ತಬ್ಲಿಗ್​ ಬೆನ್ನಲ್ಲೇ ಧಾರಾವಿಗೆ ದಂಡತ್ತಿ ಹೊರಟ ಕೊರೊನಾ..!​

ಡಿಜಿಟಲ್ ಕನ್ನಡ ಟೀಮ್:

ಚೀನಾದಲ್ಲಿ ಹುಟ್ಟಿ ವಿಶ್ವಾದ್ಯಂತ ಬೆಳೆಯುತ್ತಿರುವ ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ ಬರೋಬ್ಬರಿ 10 ಲಕ್ಷ ಗಡಿ ದಾಟಿ ಮುಂದೋಡುತ್ತಿದೆ. ಇದರಲ್ಲಿ ಶೇಕಡ 20ರಷ್ಟು ಜನರು ಗುಣಮುಖರಾಗಿದ್ದಾರೆ. ಉಳಿದ ಶೇಕಡ 80 ರಷ್ಟು ಜನರು ಸಾವಿನ ಸೆಳೆತಕ್ಕೆ ಒಳಗಾಗಿದ್ದಾರೆ. ಕೋವಿಡ್​ – 19 ಎಂಬ ಮಹಾಮಾರಿ ಅಂಕೆಶಂಕೆ ಇಲ್ಲದೆ ಪ್ರಚಂಡ ವೇಗದಲ್ಲಿ ಮುಂದೋಡುತ್ತಿರುವಾಗ ಭಾರತಕ್ಕೆ ಶಾಪವಾಗಿ ಪರಿಣಮಿಸಿದ್ದು, ದೆಹಲಿಯ ನಿಜಾಮುದ್ದೀನ್​ ತಬ್ಲಿಗ್​ನಲ್ಲಿ ನಡೆದ ಆ ಒಂದು ಸಭೆ. ತಬ್ಲಿಗ್​ ಸಭೆಯಲ್ಲಿ ಭಾಗಿಯಾಗಿದ್ದ ಬಹುತೇಕ ಜನರಿಗೆ ಕೊರೊನಾ ವೈರಸ್​ ಅಂಟಿರುವುದು ಪತ್ತೆಯಾಗಿದೆ. ತಮಿಳುನಾಡು, ತೆಲಂಗಾಣ, ಕರ್ನಾಟಕ, ದೆಹಲಿ ಸೇರಿದಂತೆ ಒಟ್ಟು 500ಕ್ಕೂ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಯಾರೆಲ್ಲಾ ಭಾಗಿಯಾಗಿದ್ದರು ಎಂದು ಹುಡುಕುವುದೇ ದೊಡ್ಡ ಸಮಸ್ಯೆ ಆಗಿದೆ. ಯಾರೊಬ್ಬರು ತಾನು ಭಾಗಿಯಾಗಿದ್ದೆ ಎಂದು ಹೇಳುತ್ತಾ ಚಿಕಿತ್ಸೆಗೆ ಸಹಕಾರ ಕೊಡುವ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಈಗಾಗಲೇ ತಬ್ಲಿಗ್​ ಸಭೆ ನಡೆದು 10 ದಿನಗಳು ಕಳೆದ ಬಳಿಕ ಈ ವಿಚಾರ ಬಯಲಾಗುತ್ತಿದ್ದು, ತಬ್ಲಿಗ್​ನಲ್ಲಿ ಭಾಗಿಯಾಗಿದ್ದ ಜನರು ಎಲ್ಲೆಲ್ಲಿ ಸುತ್ತಾಡಿದ್ದಾರೆ..? ಯಾಱರಿಗೆ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನುವ ಟ್ರ್ಯಾಕಿಂಗ್​ ಸರ್ಕಾರದ ನಿದ್ದೆಗೆಡಿಸಿದೆ. ಈ ನಡುವೆ ಭಾರತಕ್ಕೆ ಎದುರಾಗಿರುವ ಇನ್ನೊಂದು ಸಮಸ್ಯೆ ಧಾರಾವಿ ದಾಂಗುಡಿ.

