ರಾಮನಗರಕ್ಕೆ ಕೊರೊನಾ ಪಾರ್ಸೆಲ್ ತಂದ ಬಿಎಸ್ ಯಡಿಯೂರಪ್ಪ ಸರ್ಕಾರ..!?

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ಕೊರೊನಾ ಅಟ್ಟಹಾಸ ಜೋರಾಗಿದ್ದರೂ ರೇಷ್ಮೆ ನಗರಿ ರಾಮನಗರ ಮಾತ್ರ ಕೊರೊನಾ ವೈರಸ್ ದಾಳಿಗೆ ತುತ್ತಾಗದೆ ತುಂಬಾ ಸುರಕ್ಷಿತ ಪ್ರದೇಶವಾಗಿತ್ತು. ಆದರೆ ಸರ್ಕಾರವೇ ಮುಂದೆ ನಿಂತು ಕೊರೊನಾ ವೈರಸ್ ಅನ್ನು ಬೆಂಗಳೂರಿನಿಂದ ರಾಮನಗರಕ್ಕೆ ಪಾರ್ಸೆಲ್ ತಂದಿರುವ ಘಟನೆ ಇದೀಗ ನಡೆದಿದೆ. ಈ ಮಾತು ಅಕ್ಷರಶಃ ಸತ್ಯ. ಯಾಕಂದ್ರೆ ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸರು ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ ಆರೋದಲ್ಲಿ ಸುಮಾರು 130 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಅದರಲ್ಲಿ ಮೊದಲು ಬಂಧನಕ್ಕೆ ಒಳಪಟ್ಟ 54 ಜನರನ್ನು ಬೆಂಗಳೂರು ಜೈಲಿನ ಬದಲು ರಾಮನಗರ ಜೈಲಿಗೆ ಸ್ಥಳಾಂತರ ಮಾಡುವ ನಿರ್ಧಾರ ಕೈಗೊಳ್ಳುವ ನಿರ್ಧಾರ ಪ್ರಕಟಿಸಲಾಗಿತ್ತು. ಈ ಮೂಲಕ ವೈರಸ್ ಹರಡುವುದಕ್ಕೆ ವೇದಿಕೆ ಕೊಟ್ಟಿತ್ತು.

ರಾಮನಗರ ಜೈಲಿನಲ್ಲಿ ನ್ಯಾಯಾಂಗ ಬಂಧನಕ್ಕೆ ಯೋಜನೆ ರೂಪಿಸಿದಾಗಲೇ ಸರ್ಕಾರ ಉದ್ದೇಶ ಕೊರೊನಾ ವೈರಸ್ ಸೋಂಕು ಇರಬಹುದು ಎಂಬುದಾಗಿತ್ತು. ಇದೀಗ ಸರ್ಕಾರದ ಅನುಮಾನ ಕೂಡ ನಿಜವಾಗಿದೆ. ಪಾದರಾಯನಪುರ ಗಲಾಟೆ ಕೇಸ್‌ನಲ್ಲಿ ಬಂಧನವಾಗಿ ರಾಮನಗರ ಜೈಲಿನಲ್ಲಿದ್ದ ಇಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇಬ್ಬರನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇಬ್ಬರು ಸೋಂಕಿತರ ಜೊತೆಗೆ ಮತ್ತೆ ಮೂವರಿಗೂ ಸೋಂಕು ಹರಡಿರುವ ಸಾಧ್ಯತೆ ಇದ್ದು, ರಾಮನಗರ ಜೈಲಿನ ಎಲ್ಲಾ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲು ನಿರ್ಧಾರ ಮಾಡಲಾಗಿದೆ.

ರಾಮನಗರ ನಗರಸಭೆ ಸಿಬ್ಬಂದಿಗಳು ಸಹ ಜೈಲಿಗೆ ಹೋಗಿ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿ ಬಂದಿದ್ದರು. ಇದೀಗ ಅವರನ್ನೂ ಕ್ವಾರಂಟೈನ್ ಮಾಡಲಾಗುತ್ತೆ ಎಂದಿದ್ದಾರೆ ಅಧಿಕಾರಿಗಳು. ಆದರೆ ಈ ಆರೋಪಿಗಳನ್ನು ಬಂದಿಸುವಾಗ ಯಾವೆಲ್ಲಾ ಪೊಲೀಸರು ಸಂಪರ್ಕಕ್ಕೆ‌ ಬಂದಿದ್ದರು, ಬಂಧನ ಮಾಡಿದ ಬಳಿಕ ಎಲ್ಲಾ ಆರೋಪಿಗಳು ಸೋಷಿಯಲ್ ಡಿಸ್ಟೆನ್ಸ್ ಮೇನ್‌ಟೈನ್ ಮಾಡಿದ್ರಾ ಎನ್ನುವ ಬಗ್ಗೆಯೂ ಅಧಿಕಾರಿಗಳು ಚಿಂತಿತರಾಗಿದ್ದಾರೆ. ಈ ನಡುವೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ರಾಮನಗರ ಜೈಲಿನಲ್ಲಿ ಇರಿಸಲಾಗಿರುವ ಕೈದಿಗಳನ್ನು ಸಕಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತಕ್ಷಣವೇ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ನಾಳೆಯಿಂದ ಉಗ್ರ ಪ್ರತಿಭಟನೆ ಮಾಡುತ್ತೇನೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಈ ಹಿಂದೆಯೇ ನಾನು ಈ ವಿಷಯವಾಗಿ ಸರ್ಕಾರದ ಗಮನ ಸೆಳೆದಿದ್ದೆ. ಆದರೂ ನಿರ್ಲಕ್ಷಿಸಿದ್ದರು. ಅದರ ಫಲವಾಗಿ ಇಂದು ರಾಮನಗರಕ್ಕೂ ಕೊರೊನಾ ವೈರಸ್ ವಕ್ಕರಿಸಿದೆ. ಪಾಸಿಟಿವ್ ಬಂದ ಇಬ್ಬರ ಜೊತೆಯಲ್ಲಿದ್ದ ಏಳೆಂಟು ಮಂದಿಯನ್ನು ಕ್ವಾರಂಟೈನ್‌ಗೆ ಕರೆದೊಯ್ಯಲಾಗಿದೆ. ಸರ್ಕಾರ ತಡಮಾಡದೆ ರಾಮನಗರ ಜೈಲಿನಲ್ಲಿರುವ ಕೈದಿಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕು ಸರ್ಕಾರದ ಅವಿವೇಕದ ನಿರ್ಧಾರದಿಂದಾಗಿ ರಾಮನಗರ ಜಿಲ್ಲೆಯ ಜನ ಭೀತಿಗೊಂಡಿದ್ದಾರೆ. ಇದನ್ನು ಇನ್ನೂ ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ರಾಜ್ಯದಲ್ಲಿ ಎಂಟು ಜಿಲ್ಲೆಗಳು ಮಾತ್ರ ಸೋಂಕು ಮುಕ್ತವಾಗಿವೆ. ಅವುಗಳಲ್ಲಿ ರಾಮನಗರವೂ ಒಂದು. ಇದೀಗ ಸರ್ಕಾರ ತೆಗೆದುಕೊಂಡ ಎಡವಟ್ಟು ನಿರ್ಧಾರದಿಂದ ರಾಮನಗರದಲ್ಲೂ ಸೋಂಕು ಹರಡುವ ಭೀತಿ ಎದುರಾಗಿದೆ. ಸ್ಥಳೀಯ ಶಾಸಕರು, ಮಾಜಿ ಮುಖ್ಯಮಂತ್ರಿ ಮಾತಿಗೆ ಹಾಲಿ ಮುಖ್ಯಮಂತ್ರಿ ಬೆಲೆ ಕೊಡ್ತಾರಾ ಕಾದು ನೋಡಬೇಕು.

Leave a Reply