ಕೊರೊನಾ ನಡುವೆ ಸಚಿವರ ಕಿತ್ತಾಟ ಮಾಡ್ಕೊಂಡಿದ್ದು ಯಾಕೆ..?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಒಂದು ದಿನಕ್ಕೆ ಹತ್ತು ಹದಿನೈದು ಪ್ರಕರಣ ಪತ್ತೆಯಾಗುವುದೇ ದೊಡ್ಡದು ಎನ್ನುತ್ತಿದ್ದಾಗ ಬರೋಬ್ಬರಿ 36 ಪ್ರಕರಣಗಳು ಕರ್ನಾಟಕವನ್ನು ಅಪ್ಪಳಿಸಿದೆ. ಅದರಲ್ಲೂ ಬೆಂಗಳೂರಿನಲ್ಲಿ 76 ಸೋಂಕು ಪತ್ತೆಯಾಗಿದ್ದರೆ, ಮೈಸೂರಿನಲ್ಲಿ 61 ಸೋಂಕಿತರು ಪತ್ತೆಯಾಗಿದ್ದಾರೆ. ಮೈಸೂರಿನಲ್ಲಿ ಜನರು ಭಯಭೀತಗೊಂಡಿದ್ದಾರೆ. ಹೇಗೆ ಬದುಕುವುದು ಸೋಂಕಿನಿಂದ ಬಚಾವ್​ ಆಗುವುದು ಹೇಗೆ ಎಂದು ಕಂಗಾಲಾಗಿದ್ದಾರೆ. ಆದರೆ ಮೈಸೂರಿನ ಜನರಿಗೆ ಧೈರ್ಯ ತುಂಬಬೇಕಿದ್ದ ಉಸ್ತುವಾರಿ ಸಚಿವರು ಮಾತ್ರ ಸಹ ಸಚಿವರ ಜೊತೆ ಕಿತ್ತಾಡುವಲ್ಲಿ ನಿರತರಾಗಿದ್ದಾರೆ.

ಎಸ್​.ಟಿ ಸೋಮಶೇಖರ್​ ಹಾಗೂ ರೇಷ್ಮೆ ಸಚಿವ ನಾರಾಯಣಗೌಡ ಗುರುವಾರ ನಡೆದ ಸಚಿವರ ಸಭೆಯಲ್ಲಿ ಮಾರಾಮಾರಿ ನಡೆದಿದೆ. ವಿಕಾಸಸೌಧದಲ್ಲಿ ನಡೆದ ಸಚಿವರ ಸಭೆಯಲ್ಲಿ ಇಬ್ಬರು ಸಚಿವರು ಮಾತಿನ ಸಮರವನ್ನೇ ನಡೆಸಿದ್ದಾರೆ. ಏರು ಧ್ವನಿಯಲ್ಲಿ ಕಿತ್ತಾಡಿಕೊಂಡ ಇಬ್ಬರು ಸಚಿವರು, ಏಕ ವಚನದಲ್ಲಿ ಕಿತ್ತಾಡಿಕೊಂಡಿದ್ದಾರೆ. ರೇಷ್ಮೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎನ್ನುವ ಕಾರಣಕ್ಕೆ ನಾರಾಯಣಗೌಡ ಎಸ್​.ಟಿ ಸೋಮಶೇಖರ್​ ವಿರುದ್ಧ ಕಿಡಿಕಾರಿದ್ದಾರೆ. ಲಾಕ್​ಡೌನ್ ವಿಚಾರದಲ್ಲಿ ಕೃಷಿ, ತೋಟಗಾರಿಕೆ ಉತ್ಪನ್ನಗಳ ಸುಗಮ ಸಾಗಾಟ ಸಂಬಂಧ ನಡೆಯುತ್ತಿದ್ದ ಸಭೆಯಲ್ಲಿ ಕಿತ್ತಾಟದ ಪ್ರಸಂಗ ನಡೆದಿದ್ದು, ಹೋಗೋ, ಬಾರೋ ಎಂದು ಕಿತ್ತಾಡಿದ್ದಾರೆ. ನನ್ನ ಇಲಾಖೆಯಲ್ಲಿ ನೀನು ಹಸ್ತಕ್ಷೇಪ ಮಾಡಬೇಡವೆಂದು ನಾರಾಯಣಗೌಡ ಎಚ್ಚರಿಕೆ ಕೊಟ್ಟಿದ್ದಾರೆ. ನಾನು ಸಹಕಾರ ಸಚಿವ. ನನಗೆ ಕೃಷಿ ಉತ್ಪನ್ನಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿದೆ ಎಂದು ಎಸ್​.ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ.