ಧಾರಾವಿ ವಿಶ್ವದ ಅತಿ ದೊಡ್ಡ ಸ್ಲಂ ಪ್ರದೇಶ. ಇಲ್ಲಿನ ಜನ ಸಾಂದ್ರತೆ ಕೂಡ ವಿಶ್ವದಲ್ಲಿ ಮೊದಲ ಸ್ಥಾನದಲ್ಲೇ ಇದೆ. ಕೇವಲ 2 ಕಿಲೋ ಮೀಟರ್​ ಸುತ್ತಳತೆಯ ಈ ಸ್ಲಂನಲ್ಲಿ 7 ಲಕ್ಷ ಜನರು ವಾಸ ಮಾಡುತ್ತಿದ್ದಾರೆ. ಇಲ್ಲಿ ಅತ್ಯಂತ ಕಡಿಮೆ ದರಕ್ಕೆ ಮನೆಗಳು ಬಾಡಿಗೆ ಸಿಗುತ್ತದೆ. ಕೂಲಿ ಕಾರ್ಮಿಕರು ಸೇರಿದಂತೆ ಸಾವಿರಾರು ಜನ ಬಡವರು ಇಲ್ಲಿ ಆಶ್ರಯ ಕಂಡುಕೊಂಡಿದ್ದಾರೆ. ಧಾರಾವಿ ಪ್ರದೇಶದ ಪಕ್ಕದಲ್ಲೇ ಐದಾರು ಸಾವಿರ ಸಣ್ಣ ಕೈಗಾರಿಕೆಗಳು ನಡೆಲೆ ಕಂಡು ಕೊಂಡಿರುವ ಕಾರಣ, ಅಲ್ಲಿನ ಸಿಬ್ಬಂದಿಗಳು ವಾಸಕ್ಕೆ ಇದೇ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವಿಶ್ವ ಪ್ರಸಿದ್ಧ ಕೊಳಚೆ ಪ್ರದೇಶ ಇರೋದು ಭಾರತದ ಮ್ಯಾಂಚೆಸ್ಟರ್​ ಮುಂಬೈ ಮಹಾನಗರದಲ್ಲಿ. ಇದೀಗ ಕೊರೊನಾ ವೈರಸ್​ ಈ ಪ್ರದೇಶಕ್ಕೆ ದಾಂಗುಡಿ ಇಟ್ಟಿದೆ. ಓರ್ವ ಈಗಾಗಲೇ ಕೊರೊನಾ ವೈರಸ್​​ನಿಂದ ಸಾವನ್ನಪ್ಪಿದ್ದಾನೆ. ಮತ್ತೋರ್ವ ಮಹಿಳೆಯಲ್ಲೂ ಸೋಂಕು ಕಾಣಿಸಿಕೊಂಡಿದೆ. ಇದು ಮತ್ತೊಂದು ತಬ್ಲಿಗ್​ ರೀತಿ ಇಡೀ ದೇಶವನ್ನು ಕಾಡುವ ಶಂಕೆ ವ್ಯಕ್ತವಾಗಿದೆ.

ತಬ್ಲಿಗ್​ನಲ್ಲಿ ಭಾಗಿಯಾಗಿದ್ದವರ ಮಾಹಿತಿ ಪಡೆಯಲು ಸಿಎಂ ಯಡಿಯೂರಪ್ಪ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆ ನಡೆಸಿದ್ದಾರೆ. ತಬ್ಲಿಗ್​ನಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು ಎನ್ನುವ ಸಮರ್ಪಕ ಮಾಹಿತಿ ಕೊಡಿ, ಎಲ್ಲರಿಗೂ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡೋಣ, ಜೊತೆಗೆ ಬೇರೆಯವರಿಗೆ ಸೋಂಕು ಹರಡದಂತೆ ಎಚ್ಚರ ವಹಿಸೋಣ ಎಂದು ಮನವರಿಕೆ ಮಾಡಿಕೊಡುತ್ತಿದ್ದಾರೆ. ಒಂದು ವೇಳೆ ಇದು ಸಾಧ್ಯವಾಗದಿದ್ರೆ ಏರಿಯಾಗಳನ್ನು ಬಂದ್​ ಮಾಡುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಆದರೆ ಮುಂಬೈನ ಧಾರಾವಿ ಪರಿಸ್ಥಿತಿಯೇ ಬೇರೆ ಇದೆ. ಇಲ್ಲಿನ ಸ್ಲಂ ನಿರ್ಬಂಧ ಮಾಡುವುದು ಸಾಧ್ಯವೇ ಇಲ್ಲ. ಮುಂಬೈ ನಗರವನ್ನು ಸ್ವಚ್ಛ ಮಾಡುವ ಮಹಾನಗರ ಪಾಲಿಕೆಯ ಬಹುತೇಕ ಸಿಬ್ಬಂದಿ ವಾಸ ಮಾಡುತ್ತಿರುವುದು ಇದೇ ಸ್ಲಂನಲ್ಲಿ. ಒಂದು ವೇಳೆ ಇಡೀ ಸ್ಲಂ ಲಾಕ್​ಡೌನ್​ ಮಾಡಿದರೆ ಮುಂಬೈ ನಗರವೇ ಕೊಳಕು ತುಂಬುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ ಇದೇ ಸ್ಲಂನಿಂದ ನೂರಾರು ಮಹಿಳೆಯರು ಶ್ರೀಮಂತರ ಮನೆಗಳ ಕೆಲಸಕ್ಕೆ ಹೋಗುತ್ತಾರೆ. ಈ ಸ್ಲಂನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವುದು ಸಾಧ್ಯವೇ ಇಲ್ಲದ ಮಾತಾಗಿದೆ. ಒಂದು ಕೋಣೆಯಲ್ಲಿ ಐದಾರು ಜನರು ಮಲಗುವ ಪರಿಸ್ಥಿತಿ ಇದೆ. ಒಟ್ಟಾರೆ ಈಗಾಗಲೇ ಸ್ಲಂ ಒಳಕ್ಕೆ ಕೊರೊನಾ ವೈರಸ್​ ಎಂಟ್ರಿ ಆಗಿದೆ. ನಿಯಂತ್ರಣ ಹೇಗೆ ಆಗುತ್ತದೆ ಎನ್ನುವುದು ಸವಾಲಿನ ವಿಚಾರ.

Leave a Reply