ಪ್ರಧಾನಿ ಮೋದಿ ಲಾಕ್ ಡೌನ್ ಅನ್ನು ಬಿಜೆಪಿಯೇ ಅಣಕಿಸುತ್ತಿದೆ!

ಡಿಜಿಟಲ್ ಕನ್ನಡ ಟೀಮ್:

ಲಾಕ್​ಡೌನ್​ ಮಾಡುವುದು ಕೊರೊನಾ ವೈರಸ್​ ತಡೆಯುವ ಏಕೈಕ ಮಾರ್ಗ ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಮಾತು. ಆದ್ರೆ ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯ ನಿರ್ಧಾರವನ್ನು ಅಣಕಿಸಲು ಶುರು ಮಾಡಿದೆ.

ಮಾನ್ಯ ಮುಖ್ಯಮಂತ್ರಿಗಳು ಲಾಕ್ ಡೌನ್ ಸಡಿಲಕ್ಕೆ ಮುಂದಾಗಿ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಯೂಟರ್ನ್ ಹೊಡೆದರೆ, ರಾಜ್ಯ ಸರ್ಕಾರದ ಭಾಗವಾಗಿರುವ ಸಚಿವರೇ ಮೋದಿಯ ಮಾತನ್ನು ಅಣಕಿಸುವ ಕೆಲಸ ಮಾಡಿದ್ದಾರೆ.

ಗಣಿ ನಾಡು ಬಳ್ಳಾರಿಯನ್ನೂ ಆಳುವ ಜಿದ್ದಾಜಿದ್ದಿಗೆ ಬಿದ್ದಿರುವ ಸಚಿವ ಆನಂದ್​ ಸಿಂಗ್​, ಇದೀಗ ಬಳ್ಳಾರಿಯಲ್ಲಿ ದೊರೆಯಾಗಿ ಮೆರೆದಾಡುತ್ತಿದ್ದಾರೆ. ಬಳ್ಳಾರಿ ಎಂದರೆ ನಾನೇ ಎನ್ನುತ್ತಿದ್ದ ಜನಾರ್ದನ ರೆಡ್ಡಿ ಬಳ್ಳಾರಿಗೆ ಹೋಗುವಂತಿಲ್ಲ. ರೆಡ್ಡಿಯ ಆಪ್ತ ಮಿತ್ರ ಶ್ರೀರಾಮುಲು ಚಿತ್ರದುರ್ಗದ ಮೊಣಕಾಲ್ಮೂರು ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಿದ್ದು, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಹಾಗಾಗಿ ಬಳ್ಳಾರಿ ಜಿಲ್ಲೆಯಲ್ಲಿ ರಾಜಕೀಯ ಪ್ರಭಾವ ಕುಗ್ಗಿದೆ. ಇದೀಗ ಇಬ್ಬರ ನಡುವಿನ ಪೈಪೋಟಿ ಮೋದಿ ಮಾತಿಗೆ ವಿರುದ್ಧವಾಗಿದೆ.

ಬಳ್ಳಾರಿ ಹೊಸಪೇಟೆ ಸಚಿವ ಆನಂದ್​ ಸಿಂಗ್​ ಅವರ ಸ್ವಕ್ಷೇತ್ರ. ಇಲ್ಲಿ ಆಹಾರ ಕಿಟ್ ವಿತರಿಸುತ್ತಿರುವಾಗ ಜನ ಆಹಾರ ಸಾಮಗ್ರಿ ಕಿಟ್​ ಪಡೆಯಲು ಮುಗಿಬಿದ್ದಿದ್ದರು. ‘ಆಹಾರಾನಂದ’ ಹೆಸರಲ್ಲಿ ನಡೆದ ಬೃಹತ್​ ಕಾರ್ಯಕ್ರಮದಲ್ಲಿ ಸಾವಿರಾರು ಬಿಪಿಎಲ್​ ಕಾರ್ಡ್​​ದಾರರು ಒಂದು ಸಾವಿರ ರೂಪಾಯಿ ಮೌಲ್ಯದ ಆಹಾರ ಕಿಟ್​ ಪಡೆದುಕೊಂಡಿದ್ದಾರೆ. ಬೆಳಗ್ಗೆ 5 ಗಂಟೆಯಿಂದ ಕ್ಯೂನಲ್ಲಿ ಜನ ನಿಂತಿದ್ದ ಜನರು ಸಾಮಾಜಿಕ ಅಂತರವನ್ನೂ ಪಾಲಿಸಲಿಲ್ಲ. ಮಾಸ್ಕ್​ ಕೂಡ ಹಾಕಿರಲಿಲ್ಲ.

ಮತ್ತೊಂದು ಕಡೆ ಆರೋಗ್ಯ ಸಚಿವ ಶ್ರೀರಾಮುಲು ಕೂಡ ಬಳ್ಳಾರಿಯಲ್ಲಿ ಆಹಾರದ ಕಿಟ್​ ವಿತರಿಸಿದ್ದರು. ಈ ಕಾರ್ಯಕ್ರಮದಲ್ಲಿ ಜನ ಜಂಗುಳಿಯೇ ಸೇರಿತ್ತು. ಬಳ್ಳಾರಿಯ ರೂಪನಗುಡಿ ರಸ್ತೆಯಲ್ಲಿ ಉಚಿತ ದಿನಸಿ ವಿತರಣೆ ಕಾರ್ಯಕ್ರಮದಲ್ಲಿ ಜನರು ಮುಗಿ ಬಿದ್ದಿದ್ರು. ಆರೋಗ್ಯ ಸಚಿವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲೇ ಸಾಮಾಜಿಕ ಅಂತರ ಬಹಳ ಅಂತರ ಪಡೆದುಕೊಂಡಿತ್ತು. ಮಾಸ್ಕ್ ಕೂಡಾ ಧರಿಸದ ಬಳ್ಳಾರಿಯ ಜನರು ಕ್ಯೂನಲ್ಲಿ ಸಾಲುಗಟ್ಟಿ ನಿಂತಿದ್ದರು. ಆರೋಗ್ಯ ಸಚಿವರು ತಮ್ಮದೇ ಕಾರ್ಯಕ್ರಮದಲ್ಲೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ರಾಜ್ಯಕ್ಕೆಲ್ಲಾ ನೀತಿ ಹೇಳುತ್ತಾರೆ ಎನ್ನುವ ಮಾತುಗಳು ಕೇಳಿಬಂದವು.

ಒಟ್ಟಾರೆ ಬಳ್ಳಾರಿ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿರುವ ಎರಡು ಶಕ್ತಿಗಳಾದ ಶ್ರೀರಾಮುಲು ಹಾಗೂ ಆನಂದ್​ ಸಿಂಗ್​ ಉಚಿತ ಆಹಾರ ಸಾಮಗ್ರಿ ಹೆಸರಲ್ಲಿ ಜನಜಂಗುಳಿ ಮಾಡಿಕೊಂಡು ಸೋಷಿಯಲ್​ ಡಿಸ್ಟೆನ್ಸ್​ಗೆ ಕರೆ ಕೊಟ್ಟ ಮೋದಿಯನ್ನೇ ಅಣಕಿಸಿದಂತಿತ್ತು.

Leave a Reply