ಧಾರವಾಡ ಬೆಚ್ಚಿ ಬೀಳಿಸಿದ 49 ಸೋಂಕಿನ ಲಕ್ಷಣ..!?

ಡಿಜಿಟಲ್ ಕನ್ನಡ ಟೀಮ್:

ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 7 ಸಾವಿರ ಗಡಿಯಲ್ಲಿ ಸಮೀಪದಲ್ಲಿದೆ. ಸಾವನ್ನಪ್ಪಿದವರ ಸಂಖ್ಯೆ 206 ಜನರಾಗಿದ್ದು, ಕೊರೊನಾದಿಂದ ಚೇತರಿಸಿಕೊಂಡ ರೋಗಿಗಳ ಸಂಖ್ಯೆ 515 ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಯಲ್ಲಿ 896 ಪ್ರಕರಣಗಳು ಪತ್ತೆಯಾಗಿವೆ, 37 ಜನರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿರುವುದು ಬೆಚ್ಚಿ ಬೀಳುವಂತಿದೆ.

ಆದರೆ ಕರ್ನಾಟಕ ರಾಜ್ಯ ಸದ್ಯ ರೆಡ್​ ಝೋನ್​ನಲ್ಲಿಲ್ಲ ಎಂದು ಸಮಾಧಾನಕರ ಮಾತನಾಡಿದ್ದಾರೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್. ಕೊರೊನಾ ನಿಯಂತ್ರಣಕ್ಕೆ ಇನ್ನೂ 3 ವಾರಗಳ ಕಾಲ ಬೇಕು. ಮುಂದಿನ ವಾರ 10 ಲಕ್ಷ PPE ಕಿಟ್​ ಬರಲಿವೆ. ಸರ್ಜಿಕಲ್ ಮಾಸ್ಕ್ ವೈದ್ಯಕೀಯ ಸಿಬ್ಬಂದಿಗೆ ಬಿಟ್ಟು, ಸಾರ್ವಜನಿಕರಿಗೆ ಸಾಮಾನ್ಯ ಮಾಸ್ಕ್ ಹಾಕಿಕೊಳ್ಳಿ ಸಾಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಲಾಕ್​ಡೌನ್, ಸಾಮಾಜಿಕ ಅಂತರವೇ ಕೊರೊನಾಗೆ ಇರುವ ಏಕೈಕ ಮದ್ದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪ್ರತಿಪಾದಿಸಿದ್ದಾರೆ.

ಕೊರೊನಾ ವೈರಸ್ ಹರಡುವ ಭೀತಿ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಬಳಿಕ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವರದಿ ಕೇಳಿದೆ. ಮಾನಸಿಕ ಅಸ್ವಸ್ಥರು ಹಾಗೂ ಬೀದಿ ಬೀದಿ ತಿರುಗುತ್ತಿದ್ದ ವ್ಯಕ್ತಿಗಳ ಬಗ್ಗೆ ಲಾಕ್​ಡೌನ್​ ವೇಳೆ ಯಾವ ಕ್ರಮ ತೆಗೆದುಕೊಂಡಿದ್ದಿರಿ. ರಾಜ್ಯ ಸರ್ಕಾರಗಳಿಗೆ ಯಾವ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೀರಿ. ಮಾನಸಿಕ ಅಸ್ವಸ್ಥರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ ಅಲ್ಲವೇ..? ಈ ಬಗ್ಗೆ ಜಾಗೃತೆ ವಹಿಸಿದ್ದೀರಾ..? ಎಂದೆಲ್ಲಾ ಪ್ರಶ್ನೆ ಮಾಡಿದ್ದು, ಸಮಗ್ರ ವರದಿ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೂಚನೆ ಕೊಟ್ಟಿದೆ.

ಇನ್ನು ಕೇಂದ್ರ ಆರೋಗ್ಯ ಸಚಿವರ ಮಾಹಿತಿಯಂತೆ ಭಾರತಕ್ಕೆ ಇನ್ನೂ ಕೂಡ ಱಪಿಡ್​ ಆ್ಯಂಟಿಬಾಡಿ ಟೆಸ್ಟ್ ಕಿಟ್ ಬಂದಿಲ್ಲ. ಲಾಕ್ ಡೌನ್ ಮುಂದುವರಿಸುವ ಬಗ್ಗೆ ಪ್ರಧಾನಿ ನಿರ್ಧರಿಸಲಿದ್ದಾರೆ. ಶನಿವಾರ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ನಡೆಯುವ ಚರ್ಚೆಯ ಬಳಿಕಅಂತಿಮ ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ. ವೈದ್ಯಕೀಯ ಸಾಮಗ್ರಿ ಖರೀದಿಗೆ 4 ಸಾವಿರದ 100 ಕೋಟಿ ರೂಪಾಯಿ ‌ಕೊಡಲಾಗಿದೆ ಎಂದಿಉ ತಿಳಿಸಿದ್ದಾರೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​.

ಆದರೆ ಧಾರವಾಡದಲ್ಲಿ ಒಂದೇ ದಿನ 49 ಜನರಲ್ಲಿ ಕೊರೊನಾ ಸೋಂಕಿನ ಗುಣಲಕ್ಷ್ಮಣ ಪತ್ತೆಯಾಗಿರುವುದು ಅವಳಿ ನಗರ ಜನರ ನಿದ್ದೆಗಡಿಸಿದೆ. ಕಳೆದ 24 ಗಂಟೆ ಅವಧಿಯಲ್ಲಿ 49 ಜನರಲ್ಲಿ ಕೊರೊನಾ ಸೋಂಕಿನ ಗುಣಲಕ್ಷಣ ಪತ್ತೆಯಾಗಿದ್ದು, ಶಂಕಿತರ ಕಫದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.
ಅದರಲ್ಲಿ 7 ಜನರಿಗೆ ಆಸ್ಪತ್ರೆಯಲ್ಲಿ ಐಸೊಲೇಷನ್ ಮಾಡಲಾಗಿದೆ. ಗುರುವಾರ ಹುಬ್ಬಳ್ಳಿ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಕೊರೊನಾ ಪಾಸಿಟಿವ್ ಬಂದ ಬೆನ್ನಲ್ಲೆ ಇದೀಗ 49 ಜನರಲ್ಲಿ ಸೋಂಕಿನ ಗುಣಲಕ್ಷಣ ಪತ್ತೆಯಾಗಿರುವುದು ಜನರಲ್ಲಿ ಆತಂಕ ಉಂಟುಮಾಡಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 824 ಜನರ ಮೇಲೆ‌ ನಿಗಾ ವಹಿಸಲಾಗಿದೆ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಸರ್ಕಾರ ಕೊರೊನಾ ಸೋಂಕು ತಡೆಯಲು ಏನೆಲ್ಲಾ ಕಸರತ್ತು ಮಾಡಿದರೂ ಸೋಂಕು ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನುವುದು ಮಾತ್ರ ಸತ್ಯ.

Leave a Reply