಲೇ ರಂಪಾಟ ಮಾಡಿಕೊಂಡಿದ್ದು, ಜನರು ಕಣ್ಣಾರ ನೋಡಿ ಕಿಸಕ್ಕೆ ನಗುವಂತೆ ಮಾಡಿತು ಯಡಿಯೂರಪ್ಪ ನೇತೃತ್ವದ ಸರ್ಕಾರ.

ಕರೊನಾ ಸೋಂಕನ್ನು ತಡೆಗಟ್ಟಲು ರಾಜ್ಯದಲ್ಲಿ ಎರಡು ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕಾದ ಅಗತ್ಯವಿದೆ. ಅದರಲ್ಲಿ ಮೊದಲನೆಯದು ಆರೋಗ್ಯ ಇಲಾಖೆ. ಅದರ ಸಚಿಬ ಶ್ರೀರಾಮುಲು, ಇನ್ನೊಂದು ವೈದ್ಯಕೀಯ ಶಿಕ್ಷಣ ಇಲಾಖೆ. ಇದರ ಸಚಿವ ಡಾ ಸುಧಾಕರ್​. ಈ ಇಲಾಖೆಗಳು ಒಗ್ಗಟ್ಟಿನಿಂದ ಕೆಡಲಸ ಮಾಡಬೇಕು. ಆದರೆ ಈ ಎರಡು ಇಲಾಖೆಯ ಸಚಿವರುಗಳು ಪೈಪೋಟಿ ನಡೆಸುತ್ತಾ ಹೇಳಿಕೆ ಕೊಡುವುದು. ಒಬ್ಬರ ಹೇಳಿಕೆಗೆ ಒಬ್ಬರು ಕೌಂಟರ್ ಹೇಳಿಕೆ ಕೊಡುವುದರಲ್ಲೇ ಕಾಲ ಕಳೆದಿದ್ದಾರೆ. ಒಮ್ಮೆ ಸುಧಾಕರ್​ ಬಹಿರಂಗವಾಗಿ ಸಚಿವ ಶ್ರೀರಾಮುಲು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯ ಪ್ರವೇಶ ಮಾಡಿ ಬೆಂಗಳೂರು ನಗರ ಉಸ್ತುವಾರಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್​ ಅವರಿಗೆ, ಇನ್ನೂ ಉಳಿದ ಜಿಲ್ಲೆಗಳ ಉಸ್ತುವಾರಿ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಎಂದು ವಿಂಗಡಣೆ ಮಾಡಿದ್ರು. ಆದರೂ ಅಸಮಾಧಾನದ ಬೇಗುದಿ ನಿಲ್ಲಲಿಲ್ಲ. ನನ್ನ ವೈದ್ಯಕೀಯ ಶಿಕ್ಷಣ ಇಲಾಖೆ ಕಾಲೇಜಿಗೆ ಒಳಪಡುವ ಆಸ್ಪತ್ರೆಗಳು ಜಿಲ್ಲಾ ಕೇಂದ್ರಗಳಲ್ಲೂ ಇವೆ. ನಾನು ಇದನ್ನು ಒಪ್ಪಲ್ಲ ಎಂದು ನೇರವಾಗಿಯೇ ಸುಧಾಕರ್​ ಹೇಳಿದ್ರು. ಇದಾದ ಮೇಲೆ ಈಗ ಮತ್ತೊಂದು ಉತ್ತರ ಕಂಡು ಕೊಂಡಿದ್ದಾರೆ. ಇದು ಬಗೆಹರಿಯುತ್ತಾ..? ಗೊತ್ತಿಲ್ಲ.

ಇಬ್ಬರ ನಡುವಿನ ಕಿತ್ತಾಟ ಮೂರನೆಯವರಿಗೆ ಲಾಭ..?

ಇಂದಿನಿಂದ ರಾಜ್ಯದಲ್ಲಿ ಕರೊನಾ ಬಗೆಗಿನ ಯಾವುದೇ ಮಾಹಿತಿ ಇದ್ದರು ಮಾಧ್ಯಮಗಳ ಎದುರು ಬಹಿರಂಗ ಮಾಡುವ ಸಚಿವ ಸುರೇಶ್ ಕುಮಾರ್. ಇದನ್ನು ಸ್ವತಃ ಸಿಎಂ ಇಂದಿನ ಸಭೆಯಲ್ಲಿ ಅಧಿಕೃತವಾಗಿ ಹೇಳಿದ್ದಾರೆ ಎನ್ನಲಾಗಿದೆ. ಇಂದು ನಡೆದ ಸಚಿವರ ಸಭೆಯಲ್ಲಿ ಸಚಿವ ಸುರೇಶ್ ಕುಮಾರ್​ಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ತಿಳಿಸಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕಾರ್ ನಡುವಿನ ದ್ವಂದ್ವ ಹೇಳಿಕೆಗಳಿಂದ ಬೇಸತ್ತ ಸಿಎಂ ಯಡಿಯೂರಪ್ಪ, ಕರೊನಾ ಬಗೆಗಿನ ಮಾಹಿತಿ ನೀಡಲು ಸಚಿವ ಸುರೇಶ್ ಕುಮಾರ್​ಗೆ ಒಪ್ಪಿಸಿದ್ದಾರೆ ಎನ್ನಲಾಗ್ತಿದೆ. ಇನ್ನು ಮುಂದೆ ಪ್ರತಿದಿನ ಸಂಜೆ 5.30ಕ್ಕೆ ವಿಧಾನಸೌದದಲ್ಲಿ ಸಚಿವ ಸುರೇಶ್ ಕುಮಾರ್ ಹಾಜರಿದ್ದು ಹೆಲ್ತ್ ಬುಲೆಟಿನ್ ಬಿಡುಗಡೆಗೆ ಮಾಡಲಿದ್ದಾರೆ. ತಮ್ಮ ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಸಚಿವರು ಕೊಡಬಹುದು. ಆದರೆ ಕರೋನಾ ಕುರಿತು ಮಾಹಿತಿಯನ್ನು ಸಚಿವ ಸುರೇಶ್ ಕುಮಾರ್ ಕೊಡಬೇಕು.

