ಕೊರೋನಾಗಿಂತ ಮಾರಕ ಈ ವೈರಸ್!

ಕೊರೋನಾ ವೈರಸ್ ಜೊತೆಗೆ ಸದ್ಯ ಸುಳ್ಳು ಸುದ್ದಿ ಎಂಬ ವೈರಸ್ ನಮ್ಮ ದೇಶವನ್ನು ದೊಡ್ಡದಾಗಿ ಕಾಡುತ್ತಿದೆ. ಅದರಲ್ಲೂ ದೆಹಲಿಯ ನಿಜಾಮುದ್ದೀನ್ ದರ್ಗಾ ಘಟನೆಯ ಬಳಿಕ ಮುಸ್ಲೀಮರು ಕೊರೋನಾ ಸೋಂಕು ಹರಡುತ್ತಿದ್ದಾರೆ ಎಂದು ಭಯ ಹುಟ್ಟಿಸುವ ಹಲವು ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಅವು ಫೇಕ್ ವಿಡಿಯೋಗಳಾಗಿದ್ದು, ನೀವು ನೋಡಿದ ಫೇಕ್ ವೀಡಿಯೊ ನೈಜ್ಯ ಬಣ್ಣ ಇಲ್ಲಿದೆ.

ಆಹಾರ ಪಾರ್ಸಲ್ಲಿನಲ್ಲಿ ಮುಸ್ಲಿಂ ಒಬ್ಬ ಉಗುಳುವ ವಿಡಿಯೋ

ಸತ್ಯ: ಈ ವಿಡಿಯೋ ಭಾರತದ್ದಲ್ಲ. ಏಪ್ರಿಲ್ 27, 2019 ರಲ್ಲಿ ಯೂಟ್ಯೂಬ್ ಪ್ರಸಾರ ಮಾಡಿತ್ತು. ಚೀನಾದಲ್ಲಿ ಕೊರೋನಾ ಕಾಲಿಟ್ಟದ್ದೇ ನವೆಂಬರ್ 2019 ರಲ್ಲಿ. ಈ ವಿಡಿಯೋ ಕಳೆದ ವರ್ಷ ಯು.ಎ.ಇ, ಸಿಂಗಾಪೂರ್ ಮತ್ತು ಮಲೇಶಿಯಾಗಳಲ್ಲಿ ಹರಿದಾಡಿದ್ದು 11,000 ಬಾರಿ ಶೇರ್ ಆಗಿದೆ.

ಮುಸ್ಲೀಮರು ಸಾಮೂಹಿಕವಾಗಿ ಮಸೀದಿಯಲ್ಲಿ ಸೀನುತ್ತಿರುವ ವಿಡಿಯೋ

ಸತ್ಯ: ಈ ವಿಡಿಯೋ ಮೊದಲು ವೈರಲ್ ಆಗಿದ್ದು ಪಾಕಿಸ್ತಾನದಲ್ಲಿ. ಜನವರಿ ತಿಂಗಳಿನಲ್ಲಿ. ಇಲ್ಲಿ ಮುಸ್ಲಿಮರು ಸೀನುತ್ತಿಲ್ಲ ಬದಲಾಗಿ ಜೋರಾಗಿ ಉಸಿರಾಡುತ್ತಿದ್ದಾರೆ. ಇದೊಂದು ಸೂಫಿ ಆಚರಣೆ. ಇದರ ಹೆಸರು ‘ಜಿಕ್ರ್’. ಮುಖ್ಯವಾಗಿ ಈ ವೀಡಿಯೋದಲ್ಲಿರುವುದು ನಿಜಾಮುದ್ಧಿನ್ ದರ್ಗಾ ಅಥವಾ ಮಸೀದಿ ಅಲ್ಲ.