ಆಪರೇಷನ್​ ಕಮಲದಲ್ಲಿ ಜೆಡಿಎಸ್​ ಕಾಂಗ್ರೆಸ್​ನಿಂದ ಬಂದಿದ್ದ ನಾರಾಯಣಗೌಡ ಹಾಗೂ ಎಸ್​.ಟಿ ಸೋಮಶೇಖರ್​ ಅವರ ಜಗಳವನ್ನು ಇತರೆ ಸಚಿವರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು. ಆದರೆ ಈ ಇಬ್ಬರು ಶಾಸಕರನ್ನು ಆಪರೇಷನ್​ ಕಮಲದ ಮೂಲಕ ಬಿಜೆಪಿಗೆ ಕರೆತರುವಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಇಂದಿನ ಡಿಸಿಎಂ ಅಶ್ವತ್ಥನಾರಾಯಣ ಮಾತ್ರ ಇಬ್ಬರನ್ನು ಸಮಧಾನ ಮಾಡಲು ಹರಸಾಹಸ ಮಾಡುತ್ತಿದ್ದಂತೆ. ಸಚಿವರ ನಡುವೆ ಕರೋನಾ ಕಿತ್ತಾಟ ಜೋರಾಗುತ್ತಿದ್ದಂತೆ ವಿಕಾಸಸೌಧದ ಸಿಬ್ಬಂದಿ ಸಭಾಂಗಣದ ಬಾಗಿಲು ಮುಚ್ಚಿದ್ದಾರೆ. ಸಭೆ ಬಳಿಕ ಸಭೆಯಲ್ಲಿ ಸಚಿವ ಗಲಾಟೆ ಬಗ್ಗೆ ಮಾತನಾಡಿದ ಅಶ್ವತ್ಥ ನಾರಾಯಣ, ಅಂತದ್ದು ಏನು ಆಗಿಲ್ಲ ಎಂದು ತೇಪೆ ಹಾಕುವ ಯತ್ನ ನಡೆಸಿದ್ದಾರೆ. ಆದ್ರೆ ಮಧ್ಯಪ್ರವೇಶ ಮಾಡಿರುವ ಎಸ್​.ಟಿ ಸೋಮಶೇಖರ್ ಇದೆಲ್ಲಾ ಸಣ್ಣ ಪುಟ್ಟ ಆಂತರಿಕ ವಿಚಾರ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಸಣ್ಣ ಪುಟ್ಟ ಸಮಸ್ಯೆಗಳು ಎಲ್ಲದರಲ್ಲೂ ಇರತ್ತೆ ಬಿಡಿ ಎಂದ ಡಾ. ಅಶ್ವತ್ ನಾರಾಯಣ್ ಫುಲ್​ ಸ್ಟಾಪ್​ ಇಟ್ಟಿದ್ದಾರೆ. ಒಟ್ಟಾರೆ ಕೊರೊನಾ ಸಂಕಷ್ಟದ ನಡುವೆ ಹಸ್ತಕ್ಷೇಪ ವಿಚಾರದಲ್ಲಿ ಎರಡು ಇಲಾಖೆಯ ಸಚಿವರು ಕಿತ್ತಾಡಿರುವುದು ರಾಜ್ಯದ ದುರ್ದೈವವೇ ಸರಿ.

Leave a Reply