ಇಬ್ಬರು ಸಚಿವರು ತಮಗೆ ಸಿಕ್ಕ ಮಾಹಿತಿಯನ್ನು ಕ್ರೂಢೀಕರಣ ಮಾಡಿ ಒಮ್ಮತದಿಂದ ಹೇಳಿಕೆ ಕೊಡುವುದು ಮಾಡಬೇಕಿತ್ತು. ಆದರೆ ನಾನು ನಾನು ಎನ್ನುವ ಹಪಾಹಪಿಗೆ ಸಿಲುಕಿ ಮೂರನೆ ವ್ಯಕ್ತಿಯನ್ನು ಕರೆತಂದಿದ್ದಾರೆ. ಇಬ್ಬರ ದ್ವಂದ್ವ ಹೇಳಿಕೆಗಳಿಂದ ರಾಜ್ಯದ ಜನರಿಗೆ ಗೊಂದಲ ಆಗುವುದು ಬೇಡ ಎನ್ನುವ ಕಾರಣಕ್ಕೆ ಸಿಎಂ ಸಚಿವ ಸುರೇಶ್​ ಕುಮಾರ್​ ಅವರಿಗೆ ಉಸ್ತುವಾರಿ ವಹಿಸಿದ್ದಾರೆ. ಆದರೆ ಶಿಕ್ಷಣ ಸಚಿವರಾಗಿರುವ ಸುರೇಶ್​ ಕುಮಾರ್​ ಮಾತಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸೊಪ್ಪು ಹಾಕ್ತಾರಾ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಉದ್ಬವ ಆಗುತ್ತದೆ. ಶಿಕ್ಷಣ ಸಚಿವರು ಮಾಹಿತಿ ಪಡೆಯುವ ಮುನ್ನವೇ ಅಧಿಕಾರಿಗಳು ಈ ಸಚಿವರಿಗೆ ನೀಡಿದರೆ ಎನ್ನುವ ಅನುಮಾನಗಳು ಕಾಡುತ್ತಿವೆ. ಅಥವಾ ಸಚಿವ ಸುರೇಶ್​ ಕುಮಾರ್​ಗೆ ಅವಮಾನಿಸುವ ನಿಟ್ಟಿನಲ್ಲಿ ಈ ಇಬ್ಬರು ಸಚಿವರು ಕೆಲಸ ಮಾಡಿದರೆ ಎನ್ನುವ ಆತಂಕವೂ ಇದೆ. ಒಟ್ಟಾರೆ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್​ಗೆ ಸಿಎಂ ಕೋವಿಡ್​ – 19 ಉಸ್ತುವಾರಿ ವಹಿಸಿದ್ದಾರೆ. ಆದರೆ, ಕೇವಲ ಮಾಹಿತಿಯನ್ನು ಬಹಿರಂ.ಗ ಮಾಡುವುದೋ ಅಥವಾ ಕೋವಿಡ್​ – 19 ನಿಯಂತ್ರಣದ ಎಲ್ಲಾ ಉಸ್ತುವಾರಿಯೂ ಸಚಿವ ಸುರೇಶ್​ ಕುಮಾರ್​ ಪಾಲಾಗಿದೆಯೋ ಎನ್ನುವುದು ಇನ್ನೂ ಬಹಿರಂಗ ಆಗಿಲ್ಲ. ಒಂದು ಹಾಗೇನಾದರೂ ಆಗಿದ್ದರೆ ಸಚಿವ ಶ್ರೀರಾಮುಲು ಹಾಗೂ ಡಾ ಸುಧಾಕರ್​ ತಮ್ಮ ಬುಡಕ್ಕೆ ತಾವೇ ಬಿಸಿ ನೀರು ಬಿಟ್ಟುಕೊಂಡಂತೆಯೇ ಸರಿ.

Leave a Reply