ಹಲವು ಮುಸ್ಲೀಮರು ಸ್ಪೂನ್ ಮತ್ತು ತಟ್ಟೆ ನೆಕ್ಕುವ ವಿಡಿಯೋ

ಸತ್ಯ: ಈ ವಿಡಿಯೋ ಭಾರತದ್ದು ಹಾಗೂ ಮೊದಲು ಪ್ರಸಾರವಾಗಿದ್ದು ಜುಲೈ 30, 2018 ರಲ್ಲಿ. ಮುಸ್ಲಿಮರಲ್ಲಿನ ದಾವೂದಿ ಬೊಹ್ರಾ ಪಂಗಡದವರಲ್ಲಿ ಒಂದು ಅಗುಳು ಆಹಾರವನ್ನೂ ಬಿಡದೇ ನೆಕ್ಕುವ ಸಂಪ್ರದಾಯವಿದೆ. ಈ ವಿಡಿಯೋಗು ನಿಜಾಮುದ್ದೀನ್ ಮಸೀದಿಗು ಸಂಬಂಧವೆ ಇಲ್ಲ.

ಪೊಲೀಸರು ತನಗೆ ಹೊಡೆದರೆಂಬ ಕಾರಣ ಐನೂರರ ನೋಟುಗಳಿಗೆ ಗಡ್ಡದಾರಿ ಮುಸ್ಲಿಮನೊಬ್ಬ ಎಂಜಲು ಸವರುವ ವಿಡಿಯೋ

ಸತ್ಯ: ಇದರಲ್ಲಿರುವ ಇಬ್ಬರೂ ವ್ಯಕ್ತಿಗಳು ಬೇರೆ ಬೇರೆ. ನೋಟುಗಳಿಗೆ ಎಂಜಲು ಸವರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಆ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿಲ್ಲದಿರುವುದನ್ನು ದೃಡಪಡಿಸಲಾಗಿದೆ.

ಕೊರೋನಾ ಅಲ್ಲಾಹನ NRC ಎಂಬ ಟಿಕ್ ಟಾಕ್ ವಿಡಿಯೋ

ಸತ್ಯ: ಹಲವು ವಿದೇಶಿ ಮುಸ್ಲಿಮರ ಟಿಕ್ ಟಾಕ್ ವಿಡಿಯೋಗಳಿಗೆ ಹಿಂದಿ ಅಥವಾ ಉರ್ದು ಭಾಷೆ ಡಬ್ ಮಾಡಿ ವೈರಲ್ ಮಾಡಿರುವ ವಿಡಿಯೋಗಳಲ್ಲಿ ಇದೂ ಸಹ ಒಂದು. ಇಂತಹ ವಿಡಿಯೋಗಳ ಮೇಲೆ ದೆಹಲಿ ಮೂಲದ‌ ಕಂಪೆನಿಯೊಂದು ಬೆಳಕು ಚೆಲ್ಲಿದೆ. ಇಂತಹ ಕಿಡಿಗೇಡಿಗಳನ್ನು ಬಂಧಿಸಬೇಕಿದೆ.

ಇಂತಹ ಫೇಕ್ ವಿಡಿಯೋಗಳಿಂದಾಗಿ ಕೋಮುಗಲಭೆ ಪ್ರಚೋಧನೆಯಾಗುತ್ತಿದೆ. ಇದರ ಸತ್ಯಾಸತ್ಯತೆ ತಿಳಿಯದೆ ಹಳ್ಳಿಗಳಲ್ಲಿ ಒಂದು ಸಮುದಾಯದ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಲಾಗುತ್ತಿದೆ. ಇನ್ನು ಆ ಸಮುದಾಯದ ವ್ಯಾಪಾರಿಗಳ ಜತೆ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದಾರೆ.

ಹಾಗಾಗಿ ಕೊರೋನಾ ವೈರಸ್ ಗಿಂತ ಒಂದು ಸಮುದಾಯದ ವಿರುದ್ಧ ಪಿತೂರಿ ಮಾಡುತ್ತಿರುವುದು ಹಾಗೂ ಅವುಗಳನ್ನು ಹರಿದಾಡಿಸುತ್ತಿರುವವರ ಮನಸ್ಥಿತಿ ಸುಮಾಜಕ್ಕೆ ಮಾರಕ.

Leave a Reply