ಎಲ್ಲೋದ್ರಪ್ಪಾ ನಮ್ಮೂರಿನ ಸ್ವಾಭಿಮಾನಿ ಸಂಸದೆ ಅಂತಿದ್ದಾರೆ ಮಂಡ್ಯ ಜನ!

ಡಿಜಿಟಲ್ ಕನ್ನಡ ಟೀಮ್:

ಕೊರೋನಾ ಲಾಕ್ ಡೌನ್ ಎಫೆಕ್ಟ್ ರಾಜ್ಯದ ರೈತರನ್ನು ಹಾಳು ಬಾವಿಗೆ ನೂಕಿದಂತಾಗಿದೆ. ಕೈಗೆ ಬಂದ ಬೆಳೆಗೆ ಬೆಲೆ ಇಲ್ಲ. ಬೆಲೆ ಇರಲಿ ಅದನ್ನು ಮಾರುಕಟ್ಟೆಗೆ ಸಾಗಿಸಲಾಗದೆ ರೈತರು ಕಂಗಾಲಾಗಿ ಕೈಗೆ ಬಂದ ತುತ್ತನ್ನು ನೆಲಕ್ಕೆ ಚೆಲ್ಲುವಂತಾಗಿದೆ.

ಇಡೀ ರಾಜ್ಯದ ಪ್ರತಿ ಜಿಲ್ಲೆಯ ರೈತನ ಪರಿಸ್ಥಿತಿಯೂ ಇದೇ ಆಗಿದೆ. ರೈತನ ನೆರವಿಗೆ ಬರಬೇಕಾದ ಸರ್ಕಾರ ಬಾಯಲ್ಲಿ ಸಮರೋಪಾದಿ ಕಾರ್ಯ ಎಂದು ಹೇಳುತ್ತಿದ್ದರೂ ವಾಸ್ತವವಾಗಿ ನಡೆಯುತ್ತಿರೋದು ಆಮೆ ವೇಗದಲ್ಲಿ.

ಈ ಪರಿಸ್ಥಿತಿಯಲ್ಲಿ ಮಂಡ್ಯ ರೈತರ ನೆರವಿಗೆ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಧಾವಿಸಿದ್ದಾರೆ. ಮಂಡ್ಯದ ಪಾಂಡವಪುರ, ನಾಗಮಂಗಲ, ಕೆ.ಆರ್.ಪೇಟೆಯಲ್ಲಿ ಜಮೀನಿಗೆ ಭೇಟಿ ನೀಡಿ ತಮ್ಮ ಟ್ರಸ್ಟ್ ವತಿಯಿಂದ ರೈತರ ಬೆಳೆ ಖರೀದಿಸಿ ಅದನ್ನು ಜನರಿಗೆ ಉಚಿತವಾಗಿ ಹಂಚುತ್ತಿದ್ದಾರೆ.

ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಹಣೆಪಟ್ಟಿ ಕಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಸಿದ್ದ ಸುಮಲತಾ ಅಂಬರೀಶ್ ಅವರನ್ನು ಮಂಡ್ಯ ಜನತೆ ಪಲ್ಲಕ್ಕಿ ಮೇಲೆ ಕೂರಿಸಿಕೊಂಡು ಜಯದ ಯಾತ್ರೆ ಮಾಡಿದ್ದರು. ಆದರೆ ಈಗ ಅದೇ ಜನರ ಸಂಕಷ್ಟದ ಸಮಯದಲ್ಲಿರುವಾಗ ಸುಮಲತಾ ಅವರು ಎಲ್ಲಿದ್ದಾರೆ ಎಂದು ಮತದಾರ ಹುಡುಕುವ ಪರಿಸ್ಥಿತಿ ಬಂದಿದೆ.

ಡಿಕೆ ಸುರೇಶ್ ಅವರು ಕೇವಲ ತಮ್ಮ ಕ್ಷೇತ್ರ ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ರೈತರಿಗೆ ನೆರವಾಗಿಲ್ಲ. ಬದಲಿಗೆ ಪಕ್ಕದ ಮಂಡ್ಯದ ರೈತರಿಗೂ ನೇರವಾಗಿ, ಇತರೆ ನಾಯಕರಿಗೆ ಮಾದರಿಯಾಗಿದ್ದಾರೆ.

ಸುರೇಶ್ ಅವರು ರೈತ ರಾಮೇಗೌಡ ಬೆಳೆದಿದ್ದ ಕುಂಬಳಕಾಯಿ ಮತ್ತು ಟೊಮ್ಯಾಟೋ ಬೆಳೆಯನ್ನು ಖರೀದಿಸಿ ಯಾವುದೇ ರೈತರು ಬೆಳೆ ನಾಶ ಮಾಡದಿರುವಂತೆ ಜಿಲ್ಲೆಯ ರೈತರಲ್ಲಿ ಮನವಿ ಮಾಡಿದರು. ಸಂಸದ ಸುರೇಶ್​ ಕೆಲಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೊನಾ ಲಾಕ್​ಡೌನ್​ ಆದ ಬಳಿಕ ಮಂಡ್ಯ ಜಿಲ್ಲೆಯ ನೂರಾರು ರೈತರು ಬೆಳೆ ನಾಶ ಮಾಡಿದ್ದಾರೆ. ಮಾಧ್ಯಮಗಳಲ್ಲೂ ಸುದ್ದಿ ಬಿತ್ತರವಾಗಿದೆ. ಆದರೆ ಸಂಸದೆ ಸುಮಲತಾ ಈ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಒಂದೆರಡು ಬಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿರುವುದು ಬಿಟ್ಟರೆ, ಸಂಸದೆ ಸುಮಲತಾ ಮಂಡ್ಯಕ್ಕೆ ಆಗಮಿಸಿಲ್ಲ. ಮಂಡ್ಯ ಕ್ಷೇತ್ರದ ಸಂಸದರಾದರೂ ಬೆಂಗಳೂರಿನಲ್ಲಿ ವಾಸ ಮಾಡುವ ಸುಮಲತಾ ಅವರಿಗೆ ಬಡವರ ನೋವು ಎಲ್ಲಿಂದ ಅರ್ಥವಾಗಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply