ಡಿಜಿಟಲ್ ಕನ್ನಡ ಟೀಮ್:
ಕೊರೊನಾ ಸೋಂಕಿನಿಂದ ರಾಜ್ಯ ದಿನದಿಂದ ಕಂಗಾಲಾಗುತ್ತಿದೆ. ಇಡೀ ದೇಶವೇ ಲಾಕ್ಡೌನ್ ಸಡಿಲಿಕೆ ಕೊಟ್ಟರೂ ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಸುವ ತಾಕತ್ತು ಪ್ರದರ್ಶನ ಮಾಡಲಾಗದ ಸ್ಥಿತಿ ಇದೆ. ಯಾಕಂದ್ರೆ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹರಡುತ್ತಲೇ ಇದೆ. ಬೆಂಗಳೂರು, ಮೈಸೂರಿನಲ್ಲಿ ಸ್ವಲ್ಪ ಸೋಂಕು ಕಡಿಮೆ ಆಗುತ್ತಿದೆ ಎಂದರೆ ಉತ್ತರ ಕರ್ನಾಟಕದ ವಿಜಯಪುರ ಹಾಗೂ ಬೆಳಗಾವಿಯಲ್ಲಿ ಸೋಂಕು ಹರಡುತ್ತಲೇ ಇದೆ. ಇದಕ್ಕೂ ಮೊದಲು ಕೊರೊನಾ ಸೋಂಕು ನಿಯಂತ್ರಣ ವಿಚಾರದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಇಬ್ಬರ ನಡುವಿನ ಕಿತ್ತಾಟ ಬೀದಿಗೆ ಬಂದಿತ್ತು. ಇಬ್ಬರ ನಡುವಿನ ಸಮನ್ವಯತೆ ದಿಕ್ಕು ತಪ್ಪುತ್ತಿದೆ ಎಂದಾಗ ಸಿಎಂ ಬಿಎಸ್ ಯಡಿಯೂರಪ್ಪ, ಕೊರೊನಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರನ್ನು ನೇಮಿಸಿದ್ದರು. ಆ ಬಳಿಕ ನಾರಾಯಣಗೌಡ ಹಾಗೂ ಎಸ್.ಟಿ ಸೋಮಶೇಖರ್ ಮಂತ್ರಿಗಳ ಸಭೆಯಲ್ಲಿ ಕಿತ್ತಾಡಿ ದೊಡ್ಡ ಸುದ್ದಿಯಾಗಿದ್ದರು. ನಿಮ್ಮ ಡಿಜಿಟಲ್ ಕನ್ನಡ “ಕೊರೊನಾ ನಡುವೆ ಸಚಿವರ ಕಿತ್ತಾಟ ಮಾಡ್ಕೊಂಡಿದ್ದು ಯಾಕೆ”..? ಎನ್ನುವ ಶೀರ್ಷಿಕೆ ಅಡಿ ಸುದ್ದಿ ವರದಿ ಮಾಡಿತ್ತು.
ಆ ಬಳಿಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಭಾನುವಾರ ಭೇಟಿ ಮಾಡಿದ್ದ ಕಾಂಗ್ರೆಸ್ ನಾಯಕರ ನಿಯೋಗ ಕಾಂಗ್ರೆಸ್ ಟಾಸ್ಕ್ಫೋರ್ಸ್ ಸಿದ್ಧಪಡಿಸಿದ್ದ ವರದಿಯನ್ನು ಸಿಎಂಗೆ ಹಸ್ತಾಂತರ ಮಾಡಿತ್ತು. ಆ ವೇಳೆ ಪ್ರಮುಖವಾಗಿ ಗಮನ ಸೆಳೆದ ವಿಚಾರ ಎಂದರೆ ಬಿಜೆಪಿ ಸರ್ಕಾರದಲ್ಲಿ ಸಮನ್ವಯತೆ ಕೊರತೆ ಇದೆ. ಕೋವಿಡ್ – 19 ರಾಜ್ಯದಲ್ಲಿ ನಿಯಂತ್ರಣಕ್ಕೆ ಪ್ರಮುಖವಾಗಿ ಬೇಕಾಗಿರುವುದು ಎಲ್ಲರೂ ಒಗ್ಗಟ್ಟಾಗಿ ಕಾಯಿಲೆ ವಿರುದ್ಧ ಹೋರಾಟ ಮಾಡಬೇಕು ಎಂದು ಒತ್ತಾಯ ಮಾಡಿದ್ದರು. ಅದೂ ಅಲ್ಲದೆ ನಾವೂ ಕೋಡ ಕೊರೊನಾ ವೈರಸ್ ವಿರುದ್ಧ ಈ ಹೋರಾಟದಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ. ಸರ್ಕಾರದ ಎಲ್ಲಾ ಒಳ್ಳೆಯ ನಿರ್ಧಾರಗಳನ್ನು ನಾವು ಬೆಂಬಲಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭಯ ಕೊಟ್ಟಿದ್ದರು. ಕಾಂಗ್ರೆಸ್ ಸಮನ್ವಯತೆ ಬಗ್ಗೆ ಸಿಎಂ ಬಳಿ ಮನವಿ ಮಾಡಿಕೊಂಡ ಮಾರನೇ ದಿನವೇ ಮತ್ತೆ ಕಿತ್ತಾಟ ನಡೆದಿದೆ.
ಭಾನುವಾರ ಸಂಜೆ ಪಾದರಾಯನಪುರದಲ್ಲಿ ಪೊಲೀಸರು, ಆಶಾ ಕಾರ್ಯಕರ್ತೆಯರು ಹಾಗೂ ಬಿಬಿಎಂಪಿ ಸಿಬ್ಬಂದಿ ಮೇಲೆ ಹಲ್ಲೆ ಯತ್ನ ನಡೆದಿತ್ತು. ಹೋ ಕ್ವಾರಂಟೈನ್ನಲ್ಲಿ ಇರಬೇಕಾದ 58 ಜನರನ್ನು ಕರೆದುಕೊಂಡು ಹೋಗಲು ಬಂದಿದ್ದಾಗ ಈ ಘಟನೆ ನಡೆದಿತ್ತು. ಆ ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೋಮವಾರ ಬೆಳಗ್ಗೆ ಪಾದರಾಯನಪುರಕ್ಕೆ ಭೇಟಿ ನೀಡಿ ಪರಿಸ್ಥಿತಿ ಬಗ್ಗೆ ಅವಲೋಕನೆ ನಡೆಸಿದ್ದರು. ಆ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾದ ಬಳಿಕ ಸಚಿವ ಸೋಮಣ್ಣ, ಬಸವರಾಜ ಬೊಮ್ಮಾಯಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ಮಾಡಿದ್ದಾರೆ. ಕಳೆದ 30 ವರ್ಷದಿಂದ ನಾನು ಆ ಕ್ಷೇತ್ರದಲ್ಲಿ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನಗೆ ಒಂದು ಮಾತನ್ನೂ ಹೇಳದೆ ಹೋಗಿದ್ದು ಯಾಕೆ ಎಂದು ಜಟಾಪಟಿ ನಡೆಸಿದ್ದಾರೆ. ಸೋಮಣ್ಣ ಮಾತಿಗೆ ತೀಕ್ಷ್ಣವಾಗಿಯೇ ತಿರುಗೇಟು ನೀಡರುವ ಬಸವರಾಜ ಬೊಮ್ಮಾಯಿ, ಈಗ ಹೇಳಿ ಕೇಳಿ ಹೋಗುವ ಸಮಯವಲ್ಲ. ನಾವು ರಾತ್ರಿಯೇ ಎಲ್ಲಾ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿರುಗೇಟು ನೀಡಿದ್ದಾರೆ. ಒಟ್ಟಾರೆ, ಸಚಿವ ಸಂಪುಟ ಸಭೆಯಲ್ಲೇ ಸಚಿವರ ಕಿತ್ತಾಟ ಕೊರೊನಾ ನಡುವೆ ಸಿಎಂ ತಲೆ ಗಿರ್ ಎನ್ನುವಂತೆ ಮಾಡಿದೆ.