ಧರ್ಮ ಸಂಕಟದಲ್ಲಿ ಸಿಎಂ ಯಡಿಯೂರಪ್ಪ!

ಡಿಜಿಟಲ್ ಕನ್ನಡ ಟೀಮ್:

ಕೊರೋನಾ ಹಾಗೂ ಮುಸ್ಲಿಂ ಸಮುದಾಯದ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಜವಾಬ್ದಾರಿಯುತವಾಗಿ ಹೇಳಿಕೆ ನೀಡಿದ್ದು, ಇದು ಈಗ ಅವರನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದೆ.

ಕೊರೋನಾ ಸೋಂಕು ಹೆಚ್ಚಳಕ್ಕೆ ದೆಹಲಿ ನಿಜಾಮುದ್ದೀನ್ ಸಭೆಯೇ ಕಾರಣ ಇದನ್ನೇ ಅಸ್ತ್ರವಾಗಿತ್ತುಕೊಂಡು ಮುಸ್ಲಿಂ ಸಮುದಾಯದ ಮೇಲೆ ಪ್ರಹಾರ ನಡೆಸಲು ಮುಂದಾಗಿದ್ದ ಬಿಜೆಪಿಯ ಕಟ್ಟರ್ ಹಿಂದೂವಾದಿ ನಾಯಕರಿಗೆ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ನುಂಗಲಾರದ ತುತ್ತಾಗಿದೆ.

ಯಡಿಯೂರಪ್ಪ ಅವರ ಹೇಳಿಕೆಯನ್ನು ವಿರೋಧ ಪಕ್ಷಗಳ ನಾಯಕರು ಸ್ವಾಗತಿಸಿದರೆ, ಸ್ವತಃ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೆಹಲಿಯ ತಬ್ಲಿಘಿ ಪ್ರಕರಣದ ಬಳಿಕ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಆಯ್ತು ಎನ್ನುವುದು ಸರಿಯಷ್ಟೆ. ವೈದ್ಯಕೀಯ ತಪಾಸಣೆಗೂ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎನ್ನುವ ಮಾತುಗಳು ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಆಶಾ ಕಾರ್ಯಕರ್ತೆ ಮೇಲಿನ ಹಲ್ಲೆಗೂ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಅದೊಂದೇ ಕಾರಣದಿಂದ ಮುಸ್ಲಿಂ ಸಮುದಾಯವನ್ನು ಟೀಕೆ ಮಾಡುವುದು ಸರಿಯಲ್ಲ. ಯಾವುದೋ ಒಂದೆರಡು ಅಹಿತಕರ ಘಟನೆಗಳ ಮೇಲೆ ಇಡೀ ಮುಸ್ಲಿಂ ಸಮುದಾಯವನ್ನೇ ಅಪರಾಧಿಗಳು ಎಂಬಂತೆ ನೋಡುವುದು ತಪ್ಪು. ಮುಸ್ಲಿಂ ಬಾಂಧವರ ಕುರಿತು ಯಾರೇ ಹಗುರವಾಗಿ ಮಾತನಾಡಿದರು ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಸಂದರ್ಶನ ಒಂದರಲ್ಲಿ ತಿಳಿಸಿದ್ದರು. ಇದರಿಂದ ಆಕ್ರೋಶಗೊಂದ ಬಿಜೆಪಿ ಟ್ವೀಟ್‌ವಾರ್ ನಡೆಸಿದೆ.

ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಕೊರೊನಾ ಹಬ್ಬಿಸುವ ಮತಾಂಧರಿಗೆ ಕಾನೂನು ಕ್ರಮದ ಎಚ್ಚರಿಕೆ ಕೊಡಬೇಕಾಗಿತ್ತು. ಅವರನ್ನು ಸಮರ್ಥಿಸುವ ಮಾನವೀಯತೆ ಇರದ ಧಾರ್ಮಿಕ ರಾಜಕೀಯ ನಾಯಕರಿಗೆ ಹೊರತು ದೇಶಭಕ್ತ ಸಮುದಾಯಗಳಿಗೆ ಅಲ್ಲ. ತಬ್ಲೀಘ್ ಜಮಾತ್ ಜೀಹಾದಿಗಳಿಗೆ ಅಂತಿಮ ಎಚ್ಚರಿಕೆ ಕೊಡಿ, ಸಹಕರಿಸದಿದ್ದರೆ ಗುಂಡಿಕ್ಕಿ. ನಿಮಗೆ ಇದು ಪ್ರಚೋದನೆ ಎನಿಸಿದರೆ ನನ್ನ ಮೇಲೆ ಕ್ರಮ ಕೈಗೊಳ್ಳಿ ಎಂದು ಟ್ವೀಟ್ ಮಾಡಿ ಕೈ ಮುಗಿದ ಸಂಜ್ಞೆ ಹಾಕಿ ಭಗವಾ ಧ್ವಜ ಹಾಕಿದ್ದರು. ರೇಣುಕಾಚಾರ್ಯ, ಶೋಭಾ ಕರಂದ್ಲಾಜೆ ಕೂಡ ಮುಸ್ಲಿಮರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ತಬ್ಲಿಘಿಗಳನ್ನು ಗುಂಡಿಟ್ಟು ಕೊಲ್ಲಬೇಕು ಎಂದಿದ್ದ ರೇಣುಕಾಚಾರ್ಯ ,ಯತ್ನಾಳ್ ಮಾತಿಗೆ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಸಮರ್ಥನೆ ಮಾತನಾಡಿದ್ದಾರೆ. ತಬ್ಲಿಘಿಗೆ ಹೋಗಿ ಬಂದವರು, ಸರಿಯಾದ ಮಾಹಿತಿ ಕೊಡಬೇಕು. ಅವರಿಂದ ಸಾಕಷ್ಟು ಸೋಂಕು ಹೆಚ್ಚಿದೆ. ಅವರು ಮಾಡುತ್ತಿರುವುದು ತಪ್ಪು ಎಂದು ಕಂಡು ಬಂದಿದೆ. ಹಾಗಾಗಿ ಜನಪ್ರತಿನಿಧಿಗಳು ಆ ರೀತಿ ಹೇಳಿಕೆ ಕೊಟ್ಟಿದ್ದಾರೆ ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ಕೊಟ್ಟವರ ಪರವಾಗಿ ಪರೋಕ್ಷವಾಗಿ ಮಾತನಾಡಿದ್ದಾರೆ. ಟ್ವಿಟರ್‌ನಲ್ಲಿ ಬಿಎಸ್‌ ಯಡಿಯೂರಪ್ಪ ವಿರುದ್ಧ ಹ್ಯಾಷ್‌ಟ್ಯಾಗ್ ವಾರ್ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಒಟ್ಟಾರೆ, ದ್ವೇಷ ಭಾವನೆಯಿಂದ ಕೊರೊನಾ ತಡೆಯಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಕೊಟ್ಟ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ಬಗ್ಗೆ ಬಿಜೆಪಿ ವಲಯದಲ್ಲೇ ಆಕ್ರೋಶ ವ್ಯಕ್ತವಾಗಿದೆ.

Leave a Reply